ಸೋಮವಾರಪೇಟೆ,ಮಾ.5: ತಾಲೂಕಿನ ಮಾದಾಪುರದಲ್ಲಿರುವ ತೋಟಗಾರಿಕಾ ಇಲಾಖಾ ಸಸ್ಯಕ್ಷೇತ್ರಕ್ಕೆ ಸ್ಥಳೀಯ ಕೆಲ ಕಿಡಿಗೇಡಿಗಳೇ ವರ್ಷಂಪ್ರತಿ ಬೆಂಕಿ ಇಡುತ್ತಿದ್ದಾರೆ. ಹೀಗಾಗಿ 256 ಎಕರೆ ವಿಸ್ತೀರ್ಣದ ಸಸ್ಯಕ್ಷೇತ್ರವನ್ನು ಉಳಿಸಿಕೊಳ್ಳುವದು ಕಷ್ಟಕರವಾಗಿದೆ. ಕೃತಕ ಬೆಂಕಿಯಿಂದ ರಕ್ಷಿಸುವದು ಅಸಾಧ್ಯವಾಗಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕರು ಬೇಸರದಿಂದಲೇ ಅಳಲು ತೋಡಿಕೊಂಡರು.ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ ಅಧ್ಯಕ್ಷೆ ಪುಷ್ಪಾ ರಾಜೇಶ್ ಅಧ್ಯಕ್ಷತೆಯಲ್ಲಿ ತಾ.ಪಂ. ಸಭಾಂಗಣದಲ್ಲಿ ನಡೆದ ಸಂದರ್ಭ ಮಾದಾಪುರ ತೋಟಗಾರಿಕಾ ಇಲಾಖಾ ಸಹಾಯಕ ನಿರ್ದೇಶಕಿ ಶೋಭಾ ಅವರು ಈ ಬಗ್ಗೆ ಬೇಸರ ವ್ಯಕ್ತಪಡಿಸಿದರು.ಫೆಬ್ರವರಿ-ಮಾರ್ಚ್‍ನಲ್ಲಿ ಬೆಂಕಿ: 256 ಎಕರೆ ಇರುವ ಸಸ್ಯಕ್ಷೇತ್ರದಲ್ಲಿ ಈಗಾಗಲೇ ನಿರಾಶ್ರಿತರ ಮನೆ ನಿರ್ಮಾಣಕ್ಕೆ 50 ಎಕರೆ ಜಾಗ ನೀಡಲಾಗಿದೆ. ಉಳಿದ ಪ್ರದೇಶದಲ್ಲಿ ಗಿಡಗಳನ್ನು ನೆಡಲಾಗಿದೆ. ಕುರುಚಲು ಹೊಂದಿರುವ ಸಸ್ಯಕ್ಷೇತ್ರದ ಮೇಲ್ವಿಚಾರಣೆಗೆ ತಾನೂ ಸೇರಿದಂತೆ 7 ಮಂದಿ ಸಿಬ್ಬಂದಿಗಳು ಮಾತ್ರ ಇದ್ದೇವೆ. ಇದರಲ್ಲಿ ಈರ್ವರು ಹೊರಗುತ್ತಿಗೆ ಆಧಾರದ ನೌಕರರಾಗಿದ್ದಾರೆ. ಸಸ್ಯಕ್ಷೇತ್ರಕ್ಕೆ ಪ್ರತಿ ವರ್ಷ ಫೆಬ್ರವರಿ ಅಥವಾ ಮಾರ್ಚ್‍ನಲ್ಲಿ ಬೆಂಕಿ ಹಾಕಲಾಗುತ್ತಿದೆ. ಇದು ಸ್ಥಳೀಯ
(ಮೊದಲ ಪುಟದಿಂದ) ಕೆಲ ಕಿಡಿಗೇಡಿಗಳ ಕೃತ್ಯವೇ ಆಗಿದೆ. ಈ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ಇದ್ದರೂ ಸಹ ಯಾರೂ ಬಹಿರಂಗ ಪಡಿಸುತ್ತಿಲ್ಲ ಎಂದು ಸಭೆಯಲ್ಲಿ ನೊಂದು ನುಡಿದರು.
