ಕುಶಾಲನಗರ, ಮಾ. 5: ಕೊಡವ ಕುಲಶಾಸ್ತ್ರ ಅಧ್ಯಯನಕ್ಕೆ ಸಂಬಂಧಿಸಿದಂತೆ ಕುಶಾಲನಗರ ಕೊಡವ ಸಮಾಜದಲ್ಲಿ ವಿಚಾರ ವಿನಿಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕುಶಾಲನಗರ ಕೊಡವ ಸಮಾಜ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವಂಡ ಯು. ನಾಚಪ್ಪ ಈ ಬಗ್ಗೆ ಸಮಗ್ರ ಮಾಹಿತಿ ನೀಡಿ, ಕೊಡವರ ದಾರಿ ತಪ್ಪಿಸುವ ಹುನ್ನಾರ ಇತ್ತೀಚಿನ ದಿನಗಳಲ್ಲಿ ನಡೆದು ಬರುತ್ತಿರುವದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ಮೂಲಕ ಕೊಡವ ಜನಾಂಗದ ಭವಿಷ್ಯಕ್ಕೆ ಕುತ್ತು ಉಂಟುಮಾಡುವ ಕೆಲಸವನ್ನು ಗೌಪ್ಯವಾಗಿ ಮಾಡುತ್ತಿರುವ ಜನರ ಬಗ್ಗೆ ಎಚ್ಚರಗೊಳ್ಳಬೇಕಾಗಿದೆ ಎಂದರು.

ಕೊಡವ ಜನಾಂಗ ಅಭದ್ರತೆಗೆ ಒಳಗಾಗುತ್ತಿದ್ದು ಈ ನಿಟ್ಟಿನಲ್ಲಿ ಕೊಡವ ಕುಲಶಾಸ್ತ್ರ ಅಧ್ಯಯನ ತಂಡಕ್ಕೆ ಸಮಗ್ರ ಮಾಹಿತಿ ನೀಡುವ ಮೂಲಕ ಸಮುದಾಯದ ಏಳಿಗೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಕರೆ ನೀಡಿದರು.

ಕುಶಾಲನಗರ ಕೊಡವ ಸಮಾಜದ ಅಧ್ಯಕ್ಷ ಅಂಜಪರವಂಡ ರಘು ನಂಜಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೊಡವ ಕುಲಶಾಸ್ತ್ರ ಅಧ್ಯಯನ ತಂಡದ ಮುಖ್ಯಸ್ಥ ಡಾ. ಮಧುಸೂದನ್ ಉಪಸ್ಥಿತರಿದ್ದು ಮಾತನಾಡಿದರು.

ಈ ಸಂದರ್ಭ ಮಾತನಾಡಿದ ಕೊಡವ ಅಕಾಡೆಮಿ ಮಾಜಿ ಅಧ್ಯಕ್ಷ ಬಾಚರಣಿಯಂಡ ಪಿ. ಅಪ್ಪಣ್ಣ, ಕೊಡವರ ಇತಿಹಾಸ ಮತ್ತು ಭೌಗೋಳಿಕ ಸನ್ನಿವೇಶದ ಬಗ್ಗೆ ಅಧ್ಯಯನ ತಂಡಕ್ಕೆ ಮಾಹಿತಿ ನೀಡಲಾಗುತ್ತಿದೆ ಎಂದರು.

ಈ ಸಂದರ್ಭ ಕುಶಾಲನಗರ ಕೊಡವ ಸಮಾಜದ ಕಾರ್ಯದರ್ಶಿ ಪುಲಿಯಂಡ ಚಂಗಪ್ಪ, ಮಾಜಿ ಅಧ್ಯಕ್ಷರಾದ ಜೆಮ್ಸಿ ಪೊನ್ನಪ್ಪ, ಮಂಡೇಪಂಡ ಬೋಸ್ ಮೊಣ್ಣಪ್ಪ ಮತ್ತು ಸಮಾಜದ ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು.