ಮಡಿಕೇರಿ ಮಾ.5: ಕೊಡಗು ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಕಂಡುಬಂದಿದೆ. ಜಾತ್ಯತೀತ ಜನತಾದಳದ ಕೊಡಗು ಜಿಲ್ಲಾಧ್ಯಕ್ಷ ಸ್ಥಾನವನ್ನು ಅಲ್ಪಸಂಖ್ಯಾತರಿಗೆ ನೀಡುವ ಮೂಲಕ ಪಕ್ಷದ ವರಿಷ್ಠರು ನೈಜ ಜಾತ್ಯತೀತತೆಯನ್ನು ಸಾಬೀತು ಪಡಿಸಬೇಕೆಂದು ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್ ಒತ್ತಾಯಿಸಿದ್ದಾರೆ. ಪಕ್ಷ ಬಲವರ್ಧನೆಗೊಳ್ಳಬೇಕಾದರೆ ಕೆ.ಎಂ. ಗಣೇಶ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂದು ಮಡಿಕೇರಿ, ಶನಿವಾಸಂತೆ, ಕೊಡ್ಲಿಪೇಟೆ ವಿಭಾಗಗಳ ಹಲವು ಪ್ರಮುಖರು ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ರಾಜ್ಯ ಜೆಡಿಎಸ್ ಅಧ್ಯಕ್ಷ ಹೆಚ್. ವಿಶ್ವನಾಥ್, ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಇವರುಗಳಲ್ಲ್ಲಿ ಮನವಿ ಮಾಡಿದ್ದಾರೆ. ವೀರಾಜಪೇಟೆ ವಿಭಾಗದ ಕೆಲವರು ಈ ಹಿಂದೆ ಸಾಕಷ್ಟು ಕೆಲಸ ಮಾಡಿರುವ ಸಂಕೇತ್ ಪೂವಯ್ಯ ಅವರೇ ಮುಂದುವರಿಯಲಿ ಎಂದು ವರಿಷ್ಠರ ಗಮನಕ್ಕೆ ತಂದಿದ್ದಾರೆ. ಈ ನಡುವೆ ಬಿ.ಎ. ಜೀವಿಜಯ ಅವರ ಪುತ್ರ ಸಂಜಯ್ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡುವಂತೆ ಕೋರಲು ಕೆಲವು ಪ್ರಮುಖರು ಇತ್ತೀಚೆಗೆ ಅರಸೀಕೆರೆÀಗೆ ಹೆಚ್. ಡಿ. ರೇವಣ್ಣ ಅವರಿಗೆ ಮನವಿ ಮಾಡಲು ತೆರಳಿದ್ದರು. ಅವರು ಸಿಗದುದರಿಂದ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರಿಗೆ ಸುಮಾರು 20 ಮಂದಿ ಪ್ರಮುಖರು ಲಿಖಿತ ಮನವಿ ಸಲ್ಲಿಸಿರುವದಾಗಿ “ಶಕ್ತಿ” ಗೆ ತಿಳಿದು ಬಂದಿದೆ. ಮನವಿಯಲ್ಲಿ ಇತರ ಕೆಲವು ಜಿಲ್ಲಾಧ್ಯಕ್ಷ ಆಕಾಂಕ್ಷಿಗಳ ನಡೆ ಕುರಿತು ಆಕ್ಷೇಪ ವ್ಯಕ್ತಪಡಿಸಿರು ವದಾಗಿಯೂ ತಿಳಿದುಬಂದಿದೆ. ಸೋಮವಾರಪೇಟೆ ತಾಲೂಕಿನ ಸಿ.ವಿ.ನಾಗೇಶ್ ಅವರೂ ಜಿಲ್ಲಾಧ್ಯಕ್ಷ ಸ್ಥಾನದ ಓರ್ವ ಆಕಾಂಕ್ಷಿಯಾಗಿದ್ದಾರೆ.