ಬೆಂಕಿಯಿಂದಾಗಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನೆಡಲಾಗಿದ್ದ ಗಿಡಗಳು ಸುಟ್ಟುಹೋಗಿವೆ. ಬೆಂಕಿ ತಡೆಗೆ ಕ್ರಮ ಕೈಗೊಂಡಿದ್ದರೂ ಸಹ ಸಸ್ಯಕ್ಷೇತ್ರದ ಬೇಲಿ ದಾಟಿ ಒಳಬಂದು ಬೆಂಕಿ ಹಾಕುತ್ತಿದ್ದಾರೆ. ಬಿಸಿಲು ಮತ್ತು ಗಾಳಿ ಹೆಚ್ಚಿರುವ ಸಮಯದಲ್ಲೇ ಬೆಂಕಿ ಇಡಲಾಗುತ್ತಿದೆ. ಇವರನ್ನು ಕಂಡು ಹಿಡಿಯುವದೇ ಕಷ್ಟವಾಗಿದೆ ಎಂದ ಶೋಭಾ ಅವರು, ಪೊಲೀಸ್ ದೂರು ಯಾರ ಮೇಲೆ ನೀಡೋದು ಎಂದು ಸಭೆಯಲ್ಲಿ ಪ್ರಶ್ನಿಸಿದರು.
ಈ ಬಗ್ಗೆ ಜಿಲ್ಲಾ ಪಂಚಾಯಿತಿಯ ಗಮನಕ್ಕೆ ತಂದು ವರ್ಷದ ಮೂರು ತಿಂಗಳ ಕಾಲ ತಾತ್ಕಾಲಿಕವಾಗಿ ನೌಕರರನ್ನು ನೇಮಿಸಿಕೊಳ್ಳಲು ಕ್ರಮ ಕೈಗೊಳ್ಳಿ ಎಂದು ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಸಲಹೆ ನೀಡಿದರು. ಸಸ್ಯಕ್ಷೇತ್ರವನ್ನು ಕಿಡಿಗೇಡಿಗಳಿಂದ ರಕ್ಷಿಸಲು ಗನ್‍ಮೆನ್‍ಗಳನ್ನು ಇಟ್ಟುಕೊಳ್ಳುವದು ಸೂಕ್ತ ಎಂದು ಸದಸ್ಯ ಅನಂತ್‍ಕುಮಾರ್ ಹೇಳಿದರು.
ಕಳಪೆ ಕಾಮಗಾರಿ ವಿರುದ್ಧ ದೂರು: ಮಾಹಿತಿ ಹಕ್ಕು ಕಾರ್ಯಕರ್ತರು ಇಲಾಖೆಯ ಇಂಜಿನಿಯರ್‍ಗಳನ್ನು ಬೆದರಿಸಿ ಬೇನಾಮಿ ಹೆಸರಿನಲ್ಲಿ ಗುತ್ತಿಗೆ ಮಾಡುತ್ತಿದ್ದಾರೆ. ಹಾನಗಲ್ಲು ಸಮೀಪದ ಬಾಗಲಕಂಡಿ ರಸ್ತೆಯಲ್ಲಿ ಭೂ ಕುಸಿತ ಸಂಭವಿಸಿರುವ ಸ್ಥಳದಲ್ಲಿ ಶಾಶ್ವತ ಪರಿಹಾರ ಕಾರ್ಯ ಮಾಡಬೇಕಿದ್ದರೂ ರೂ.10 ಲಕ್ಷ ವೆಚ್ಚದಲ್ಲಿ ಎಂ.ಸ್ಯಾಂಡ್ ಮೂಟೆ ಜೋಡಿಸುತ್ತಿದ್ದಾರೆ. ಈ ಕೆಲಸ ಸಂಪೂರ್ಣ ಕಳಪೆಯಾಗಿದೆ. ಇದೂ ಸೇರಿದಂತೆ ಸುಮಾರು 4 ಕೋಟಿ ವೆಚ್ಚದ 7 ಕಾಮಗಾರಿಗಳನ್ನು ಇವರುಗಳಿಗೆ ನೀಡಲಾಗಿದ್ದು, ಎಲ್ಲವೂ ಕಳಪೆಯಾಗಿದೆ. ಈ ಬಗ್ಗೆ ಹೈಕೋರ್ಟ್ ವಕೀಲರೊಂದಿಗೆ ಚರ್ಚಿಸಿದ್ದು, ಸಾರ್ವಜನಿಕ ಹಿತಾಸಕ್ತಿ ದೂರು ಸಲ್ಲಿಸಲಾಗುವದು ಎಂದು ಸದಸ್ಯ ಬಿ.ಬಿ. ಸತೀಶ್ ಅವರು ಇಂಜಿನಿಯರ್‍ಗಳಿಗೆ ಎಚ್ಚರಿಸಿದರು.
