ಕುಶಾಲನಗರ, ಮಾ 5: ಪ್ರಕೃತಿ ವಿಕೋಪ ಸಂದರ್ಭ ಹಾನಿಗೊಳಗಾದ ಹಾರಂಗಿ ಗ್ರಾಮದ ಸಂತ್ರಸ್ಥರಿಗೆ ಪರಿಹಾರ ದೊರಕದಿರುವ ಬಗ್ಗೆ ಕೂಡುಮಂಗಳೂರು ಗ್ರಾಪಂ ಸದಸ್ಯರಾದ ಭಾಸ್ಕರ್ ನಾಯಕ್ ಆಕ್ರೋಷ ವ್ಯಕ್ತಪಡಿಸಿದ್ದಾರೆ. ಅವರು ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿ, ಈ ಸಂದರ್ಭ ನೆರೆಹಾನಿಗೆ ಒಳಗಾಗಿ 22 ಮನೆಗಳು ಸಂಪೂರ್ಣ ಕುಸಿದು ಬೀಳುವುದರೊಂದಿಗೆ 52 ಮನೆಗಳು ಭಾಗಶಃ ಹಾನಿಗೊಳಗಾಗಿತ್ತು. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ವರದಿ ತಯಾರಿಸಿ ಹಲವು ತಿಂಗಳು ಕಳೆದರೂ ಇದುವರೆಗೆ ಸಂತ್ರಸ್ಥರಿಗೆ ಪರಿಹಾರ ದೊರಕಿರುವುದಿಲ್ಲ. ಒಂದು ವಾರದೊಳಗೆ ಪರಿಹಾರ ನೀಡಲು ಕ್ರಮಕೈಗೊಳ್ಳಬೇಕು. ತಪ್ಪಿದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿ ತಾನು ನಾಡಕಛೇರಿ ಮುಂಭಾಗ ಉಪವಾಸ ಸತ್ಯಾಗ್ರಹ ಕೂರುವುದಾಗಿ ಎಚ್ಚರಿಸಿದ್ದಾರೆ.