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕೊಡಗು ಜಿಲ್ಲೆಗೆ ಪ್ರಥಮ ಭೇಟಿ ನೀಡಿದ ಸಂದರ್ಭ ಸಂಕೇತ್ ಪೂವಯ್ಯ ಅವರ ವಿರುದ್ಧ ಹಾರಂಗಿಯಲ್ಲಿ ಪಕ್ಷದ ಕೆಲವರು
(ಮೊದಲ ಪುಟದಿಂದ) ಘೋಷಣೆಗಳನ್ನು ಕೂಗಿದ ಬಳಿಕ ಸಂಕೇತ್ ಅವರು ತಟಸ್ಥ ಧೋರಣೆ ಅನುಸರಿಸಿದ್ದರು. ಇದರಿಂದಾಗಿ ಪಕ್ಷದ ಅಧ್ಯಕ್ಷ ಸ್ಥಾನ ಡೋಲಾಯಮಾನ ಸ್ಥಿತಿಯಲ್ಲಿದ್ದು ಪಕ್ಷದ ಕಾರ್ಯಕರ್ತರಲ್ಲಿ ಅನಾಯಕತ್ವ ಪ್ರಜ್ಞೆ ಕಾಡತೊಡಗಿತು. ಇದೀಗ ಸಮರ್ಥ ಅಧ್ಯಕ್ಷರೊಬ್ಬರ ಅಗತ್ಯವಿದೆ ಎಂಬ ಬಗ್ಗೆ ಪಕ್ಷದ ಒಳಗೆ ಬೇಡಿಕೆ ಹೆಚ್ಚಾಗಿದೆ. ಸಂಕೇತ್ ಪೂವಯ್ಯ ಅವರ ಪ್ರಕಾರ ತಾನು ಅಂದಿನ ಘಟನೆಯಿಂದ ಬೇಸರಗೊಂಡು ಪಕ್ಷದ ಹಿರಿಯರಾದ ದೇವೇಗೌಡ ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಿದಾಗ ಅವರು ಅದನ್ನು ಅಂಗೀಕಾರ ಮಾಡಿರಲಿಲ್ಲ. ಬಳಿಕ ವಿಶ್ವನಾಥ್ ಅವರು ರಾಜ್ಯಾಧ್ಯಕ್ಷರಾದ ನಂತರ ಅವರನ್ನೂ ಭೇಟಿಯಾಗಿ ರಾಜೀನಾಮೆ ಅಂಗೀಕರಿಸಲು ಕೋರಿದಾಗ ಅವರೂ ಅಂಗೀಕರಿಸಲಿಲ್ಲ. ಹೊಸ ಅಧ್ಯಕ್ಷರನ್ನು ನೇಮಕ ಮಾಡುವಂತೆ ಕೋರಿದ್ದೆ. ನಾನು ನಿಷ್ಠೆಯಿಂದ ಪಕ್ಷದ ಕೆಲಸ ನಿರ್ವಹಿಸಿದ್ದು ಸಾಕಷ್ಟು ಸಂಘಟನೆ ನಡೆಸಿದ್ದೇನೆ. ಜನರ ಸಮಸ್ಯೆಗಳಿಗೆ ಆಗಿಂದಾಗ ಸ್ಪಂದಿಸಿದ್ದೇನೆ. ಈ ಹಿನ್ನೆಲೆಯಲ್ಲಿ ನನ್ನನ್ನು ಮುಂದುವರಿಸಿದರೆ ಸ್ವೀಕರಿಸುತ್ತೇನೆ ಎಂದು ಅಭಿಪ್ರಾಯಪಟ್ಟರು.
ಇನ್ನೊಂದೆಡೆ, ಪ್ರಸ್ತುತ ಜೆಡಿಎಸ್‍ನ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಕೆ.ಎಂ ಗಣೇಶ್ ಅವರ ಅಭಿಪ್ರಾಯ ಬಯಸಿದಾಗ ಪಕ್ಷದ ನೇತೃತ್ವ ವಹಿಸಬೇಕಾದರೆ ಭಿನ್ನಾಭಿಪ್ರಾಯಗಳು ದೂರವಾಗಿ ಎಲ್ಲರೂ ಒಂದೇ ವೇದಿಕೆಯಡಿಯಲ್ಲಿ ಕಾರ್ಯ ನಿರ್ವಹಿಸುವಂತಾಗಬೇಕು. ಅಪಸ್ವರಗಳು, ವಿರೋಧಗಳಿದ್ದರೆ ನಾನು ಆ ಸ್ಥಾನಕ್ಕೆ ಆಯ್ಕೆಗೊಳ್ಳಲು ಇಷ್ಟಪಡುವದಿಲ್ಲ. ಸರ್ವಾನುಮತದ ಆಯ್ಕೆಯಾದರೆ ಮಾತ್ರ ನನ್ನ ಒಪ್ಪಿಗೆಯಿದೆ ಎಂದು ಸ್ಪಷ್ಟಪಡಿಸಿದರು.