ಪ್ರಾಕೃತಿಕ ವಿಕೋಪ ಸಂಭವಿಸಿ 5 ತಿಂಗಳ ನಂತರ ಇದೀಗ ಮೂಟೆಗಳನ್ನು ಜೋಡಿಸಲಾಗುತ್ತಿದೆ. ಇನ್ನು ಬಗ್ಗನಮನೆಯ ಬಳಿ ಅಂದಾಜು 35 ಲಕ್ಷ ವೆಚ್ಚದ ಕಾಮಗಾರಿಗೆ 89 ಲಕ್ಷದ ಎಸ್ಟಿಮೇಟ್ ತಯಾರಿಸಲಾಗಿದೆ. ಮಾಹಿತಿ ಹಕ್ಕು ಕಾರ್ಯಕರ್ತರ ಬೆದರಿಕೆಗಳಿಗೆ ಅಭಿಯಂತರರು ಮಣಿದಿದ್ದಾರೆ. ಈ ಹಿಂದೆ ತಾಲೂಕು ಪಂಚಾಯಿತಿ ಸದಸ್ಯರುಗಳ ವಿರುದ್ಧ ಅರೋಪ ಮಾಡಿದ ಹೋರಾಟಗಾರರೇ ಇದೀಗ ಗುತ್ತಿಗೆದಾರರಾಗಿದ್ದಾರೆ. ಪರವಾನಗಿ ಪಡೆಯದೇ ಇರುವ ಇವರುಗಳಿಗೆ ಹೇಗೆ ಕಾಮಗಾರಿ ನೀಡಿದಿರಿ? ಎಂದು ಸತೀಶ್ ಪ್ರಶ್ನಿಸಿದರು.
ಧರಣಿ ನಡೆಸುತ್ತೇವೆ: ಮಾದಾಪುರ-ಶಾಂತಳ್ಳಿ ರಸ್ತೆಯ ಗುಂಡಿ ಮುಚ್ಚುವ ಕಾಮಗಾರಿಯೂ ಕಳಪೆಯಾಗಿದೆ. ಇದರೊಂದಿಗೆ ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ಗ್ರಾಮ ಪಂಚಾಯಿತಿಗಳಲ್ಲಿ ತುರ್ತು ಪರಿಹಾರ ಕಾರ್ಯಕ್ಕೆ ಬಿಡುಗಡೆಯಾದ ವಿಶೇಷ ಪ್ಯಾಕೇಜ್‍ನ ಅನುದಾನವನ್ನು ಬೇರೆ ಗ್ರಾ.ಪಂ.ಗಳಿಗೆ ನೀಡಲಾಗುತ್ತಿದೆ. ಪ್ಯಾಕೇಜ್ ಹಣ ದುರುಪಯೋಗವಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡುತ್ತೇವೆ. ಪಕ್ಷಾತೀತವಾಗಿ ಲೋಕೋಪಯೋಗಿ ಇಲಾಖಾ ಕಚೇರಿ ಎದುರು ಧರಣಿ ನಡೆಸುತ್ತೇವೆ ಎಂದು ಅಭಿಮನ್ಯಕುಮಾರ್ ಎಚ್ಚರಿಸಿದರು.
ತಾ.ಪಂ.ನಿಂದ ನಿರ್ವಹಿಸಲಾಗಿರುವ ಕಾಮಗಾರಿಗಳಿಗೆ ಅಧಿಕಾರಿಗಳು ಬಿಲ್ ಮಾಡುತ್ತಿಲ್ಲ. ಹೀಗಾಗಿ ಗುತ್ತಿಗೆದಾರರು ತೊಂದರೆಗೆ ಒಳಗಾಗಿದ್ದಾರೆ. ಸಮರ್ಪಕವಾಗಿ ಕಾಮಗಾರಿ ಮಾಡಿರುವ ಗುತ್ತಿಗೆದಾರರ ಬಿಲ್‍ಗಳನ್ನು ತಡೆಹಿಡಿಯದೇ ತಕ್ಷಣ ಹಣ ನೀಡುವಂತೆ ಸದಸ್ಯ ಮಣಿ ಉತ್ತಪ್ಪ ಆಗ್ರಹಿಸಿದರು.
