ಸುಂಟಿಕೊಪ್ಪ, ಮಾ. 5: ಮನೆ ಬಿರುಕುಬಿಟ್ಟಿದೆ, 4 ತಿಂಗಳು ಮನೆಗೆ ತೆರಳದೆ ಇದ್ದುದರಿಂದ ಗೆದ್ದಲು ಹಿಡಿದಿದೆ. ಮುಂದಿನ ಮಳೆಗಾಲದಲ್ಲಿ ಮನೆಯಲ್ಲಿ ವಾಸ್ತವ್ಯ ಹೂಡಲು ಸಾಧ್ಯವಿಲ್ಲ ಎಂದು ಕೆದಕಲ್ ಗ್ರಾಮ ಪಂಚಾಯಿತಿಯ ಹಾಲೇರಿ, ತಾತಿಬಾಣೆ ಪೈಸಾರಿ, ಚಾಮುಂಡೇಶ್ವರಿ ಕಾಲೋನಿಯ ನಿವಾಸಿಗಳು ಬದಲಿ ವ್ಯವಸ್ಥೆಗಾಗಿ ಅವಲತ್ತುಕೊಂಡರು.
ಕೆದಕಲ್ ಗ್ರಾಮ ಪಂಚಾಯಿತಿಯ ವಿಶೇಷ ಸಭೆಯು ವಿಪತ್ತು ನಿರ್ವಹಣಾ ಮುಂಜಾಗೃತಾ ಬಗ್ಗೆ ಗ್ರಾ.ಪಂ. ಅಧ್ಯಕ್ಷ ಬಿ.ಎಸ್. ಬಾಲಕೃಷ್ಣ ರೈ ಅಧ್ಯಕ್ಷತೆಯಲ್ಲಿ ನಡೆಯಿತು.
ಕೊಡಗಿನಲ್ಲಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ಪಕೃತಿ ವಿಕೋಪದಿಂದ ಮನೆ, ಮಠ, ತೋಟ ಕಳೆದುಕೊಂಡಿದ್ದಾರೆ. ಇನ್ನೂ ನಿರಾಶ್ರಿತರು ಚೇತರಿಸಿಕೊಂಡಿಲ್ಲ ಮುಂದೆ ಹೀಗಾಗದಂತೆ ದೇವರಲ್ಲಿ ಪ್ರಾರ್ಥಿಸುವ, ಆ ಸಂದರ್ಭದಲ್ಲಿ ಜನಪ್ರತಿನಿಧಿಗಳು ಗ್ರಾಮಸ್ಥರು, ಸಂತ್ರಸ್ತರ ನೆರವಿಗೆ ಬಂದಿದ್ದಾರೆ ಎಂದು ಗ್ರಾ.ಪಂ.ಅಧ್ಯಕ್ಷ ಬಾಲಕೃಷ್ಣ ಹೇಳಿದರು.
ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ಮಾತನಾಡಿ, ತಿಂಗಳಿನಲ್ಲಿ ಆಗಬಾರದು ಘಟಿಸಿ ಹೋಗಿದೆ. ಕುಶಾಲನಗರ ಸೇರಿದಂತೆ ಕೊಡಗಿನ ಆನೇಕ ಕಡೆ ಜನರು ಜಲಪ್ರಳಯ ದಿಂದ ಮನೆ, ತೋಟ ಕಳೆದುಕೊಂಡು ಅತಂತ್ರರಾಗಿದ್ದಾರೆ. ಹಾಲೇರಿ ವಿಭಾಗದಲ್ಲಿ ಕಾಫಿ ತೋಟವನ್ನು 250, 500 ಎಕ್ರೆ ಹೊಂದಿದ ಮಾಲೀಕರು ಇದ್ದಾರೆ. ಸರಕಾರದೊಂದಿಗೆ ವ್ಯವಹರಿಸಿ ಅವರ 10 ಎಕ್ರೆ ಜಾಗವನ್ನು ಪಡೆದುಕೊಂಡು ಈ ವಿಭಾಗದಲ್ಲಿ ಮನೆ ಕಳೆದುಕೊಂಡವರಿಗೆ ಒದಗಿಸುವ ಕೆಲಸ ಮಾಡಿದರೆ ವ್ಯವಸ್ಥೆ ಆಗಲಿದೆ. ಇಲ್ಲೇ ನೆಲೆ ನಿಂತ ಬಡವರಿಗೆ ಪ್ರಯೋಜನವಾಗಲಿದೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ, ಸರಕಾರಕ್ಕೆ ಒತ್ತಡ ಹೇರಬೇಕು ಎಂದು ಹೇಳಿದರು.