ಮತ್ತೊಬ್ಬರು ಆಕಾಂಕ್ಷಿ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿರುವ ಸಿ.ವಿ ನಾಗೇಶ್ ಅವರ ಪ್ರಕಾರ ತಾನೂ ಕೂಡ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಪಕ್ಷವನ್ನು ಇಂದಿನ ಸ್ಥಿತಿಯಲ್ಲಿ ಬಲಪಡಿಸುವ ಅಗತ್ಯವಿದೆ. ಯಾವದೇ ಆಯ್ಕೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ನಿರ್ಧಾರವನ್ನು ಅವಲಂಬಿಸಿದೆ. ಅವರು ಈ ಬಾರಿ ನಮ್ಮ ಕ್ಷೇತ್ರದಿಂದ ಸ್ಪರ್ಧಿಸುವ ನಿರೀಕ್ಷೆಯಿದ್ದು ಅವರನ್ನು ಗೆಲ್ಲಿಸುವತ್ತ ನಮ್ಮೆಲ್ಲರ ಆದ್ಯ ಚಿತ್ತವಿದೆ ಎಂದು ನಾಗೇಶ್ ಅಭಿಪ್ರಾಯಪಟ್ಟರು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೊಡಗಿಗೆ ಧಾರಾಳವಾಗಿ ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆ ಮಾಡುತ್ತಿದ್ದಾರೆ. ದೇವೇಗೌಡ ಅವರ ಆಯ್ಕೆಯಿಂದ ಜಿಲ್ಲೆಯ ಅಭಿವೃದ್ಧಿ ಕಾರ್ಯ ಇನ್ನೂ ಅಧಿಕಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾಧ್ಯಕ್ಷ ಸ್ಥಾನದ ಕುರಿತು ಸಂಜಯ್ ಹೆಸರೂ ಕೇಳಿಬಂದಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಬಿ.ಎ. ಜೀವಿಜಯ ಅವರ ಅಭಿಪ್ರಾಯ ಬಯಸಿದಾಗ ತಾನು ಈ ಬಗ್ಗೆ ಏನೂ ಹೇಳಲಾರೆ, ಜಿಲ್ಲೆಯ ಉಸ್ತುವಾರಿ ಸಚಿವರು , ರಾಜ್ಯ ಜೆಡಿಎಸ್ ಅಧ್ಯಕ್ಷರು ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು. ಜೆಡಿಎಸ್ ಪ್ರಮುಖ ವಕೀಲರಾದ ಮನೋಜ್ ಬೋಪಯ್ಯ ಅವರು ತಾನು ಅಧ್ಯಕ್ಷಾಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದರು, ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್ ಅವರ ಪ್ರಕಾರ ಜಾತ್ಯತೀತತೆಯ ಹೆಸರಿನಲ್ಲಿ ಪಕ್ಷದ ಕೆಲವು ಜಿಲ್ಲಾ ನಾಯಕರು ಚುನಾವಣೆ ಸಂದರ್ಭ ಮಾತ್ರ ಅಲ್ಪಸಂಖ್ಯಾತರನ್ನು ಬಳಸಿಕೊಂಡು ನಂತರದ ದಿನಗಳಲ್ಲಿ ನಿರ್ಲಕ್ಷಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು ತಾವು ಕೂಡ ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು, ಈ ಬಗ್ಗೆ ಪಕ್ಷದ ವರಿಷ್ಠರ ಗಮನ ಸೆಳೆಯುವುದಾಗಿ ತಿಳಿಸಿದ್ದಾರೆ.
ನೈಜ ಜಾತ್ಯತೀತ ವಾದದ ಅಲ್ಪಸಂಖ್ಯಾತ ಕಾರ್ಯಕರ್ತರು ಜೆಡಿಎಸ್‍ನ ಬೆಳವಣಿಗೆಗಾಗಿ ರಾತ್ರಿ, ಹಗಲೆನ್ನದೆ ದುಡಿದಿದ್ದಾರೆ. ಆದರೆ ವಿಧಾನಸಭಾ ಚುನಾವಣೆ ಸಂದರ್ಭ ಅಲ್ಪಸಂಖ್ಯಾತರು ಪಕ್ಷಕ್ಕೆ ಮತ ಹಾಕಿಲ್ಲವೆಂದು ಗೂಬೆ ಕೂರಿಸುತ್ತಿದ್ದಾರೆ. ಈ ಮೂಲಕ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಆಕ್ಷೇಪಿಸಿದ್ದಾರೆ.. ಅಲ್ಲದೆ ಅಲ್ಪಸಂಖ್ಯಾತರಿಗೆ ಯಾವದೇ ಸ್ಥಾನಮಾನಗಳನ್ನು ನೀಡುತ್ತಿಲ್ಲ ಎಂದು ಇಸಾಕ್ ಖಾನ್ ಟೀಕಿÀಸಿದ್ದಾರೆ.
ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನವನ್ನು ಅಲ್ಪಸಂಖ್ಯಾತರಿಗೆ ನೀಡಲು ವರಿಷ್ಠರು ಸೂಕ್ತ ನಿರ್ಧಾರವನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.