ಪರಿಹಾರ ಹಣ ಲಭ್ಯವಿಲ್ಲ: ಬೆಳೆಹಾನಿ ಪರಿಹಾರ ಹಣ ಬ್ಯಾಂಕ್‍ಗಳಿಗೆ ಬಂದಿದ್ದರೂ ರೈತರು ಹಣವನ್ನು ಹೊಂದಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೆಲವರಿಗೆ ಮಾತ್ರ ಪರಿಹಾರದ ಹಣ ನೀಡಲಾಗುತ್ತಿದೆ. ಹಲವಷ್ಟು ರೈತರನ್ನು ವಾಪಸ್ ಕಳುಹಿಸಲಾಗುತ್ತಿದೆ. ಈ ಬಗ್ಗೆ ಗಮನ ಹರಿಸುವಂತೆ ಸದಸ್ಯ ಸತೀಶ್ ಅವರು, ತಹಸೀಲ್ದಾರ್ ಗಮನ ಸೆಳೆದರು.
ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಜಾನುವಾರುಗಳನ್ನು ಕಳೆದುಕೊಂಡ ನಿರಾಶ್ರಿತರಿಗೆ ಪಶು ಸಂಗೋಪನೆ ಇಲಾಖೆ ಮೂಲಕ ವಿವಿಧ ಯೋಜನೆಗಳಡಿ ಸೌಲಭ್ಯ ನೀಡುವಂತೆ ಅಭಿಮನ್ಯುಕುಮಾರ್ ಅವರು ಇಲಾಖೆಯ ಅಧಿಕಾರಿ ಎಸ್.ಪಿ. ಬಾದಾಮಿ ಅವರಿಗೆ ಮನವಿ ಮಾಡಿದರು.
ಬಡ ರೈತರಿಗೆ ಕೆರೆಗಳನ್ನು ತೋಡಿಸಲು ಇಲಾಖೆಯಿಂದ ಸಹಾಯಧನ ಸಿಗುತ್ತಿಲ್ಲ. ಹಣವಂತರಿಗೆ ಮಾತ್ರ ಯೋಜನೆ ಅನುಷ್ಠಾನವಾಗುತ್ತಿದೆ. ಕೆರೆ ಅಭಿವೃದ್ಧಿ ಯೋಜನೆಯೂ ಉಳ್ಳವರ ಪಾಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಿ ನಿಜವಾದ ಫಲಾನುಭವಿಗಳಿಗೆ ಸೌಲಭ್ಯ ತಲಪಿಸಬೇಕು ಎಂದು ಮಣಿ ಉತ್ತಪ್ಪ ಅವರು, ಕೃಷಿ ಇಲಾಖಾ ಸಹಾಯಕ ನಿರ್ದೇಶಕ ರಾಜಶೇಖರ್ ಅವರನ್ನು ಒತ್ತಾಯಿಸಿದರು.
ತಾ. 10ರಿಂದ ಪಲ್ಸ್ ಪೋಲಿಯೋ: ಆರೋಗ್ಯ ಇಲಾಖೆ ವತಿಯಿಂದ ತಾ. 10 ರಿಂದ 12ರವರೆಗೆ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮವಿವೆ. ಇದಕ್ಕಾಗಿ ಲಕ್ಷಾಂತರ ವೆಚ್ಚದ ವ್ಯಾಕ್ಸಿನ್‍ನ್ನು ಸಂಗ್ರಹಿಸಲಾಗುತ್ತಿದೆ. ಆದ್ದರಿಂದ ತಾ. 10 ರಿಂದ 12ರವರೆಗೆ ಯಾವದೇ ಕಾರಣಕ್ಕೂ ವಿದ್ಯುತ್ ಸ್ಥಗಿತಗೊಳಿಸಬಾರದು ಎಂದು ತಾಲೂಕು ಆರೋಗ್ಯಾಧಿಕಾರಿ ಶ್ರೀನಿವಾಸ್ ಅವರು ಸಭೆಯಲ್ಲಿ, ಸೆಸ್ಕ್ ಅಭಿಯಂತರರಿಗೆ ಮನವಿ ಮಾಡಿದರು.
ಶನಿವಾರಸಂತೆ ಸರ್ಕಾರಿ ಆಸ್ಪತ್ರೆಗೆ ಆಯುಷ್ ವೈದ್ಯರನ್ನು ನಿಯೋಜಿಸಲು ಕ್ರಮ ಕೈಗೊಳ್ಳುವಂತೆ ತಾ.ಪಂ. ಅಧ್ಯಕ್ಷೆ ಪುಷ್ಪಾ ಸೂಚಿಸಿದರು. ಸಭೆಯಲ್ಲಿ ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಹೆಚ್.ಎನ್. ತಂಗಮ್ಮ, ಸದಸ್ಯರುಗಳು ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.