ಕುಶಾಲನಗರ ವ್ಯಾಪ್ತಿಯಲ್ಲಿ ಹಾರಂಗಿ ಜಲಾಶಯದ ನೀರನ್ನು ಆಗಸ್ಟ್ನಲ್ಲಿ ಹರಿಯಬಿಟ್ಟಿರುವದರಿಂದ 350ಕ್ಕೂ ಹೆಚ್ಚು ಮನೆ, ಹೊಲಗಳು ನಾಶವಾಗಿವೆ. ಹಾರಂಗಿ ಜಲಾಶಯದ ಯೋಜನಾ ಇಂಜಿನಿಯರ್ ಕರ್ತವ್ಯ ಲೋಪದಿಂದ ಇದು ಸಂಭವಿಸಿದೆ. ಈ ಇಂಜಿನಿಯರ್ ಅವರನ್ನು ಭೇಟಿಯಾಗಿ ಮನವಿ ಮಾಡಿದರೂ ಸ್ಪಂದಿಸಲಿಲ್ಲ; ಕೊನೆಗೆ ಮುಖ್ಯಮಂತ್ರಿ ನೀರಾವರಿ ಇಲಾಖೆ ಹಿರಿಯ ಅಧಿಕಾರಿಗಳಿಗೆ ಒತ್ತಡ ಹೇರಿದ್ದರಿಂದ ಇಂಜಿನಿಯರ್ ವರ್ಗಾವಣೆ ಯಾದರೂ ಮತ್ತೆ ಹಾರಂಗಿಗೆ ಬಂದು ಅಧಿಕಾರ ಚಲಾಯಿಸುತ್ತಿದ್ದು, ಇಂತಹ ಜನವಿರೋಧಿ ಅಧಿಕಾರಿಗಳಿಗೆ ಜನರೇ ಪಾಠ ಕಲಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ಯುನಿಸೆಫ್ನ ಡಾ. ಪ್ರಭಾತ್ ಅವರು ಮುಂದೆ ಈ ವಿಭಾಗದಲ್ಲಿ ಇಂತಹ ಅನಾಹುತ ಸಂಭವಿಸದಂತೆ ಎಚ್ಚರವಹಿಸಲು ಗ್ರಾಮಸ್ಥರ ಸಲಹಾ ಸಮಿತಿ ರಚಿಸಬೇಕು ಎಂದರು.
ಸುಂಟಿಕೊಪ್ಪ ಪಿಎಸ್ಐ ಜಯರಾಂ ಜನಪ್ರತಿನಿಧಿಗಳ ಗ್ರಾಮಸ್ಥರ, ಅಧಿಕಾರಿಗಳ, ಸ್ವಯಂ ಸೇವಕರು ಒಗ್ಗೂಡಿ ಇಂತಹ ಪ್ರಕೃತಿ ವಿಕೋಪ ತಡೆಗಟ್ಟಲು ಮುಂಜಾಗೃತಾ ಕ್ರಮಕೈಗೊಳ್ಳಬೇಕೆಂದರು.
ಈ ಸಭೆಯಲ್ಲಿ ಹಾಲೇರಿ ಗ್ರಾಮಸ್ಥರಾದ ಮುತ್ತಪ್ಪ, ಪೂವಯ್ಯ, ಆನಂದ್, ಕೊರಗಪ್ಪ ಚರ್ಚೆಯಲ್ಲಿ ಭಾಗವಹಿಸಿದ್ದರು.
ಗ್ರಾ.ಪಂ. ಸದಸ್ಯರುಗಳಾದ ವೆಂಕಪ್ಪ ಪೂಜಾರಿ, ರಮೇಶ, ದೇವಿಪ್ರಸಾದ್, ಪವಿತ್ರ, ಕಾವೇರಿ, ಹರಿಣಾಕ್ಷಿ, ಪಂಚಾಯಿತಿ ಅಧಿಕಾರಿ ವೀಣಾ, ತೋಟಗಾರಿಕಾ ಅಧಿಕಾರಿ ಗಣೇಶ ಉಪಸ್ಥಿತರಿದ್ದರು.