ಸೋಮವಾರಪೇಟೆ,ಮಾ.5: ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿರುವ ನಾಡ ಕಚೇರಿಗೆ ಬೀಗ ಜಡಿಯುವದಷ್ಟೇ ಬಾಕಿ ಉಳಿದಿದೆ. ಕಳೆದ 15 ದಿನಗಳಿಂದ ಈ ಕಚೇರಿಗೆ ಒಬ್ಬನೇ ಒಬ್ಬ ಅಧಿಕಾರಿ ಆಗಮಿಸದೇ ಕಚೇರಿ ಖಾಲಿ ಹೊಡೆಯುತ್ತಿದೆ. ಕಂಪ್ಯೂಟರ್ ಆಪರೇಟರ್ ಮಾತ್ರ ಪ್ರತಿದಿನ ಕಚೇರಿಗೆ ಬಂದು ಸಂಜೆ ಬಾಗಿಲು ಹಾಕಿಕೊಂಡು ತೆರಳುತ್ತಿದ್ದು, ಸಾರ್ವಜನಿಕರ ಕೆಲಸ ಕಾರ್ಯಗಳು ಸ್ಥಗಿತಗೊಂಡಿವೆ.

ಭೌಗೋಳಿಕವಾಗಿ ಬೆಟ್ಟಗುಡ್ಡ ಗಳಿಂಡ ಕೂಡಿರುವ ಶಾಂತಳ್ಳಿ ಹೋಬಳಿ ವ್ಯಾಪ್ತಿಗೆ ತೋಳೂರುಶೆಟ್ಟಳ್ಳಿ, ಶಾಂತಳ್ಳಿ ಮತ್ತು ಬೆಟ್ಟದಳ್ಳಿ ಗ್ರಾಮ ಪಂಚಾಯಿತಿಗಳು ಒಳಪಡುತ್ತಿದ್ದು, ಕಂದಾಯ ಇಲಾಖೆಯ ಎಲ್ಲಾ ಕೆಲಸ ಕಾರ್ಯಗಳಿಗೆ ನಾಡಕಚೇರಿಗೆ ಪ್ರಮುಖ ಕೇಂದ್ರವಾಗಿದೆ.

ಆದರೆ ಕಳೆದ 15 ದಿನಗಳಿಂದ ಈ ನಾಡ ಕಚೇರಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಾಗುತ್ತಿಲ್ಲ. ದೂರದ ಗ್ರಾಮಗಳಿಂದ ಗದ್ದೆ, ತೋಟ ಕೆಲಸ ಬಿಟ್ಟು ಕಚೇರಿ ಕೆಲಸಕ್ಕೆ ಆಗಮಿಸುವ ಗ್ರಾಮಸ್ಥರು ಬೆಳಗ್ಗಿನಿಂದ ಸಂಜೆಯವರೆಗೂ ಕಚೇರಿ ಒಳಗೆ ಕುಳಿತು ಅಧಿಕಾರಿಗಳಿಗಾಗಿ ಬಾಗಿಲು ಕಾಯುವಂತಾಗಿದೆ.

ಇದರೊಂದಿಗೆ ಅಕ್ರಮ ಸಕ್ರಮಕ್ಕಾಗಿ ಫಾರಂ 57ರಡಿಯಲ್ಲಿ ಅರ್ಜಿ ಸಲ್ಲಿಸಲು ನೂರಾರು ರೈತರು ಕಾಯುತ್ತಿದ್ದಾರೆ. ಜಾತಿ/ಆದಾಯ ದೃಡೀಕರಣ, ಆರ್‍ಟಿಸಿ, ಕಡತಗಳ ವಿಲೇವಾರಿ, ಮ್ಯೂಟೇಷನ್, ಪೋಡಿ, ಹದ್ದುಬಸ್ತು, ದಾಖಲೆಗಳ ವರ್ಗಾವಣೆ, ತಿದ್ದುಪಡಿ, 11-ಇ ಅಡಿಯಲ್ಲಿ ಸಲ್ಲಿಸಿರುವ ಅರ್ಜಿಗಳ ಪ್ರಗತಿ ತಟಸ್ಥಗೊಂಡಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ.

ಇದರೊಂದಿಗೆ ಶಾಂತಳ್ಳಿ ವ್ಯಾಪ್ತಿಯಲ್ಲಿ ಮಳೆಹಾನಿ ಪರಿಹಾರ ನಿಜವಾದ ಫಲಾನುಭವಿಗಳಿಗೆ ಲಭ್ಯವಾಗಿಲ್ಲ. 280 ಇಂಚು ಮಳೆಯಾಗಿ ಶೇ.80ರಷ್ಟು ಕೃಷಿ ಹಾನಿಯಾಗಿದ್ದರೂ ಯಾರಿಗೂ ಪರಿಹಾರ ಬಂದಿಲ್ಲ. ಇದಕ್ಕೆ ಸ್ಥಳೀಯ ನಾಡಕಚೇರಿಯ ಅಧಿಕಾರಿ-ಸಿಬ್ಬಂದಿಗಳ ಕರ್ತವ್ಯ ನಿರ್ಲಕ್ಷ್ಯವೂ ಕಾರಣವಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮ ಲೆಕ್ಕಿಗರನ್ನೇ ಕಂದಾಯ ನಿರೀಕ್ಷಕ ಹುದ್ದೆಗೆ ನೇಮಕ ಮಾಡಲಾಗಿದೆ. ಆದರೆ ಇವರೂ ಸಹ ಕಚೇರಿಗೆ ಬರುತ್ತಿಲ್ಲ. ಶಾಂತಳ್ಳಿ ನಾಡ ಕಚೇರಿಯ ಅವ್ಯವಸ್ಥೆ ಬಗ್ಗೆ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳು ತಕ್ಷಣ ಗಮನ ಹರಿಸಬೇಕು. ತಪ್ಪಿದಲ್ಲಿ ನಾಡ ಕಚೇರಿಗೆ ಬೀಗ ಜಡಿಯಲಾಗುವದು ಎಂದು ಪ್ರಮುಖರು ಎಚ್ಚರಿಸಿದ್ದಾರೆ.

- ವಿಜಯ್ ಹಾನಗಲ್