ಮಡಿಕೇರಿ, ಮಾ. 6: ಮೈಸೂರು - ಮಡಿಕೇರಿ ಸಂಪರ್ಕದ ನೂತನ ಚತುಷ್ಪಥ ರಸ್ತೆ ನಿರ್ಮಾಣದ ಪೂರ್ವಭಾವಿಯಾಗಿ ತೆರೆಯ ಲಾಗಿರುವ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯನ್ನು ನಿನ್ನೆ ದಿನ ಉದ್ಘಾಟಿಸಲಾಯಿತು. ಸಂಸದ ಪ್ರತಾಪ್ ಸಿಂಹ ಅವರು, ಈ ಮೂಲಕ ಮೈಸೂರು - ಮಡಿಕೇರಿ ಎಕ್ಸ್‍ಪ್ರೆಸ್ ರಾಷ್ಟ್ರೀಯ ಹೆದ್ದಾರಿಗೆ ಚಾಲನೆ ನೀಡಿದರು.
6 ಸಾವಿರ ಕೋಟಿ ರೂ. ಅಂದಾಜು ಮೊತ್ತದ ಈ ಬೃಹತ್ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡದ್ದು, ಸದ್ಯದಲ್ಲಿಯೇ ಕಾರ್ಯಾರಂಭ ಗೊಳ್ಳಲಿರುವದಾಗಿ ಪ್ರತಾಪ್ ಸಿಂಹ ತಿಳಿಸಿದರು. ಒಟ್ಟು 115 ಕಿ.ಮೀ. ಅಂತರದ ಈ ರಸ್ತೆಯ ಪ್ರಥಮ ಹಂತದ ಕಾಮಗಾರಿಯು ಮೈಸೂರು ಮತ್ತು ಕುಶಾಲನಗರದ ನಡುವೆ 85 ಕಿ.ಮೀ.ವರೆಗೆ ನಡೆಯಲಿದೆ ಎಂದರು. ಈ ಯೋಜನೆ ಜಾರಿಗೆ 516 ಹೆಕ್ಟೇರ್ ಭೂಮಿಯನ್ನು ವಶಪಡಿಸಿಕೊಳ್ಳ ಬೇಕಾಗಿದ್ದು, ಪ್ರಕ್ರಿಯೆ ಪ್ರಾರಂಭ ಗೊಳ್ಳಲಿದೆ ಎಂದು ತಿಳಿಸಿದರು. ಈ ರಾಷ್ಟ್ರೀಯ ಹೆದ್ದಾರಿ ಮುಂದಿನ ಮೂರು ವರ್ಷಗಳಲ್ಲಿ ಪೂರ್ಣ ಗೊಳ್ಳುವ ನಿರೀಕ್ಷೆಯಿದ್ದು, ಆ ಬಳಿಕ ಮಡಿಕೇರಿಯಿಂದ ಬೆಂಗಳೂರಿಗೆ ಕೇವಲ 3 ತಾಸುಗಳಲ್ಲಿ ಪ್ರಯಾಣಿಸುವ ಅನುಕೂಲ ಒದಗಲಿದೆ ಎಂಬದು ಹೆದ್ದಾರಿ ಪ್ರಾಧಿಕಾರದ ಯೋಜನಾಧಿಕಾರಿ ಬಿ.ಟಿ. ಶ್ರೀಧರ್ ಅವರ ಅನಿಸಿಕೆಯಾಗಿದೆ. ಈ ನೂತನ ಯೋಜನೆ ಮೂಲಕ ಮಡಿಕೇರಿಯಿಂದ ಬೆಂಗಳೂರಿಗೆ ತೆರಳುವ ವಾಹನಗಳು ಶ್ರೀರಂಗಪಟ್ಟಣ ಸಮೀಪ ಪಶ್ಚಿಮ ವಾಹಿನಿ ಬಳಿ ಬೆಂಗಳೂರು ಹೆದ್ದಾರಿಗೆ ನೇರ ಸಂಪರ್ಕ ಹೊಂದಲಿದ್ದು, ಮೈಸೂರು ನಗರಕ್ಕೆ ತೆರಳುವ ಅವಶ್ಯಕತೆಯಿಲ್ಲ. ಅಲ್ಲದೇ ರಿಂಗ್ ರೋಡಿಗೂ ಕೂಡ ತೆರಳಬೇಕಾಗಿಲ್ಲ ಎಂದು ಅಧಿಕಾರಿ ವಿವರಿಸಿದರು. ಅಲ್ಲದೇ ಮಡಿಕೇರಿ - ಮೈಸೂರು ನಡುವೆ ವಾಹನಗಳು ತೆರಳುವಾಗ 4 ಕಡೆ ಬೈಪಾಸ್ ರಸ್ತೆಗಳು ನಿರ್ಮಾಣಗೊಳ್ಳಲಿದ್ದು, ಮಾರ್ಗ ಮಧ್ಯೆ ಎಲ್ಲಿಯೂ ನಗರ ಪ್ರದೇಶಗಳಿಗೆ ತೆರಳುವ ಅಗತ್ಯವಿಲ್ಲ ಎಂದು ಅಧಿಕಾರಿ ಮಾಹಿತಿಯಿತ್ತರು.
ಎಲ್ಲೆಲ್ಲಿ ಬೈಪಾಸ್ ರಸ್ತೆ?
ಚತುಷ್ಪಥ ರಸ್ತೆ ನಿರ್ಮಾಣ ಸಂದರ್ಭ ಮಡಿಕೇರಿ - ಮೈಸೂರು ನಡುವೆ 4 ಕಡೆ ಬೈಪಾಸ್ ರಸ್ತೆಗಳು ನಿರ್ಮಾಣಗೊಳ್ಳಲಿದೆ. ಕೊಡಗಿನ ಸುಂಟಿಕೊಪ್ಪ ಮತ್ತು ಕುಶಾಲನಗರದಲ್ಲಿ ಬೈಪಾಸ್ ರಸ್ತೆಗಳು ನಿರ್ಮಾಣ ಗೊಳ್ಳಲಿದ್ದು, ಪಟ್ಟಣ ಪ್ರದೇಶಗಳಿಗೆ ವಾಹನಗಳು ತೆರಳಬೇಕಾಗಿಲ್ಲ. ಇದರಿಂದಾಗಿ ಈ ಪಟ್ಟಣಗಳಲ್ಲಿರುವ ಅಂಗಡಿ ಮತ್ತು ವಾಣಿಜ್ಯ ಮಳಿಗೆಗಳಿಗೆ ಧಕ್ಕೆಯಾಗುವ ಆತಂಕ ದೂರವಾಗಿದೆ. ಮೈಸೂರು ವಿಭಾಗದಲ್ಲಿ ಪಿರಿಯಾ ಪಟ್ಟಣ ಮತ್ತು ಹುಣಸೂರು - ಮೈಸೂರು ಒಳಗೊಂಡಂತೆ ಬೈಪಾಸ್ ರಸ್ತೆಗಳು ನಿರ್ಮಾಣಗೊಳ್ಳಲಿವೆ ಎಂದು ತಿಳಿದು ಬಂದಿದೆ.