ಕೂಡಿಗೆ, ಮಾ. 5: ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಸ್.ಎನ್. ನಟರಾಜ್ ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಭೇಟಿ ನೀಡಿದರು.

ರೈತರ ಕೃಷಿ ಸಾಲ ಮನ್ನಾದ ವಿಚಾರವಾಗಿ ರೈತರು ಸಹಕಾರ ಸಂಘಕ್ಕೆ ಒದಗಿಸಬೇಕಾದ ದಾಖಲಾತಿಗಳನ್ನು ಪರಿಶೀಲಿಸಿದರು. ಅಲ್ಲದೆ, ಇದುವರೆಗೂ ಸಹಕಾರ ಸಂಘದಿಂದ ಸಾಲ ಪಡೆದು ಸಾಲ ಮನ್ನಾಕ್ಕೆ ಅರ್ಹತೆಯಿದ್ದರೂ ಕೆಲವು ರೈತರು ಸರ್ಕಾರ ನಿಗದಿ ಮಾಡಿದ ದಾಖಲಾತಿಗಳನ್ನು ಪ್ರಾಥಮಿಕ ಸಹಕಾರ ಸಂಘಕ್ಕೆ ಒದಗಿಸದ ಹಿನ್ನೆಲೆಯಲ್ಲಿ ಅವರಿಗೆ ತಿಳುವಳಿಕೆ ನೀಡುವಂತೆ ಸಂಘದ ಕಾರ್ಯದರ್ಶಿಗೂ, ಅಧ್ಯಕ್ಷರಿಗೂ ಹೇಳಿದರು.

ಇದೇ ಸಂದರ್ಭ ವ್ಯವಸ್ಥಾಪಕ ಎಸ್.ಎನ್. ನಟರಾಜ್ ಅವರು ರೈತರ ಮನೆಗಳಿಗೆ ಭೇಟಿ ನೀಡಿ, ಸಾಲ ಮನ್ನಾದ ಸೂಕ್ತ ದಾಖಲಾತಿಗಳನ್ನು ನೀಡುವ ಬಗ್ಗೆ ಮಾಹಿತಿ ನೀಡಿದರು.

ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕಿನ ಅಧ್ಯಕ್ಷ ಕೆ.ಎಸ್. ಕೃಷ್ಣೇಗೌಡ, ಕೇಂದ್ರ ಸಹಕಾರ ಬ್ಯಾಂಕಿನ ವಿಭಾಗೀಯ ಮೇಲ್ವಿಚಾರಕ ಶಶಿಕುಮಾರ್, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್. ಜೀವನ್, ಸ್ಥಳೀಯ ರೈತರಾದ ಉದಯಕುಮಾರ್, ಜವರಪ್ಪ, ಧನುಕುಮಾರ್ ಸೇರಿದಂತೆ ಗ್ರಾಮಸ್ಥರು ಇದ್ದರು.