ಮಡಿಕೇರಿ, ಮಾ. 5: ಪ್ರತಿಯೊಬ್ಬರೂ ಪರಿಸರದಲ್ಲಿ ಹೆಚ್ಚು ಗಿಡಮರಗಳನ್ನು ಬೆಳೆಸಿ ಪ್ರಾಕೃತಿಕ ಅಸಮತೋಲನ ತಡೆಯುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಲ್. ಮಂಜುನಾಥ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಸಮಿತಿ ಇವರ ಸಹಯೋಗದೊಂದಿಗೆ ನಗರದ ಅರಸು ಭವನದಲ್ಲಿ ಶುಕ್ರವಾರ ನಡೆದ ಕೊಡಗು ಜಿಲ್ಲಾ ಮಟ್ಟದ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಪ್ರಧಾನ ಹಾಗೂ ಹಸಿರು- ನನಸಾದ ಕನಸು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರಾಕೃತಿಕ ಸಂಪನ್ಮೂಲವನ್ನು ಉಳಿಸಿ ಮುಂದಿನ ಪೀಳಿಗೆಗೆ ಯಥಾವತ್ತಾಗಿ ನೀಡಬೇಕು ಎಂದರು. ಪರಿಸರ ಪ್ರಕೃತಿಯ ಅವಿಭಾಜ್ಯ ಅಂಗ. ಅರಣ್ಯ ಮತ್ತು ವನ್ಯಜೀವಿಗಳಿಗೆ ಯಾವದೇ ರೀತಿಯ ಧಕ್ಕೆ ಉಂಟುಮಾಡಬಾರದು ಎಂದರು.
ಪರಿಸರ ಮಿತ್ರ ಶಾಲಾ ಕಾರ್ಯಕ್ರಮವು ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸಿ, ಅವರನ್ನು ಭವಿಷ್ಯದಲ್ಲಿ ಪರಿಸರ ಸಂರಕ್ಷಣೆಗೆ ತೊಡಗಿಸಲು ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಪ್ರಯುಕ್ತ ಹೊರತರಲಾದ ಹಸಿರು ನನಸಾದ ಕಸನು ಎಂಬ ಶಾಲಾ ಪರಿಸರದ ಮಾಹಿತಿಯನ್ನು ಒಳಗೊಂಡ ಪುಸ್ತಕವನ್ನು ಹಿರಿಯ ಪರಿಸರ ಅಧಿಕಾರಿ ಉದಯ ಕುಮಾರ್ ಅವರು ಬಿಡುಗಡೆ ಮಾಡಿ ಪರಿಸರದಲ್ಲಿ ನದಿ, ಕೆರೆ ಸೇರಿದಂತೆ ಜಲಮೂಲಗಳು ಮಲಿನಗೊಳ್ಳುತ್ತಿವೆ. ನೀರನ್ನು ಮಿತವಾಗಿ ಬಳಸುವ ಮೂಲಕ ನೀರಿನ ಸಂರಕ್ಷಣೆ ಮಾಡಬೇಕು. ಕಸವನ್ನು ಮೂಲದಲ್ಲೇ ವಿಂಗಡಿಸಬೇಕು. ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಸ್ನೇಹಿ ವಸ್ತುಗಳನ್ನು ಬಳಸುವಂತಾಗಬೇಕು ಎಂದು ಅವರು ತಿಳಿಸಿದರು.
ಜಿ.ಪಂ. ಸಹಾಯಕ ಕಾರ್ಯದರ್ಶಿ ಹೆಚ್.ಎಸ್.ಬಾಬು ಅವರು ಮಾತನಾಡಿ ಪರಿಸರ ಮಿತ್ರ ಕಾರ್ಯಕ್ರಮವು ಮಕ್ಕಳಲ್ಲಿ ಪರಿಸರ ಕಾಳಜಿ ಬೆಳೆಸಲು ಉತ್ತಮ ವೇದಿಕೆ ಒದಗಿಸುತ್ತದೆ. ಆ ನಿಟ್ಟಿನಲ್ಲಿ ಪ್ರಕೃತಿ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.
ಮಡಿಕೇರಿ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ ರಾದ ಡಾ.ವಿಜಯ ಅಂಗಡಿ ಅವರು ಮಾತನಾಡಿ ಪರಿಸರ ಪ್ರೇಮಿ ಸಾಲು ಮರದ ತಿಮ್ಮಕ್ಕ ಅವರ ಪತಿ ಯೊಂದಿಗೆ ಸೇರಿ ನೆಟ್ಟ ಗಿಡಗಳು ಇಂದು ಹೆಮ್ಮರ ವಾಗಿ ಪರಿಸರಕ್ಕೆ ಉತ್ತಮ ಕೊಡುಗೆ ನೀಡುತ್ತಿವೆ ಎಂದರು.
ಪ್ರತಿನಿತ್ಯ ಜೀವನದ ಚಟುವಟಿಕೆ ಗಳಲ್ಲಿ ಆಡಂಬರ ಬಿಟ್ಟು, ಪರಿಸರ ಪೂರಕ ಹವ್ಯಾಸ ಬೆಳೆಸಿಕೊಂಡರೆ ನೀರು, ಪೆಟ್ರೋಲ್ ಮತ್ತಿತರ ಸಂಪನ್ಮೂಲ ಸಂರಕ್ಷಿಸಬಹುದಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಪರಿಸರ ಅಧಿಕಾರಿ ಜಿ.ಆರ್. ಗಣೇಶ್ ಅವರು ಮಾತನಾಡಿ ಪರಿಸರಮಿತ್ರ ಶಾಲಾ ಕಾರ್ಯಕ್ರಮವು ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಪರಿಸರ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸಲು ಸಹಕಾರಿಯಾಗಲಿದೆ ಎಂದರು.
ಪರಿಸರಮಿತ್ರ ಕಾರ್ಯಕ್ರಮದ ಕುರಿತು ವಿವರಣೆ ನೀಡಿದ ಕಾರ್ಯಕ್ರಮ ಜಿಲ್ಲಾ ಸಂಚಾಲಕ ಟಿ.ಜಿ.ಪ್ರೇಮ್ ಕುಮಾರ್ ಅವರು ಶಾಲೆಗಳಲ್ಲಿ ಸ್ವಚ್ಛತೆಯೊಂದಿಗೆ ಪರಿಸರಸ್ನೇಹಿ ಹಾಗೂ ಸುಂದರ ಹಸಿರು ಪರಿಸರ ಶಾಲೆಗಳನ್ನಾಗಿ ರೂಪಿಸಲು ಸಾಧ್ಯ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಗಾಯತ್ರಿ, ಜಿಲ್ಲಾ ಬಿಸಿಎಮ್ ಅಧಿಕಾರಿ ಆರ್ ಅವಿನ್, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಆಯುಕ್ತರಾದ ಜಿಮ್ಮಿ ಸ್ವಿಕೇರಾ, ಉಪ ಪರಿಸರ ಅಧಿಕಾರಿ ಡಾ.ಸುಧಾ ಸೋಮೆಲತಾ ಇತರರು ಇದ್ದರು. ಸುಧಾ ಎಂ. ಕೆ. ಅವರು ನಿರೂಪಿಸಿದರು. ಕಡಗದಾಳು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಗಳು ಪರಿಸರ ಗೀತೆ ಹಾಡಿದರು. ಬಿಆರ್ಸಿ, ಕೆ.ವಿ. ರಂಜಿತ್ ವಂದಿಸಿದರು.
ಚೆಟ್ಟಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾ ಮಟ್ಟದ ಪ್ರಶಸ್ತಿ: ಉತ್ತಮ ಪರಿಸರ ಹೊಂದಿರುವ ಚೆಟ್ಟಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು 2018-19 ನೇ ಸಾಲಿನ ಜಿಲ್ಲಾಮಟ್ಟದ ಪರಿಸರ ಸ್ನೇಹಿ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಪಡೆದುಕೊಂಡಿತು. ಶಾಲೆಗೆ ಪ್ರಶಸ್ತಿಯೊಂದಿಗೆ 30 ಸಾವಿರ ರೂ. ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ದ್ವಿತೀಯ ಸ್ಥಾನ ಪಡೆದ ಹತ್ತು ಹಸಿರು ಶಾಲೆಗಳಿಗೆ 5 ಸಾವಿರ ರೂ. ನಗದು ಬಹುಮಾನ, ತೃತೀಯ ಸ್ಥಾನ ಪಡೆದ 10 ಶಾಲೆಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಹಸಿರು ಶಾಲಾ ಪ್ರಶಸ್ತಿ ಪಡೆದ ಶಾಲೆಗಳ ವಿವರ: ಹಾಕತ್ತೂರು ಸರ್ಕಾರಿ ಪ್ರೌಢಶಾಲೆ, ಗೋಣಿ ಮರೂರು ಹಿರಿಯ ಪ್ರಾಥಮಿಕ ಶಾಲೆ, ಶಾಂತಳ್ಳಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಅಂಕನಳ್ಳಿ ಸರ್ಕಾರಿ ಪ್ರೌಢಶಾಲೆ, ದೇವಣಗೇರಿ ಬಿಸಿ ಪ್ರೌಢ ಶಾಲೆ, ಕಾರುಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾತೂರು ಪ್ರೌಢ ಶಾಲೆ, ಚೂರಿಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆಗ್ಗಳ ಸರ್ಕಾರಿ ಪ್ರೌಢಶಾಲೆ ಮತ್ತು ಕುಶಾಲನಗರ ಬಾಲಕಿಯರ ಸರ್ಕಾರಿ ಪ್ರೌಢಶಾಲೆ.
ಹಳದಿ ಶಾಲಾ ಪ್ರಶಸ್ತಿ ಪಡೆದ ಶಾಲೆಗಳು: ಕರಡಿಗೂಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ದೇವಣಗೇರಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಅಭ್ಯತ್ಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಮ್ಮತ್ತಿ ಒಂಟಿಯಂಗಡಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಕೊಡಗರಹಳ್ಳಿ ಸುಂಟಿಕೊಪ್ಪ ನಾಡು ಪ್ರೌಢಶಾಲೆ, ಟಿ.ಶೆಟ್ಟಿಗೇರಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಚೆಯ್ಯಂಡಾಣೆ ನರಿಯಂಡದ ಕೇಂದ್ರ ಪ್ರೌಢಶಾಲೆ, ನಂಜರಾಯಪಟ್ಟಣ ಪ್ರೌಢಶಾಲೆ, ಕಡಗದಾಳು ಸರ್ಕಾರಿ ಪ್ರೌಢಶಾಲೆ, ಕೊಡಗರಹಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ.