ಹಿಂದೂಗಳ ವಿರುದ್ಧ ಅವಹೇಳನ
ಲಾಹೋರ್ ಮಾ. 6: ಸದ್ಯ ಪಾಕಿಸ್ತಾನ ಮತ್ತು ಭಾರತ ನಡುವೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು ಈ ಮಧ್ಯೆ ಹಿಂದೂಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಪಾಕಿಸ್ತಾನದ ಪಂಜಾಬ್ ಸಚಿವ ಫಯಾಜ್ ಉಲ್ ಹಸ್ಸನ್ ಚೋಹನ್‍ರನ್ನು ಸಂಪುಟದಿಂದ ವಜಾ ಮಾಡಲಾಗಿದೆ. ಪಂಜಾಬ್ ಸರ್ಕಾರದಲ್ಲಿ ಮಾಹಿತಿ ಹಾಗೂ ಸಂಸ್ಕೃತಿ ಸಚಿವ ಫಯಾಜ್ ಹಿಂದೂಗಳ ವಿರುದ್ಧ ಹೇಳಿಕೆ ನೀಡಿದ್ದರು. ಇದಕ್ಕೆ ತೀವ್ರ ಟೀಕೆಗಳು ವ್ಯಕ್ತವಾಗಿತ್ತು. ಈ ಹಿನ್ನೆಲೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಪಂಜಾಬ್ ಮುಖ್ಯಮಂತ್ರಿ ಉಸ್ಮಾನ್ ಬುಜ್ದಾರ್‍ಗೆ ಸೂಚನೆ ನೀಡಿದ್ದರು. ಅದರಂತೆ ಅವರನ್ನು ಸಂಪುಟದಿಂದ ವಜಾ ಮಾಡಲಾಗಿದೆ. ಹಿಂದೂಗಳ ವಿರುದ್ಧ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕ್ಕಿದ್ದ ಫಯಾಜ್ ನಂತರ ಎಚ್ಚೆತ್ತು ಹೇಳಿಕೆಗೆ ಕ್ಷಮೆ ಕೇಳುತ್ತೇನೆ. ಪಾಕಿಸ್ತಾನದಲ್ಲಿರುವ ಹಿಂದು ಸಮುದಾಯ ಉದ್ದೇಶಿಸಿ ನಾನು ಈ ಹೇಳಿಕೆ ನೀಡಿಲ್ಲ. ನಾನು ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಲ್ಲಿನ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದೆ ಎಂದು ಹೇಳಿದ್ದಾರೆ.
ಕಿಸಾನ್ ಸಮ್ಮಾನ್ : ಪ್ರಧಾನಿ ಗೊಂದಲ
ರಾಯಚೂರು, ಮಾ. 3: ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡುವ ಭರದಲ್ಲಿ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳಿಗೆ ಸಂಬಂಧಿಸಿದಂತೆ ರಾಜ್ಯದ ರೈತರಿಗೆ ಸುಳ್ಳು ಹೇಳಿದ್ದಾರೆ. ಇಂದು ಕಲಬುರಗಿಯಲ್ಲಿ ಬಿಜೆಪಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್-ಜೆಡಿಎಸ್ ಸರ್ಕಾರ ರಾಜ್ಯದ ಸಣ್ಣ ಮತ್ತು ಮಧ್ಯಮ ರೈತರ ಮಾಹಿತಿ ನೀಡಲು ವಿಫಲವಾಗಿದೆ. ಹೀಗಾಗಿಯೇ ಇಲ್ಲಿನ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯ ಲಾಭ ಸಿಕ್ಕಿಲ್ಲ ಎಂದು ದೂರಿದರು. ಪ್ರಧಾನಿ ಹೇಳಿಕೆ ಕುರಿತು ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್ ವರದಿಗಾರರು ಫ್ಯಾಕ್ಟ್ ಚೆಕ್ ಮಾಡಿದ್ದು, ರಾಯಚೂರು ಜಿಲ್ಲೆಯಲ್ಲಿ ಒಟ್ಟು 54, 926 ರೈತರು ಕಿಸಾನ್ ಸಮ್ಮಾನ್ ಯೋಜನೆಗೆ ಅರ್ಹರಾಗಿದ್ದು, 4 ಸಾವಿರ ರೈತರ ಖಾತೆಗ ಈಗಾಗಲೇ ಹಣ ಜಮೆಯಾಗಿರುವದು ಅಂಕಿ ಅಂಶಗಳಿಂದ ತಿಳಿದುಬಂದಿದೆ. ಕಿಸಾನ್ ಸಮ್ಮಾನ್ ಯೋಜನೆಗೆ ಸಂಬಂಧಿಸಿದಂತೆ ಒಟ್ಟು 2.20.000 ಸಣ್ಣ ಮತ್ತು ಮಧ್ಯಮ ರೈತರನ್ನು ಗುರುತಿಸಲಾಗಿದ್ದು, ಈ ಪೈಕಿ 84,961 ರೈತರ ವಿವರ ನೀಡಲಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ. ಈಗಾಗಲೇ ಜಿಲ್ಲೆಯ 4000 ರೈತರು ಕಿಸಾನ್ ಸಮ್ಮಾನ್ ಯೋಜನೆಯ ಲಾಭ ಪಡೆದಿದ್ದು, ಅವರ ಬ್ಯಾಂಕ್ ಖಾತೆಗೆ ತಲಾ ರೂ. 2 ಸಾವಿರ ಜಮೆ ಆಗಿದೆ. ಈ ಕುರಿತು ಅವರ ಮೊಬೈಲ್ ಸಂದೇಶ ಸಹ ಕಳುಹಿಸಿರುವದು ಮೂರು ದಿನಗಳ ಹಿಂದಷ್ಟೇ ನಡೆದ ರಾಜ್ಯಮಟ್ಟದ ವೀಡಿಯೋ ಕಾನ್ಫೆರೆನ್ಸ್‍ನಲ್ಲಿ ತಿಳಿಸಲಾಗಿತ್ತು. ಅಲ್ಲದೆ ರಾಯಚೂರು ಜಿಲ್ಲಾ ಕೃಷಿ ಜಂಟಿ ನಿರ್ದೇಶಕರು ಸಹ ಇದನ್ನು ಖಚಿತಪಡಿಸಿದ್ದಾರೆ.
ಉಗ್ರ ಸಂಘಟನೆಯ ಆಸ್ತಿ ವಶ
ಇಸ್ಲಾಮಾಬಾದ್, ಮಾ. 3: ಕಳೆದ ಕೆಲವು ದಿನಗಳಲ್ಲಿ ನಿಷೇಧಿತ ಉಗ್ರ ಸಂಘಟನೆಗಳ ವಿರುದ್ಧ ಕ್ರಮವನ್ನು ತೀವ್ರಗೊಳಿಸಿರುವ ಪಾಕಿಸ್ತಾನ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ನೇತೃತ್ವದ ಜಮಾತ್-ಉದ್-ದವಾ ಸಂಘಟನೆಯ ಆಸ್ತಿಗಳನ್ನು ವಶಕ್ಕೆ ಪಡೆದಿದೆ. ಪಾಕಿಸ್ತಾನದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಪ್ರಾಧಿಕಾರದ ಮಾಹಿತಿಯ ಪ್ರಕಾರ ಜೆಯುಡಿ ಹಾಗೂ ಅದರ ಸಹ ಸಂಘಟನೆ ಎಫ್‍ಐಎಫ್‍ನ ಆಸ್ತಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಎರಡು ಇಸ್ಲಾಮಿಕ್ ಸೆಮಿನರಿಗಳನ್ನೂ ವಶಕ್ಕೆ ಪಡೆಯಲಾಗಿದೆ. ಚಕ್ವಾಲ್ ಮತ್ತು ಅಟಾಕ್ ಜಿಲ್ಲೆಗಳಲ್ಲಿ ಹೆಚ್ಚಿನ ಕ್ರಮ ಜರುಗಿಸಲಾಗಿದೆ ಎಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಖ್ಯಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ. ಎರಡೂ ಜಿಲ್ಲೆಗಳಲ್ಲಿ ವಶಕ್ಕೆ ಪಡೆಯಲಾಗಿರುವ ಮದರಸಾಗಳಲ್ಲಿ ಸರ್ಕಾರದ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ನಾಮದ ಬಗ್ಗೆ ಸಿದ್ದು ಸ್ಪಷ್ಟನೆ
ಬೆಂಗಳೂರು, ಮಾ. 6: ನಾಮ ಇಟ್ಟುಕೊಂಡವರನ್ನು ಕಂಡರೆ ನನಗೆ ಭಯವಾಗತ್ತೆ ಎಂದಿದ್ದ ಕರ್ನಾಟಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ವ್ಯಾಪಕ ಚರ್ಚೆಯಾಗುತ್ತಿದ್ದಂತೆ ಅವರು ತಮ್ಮ ಹೇಳಿಎಕೆ ಸಂಬಂಧ ಸ್ಪಷ್ಟನೆ ನಿಡಿದ್ದಾರೆ. “ಹೌದು, ತಿಲಕ ಇಟ್ಟುಕೊಂಡವರನ್ನು ನೋಡಿದರೆ ಭಯವಾಗುತ್ತೆ ಎಂದು ಹೇಳಿರುವದು ನಿಜ. ಬಹಳಷ್ಟು ಕ್ರಿಮಿನಲ್‍ಗಳು ತಮ್ಮ ರಕ್ಷಣೆಗಾಗಿ ತಿಲಕ ಧರಿಸಿ ಮೆರೆದಾಡುತ್ತಿದ್ದಾರೆ. ಇವರು ಧರ್ಮದ್ರೋಹಿಗಳು ಮಾತ್ರವಲ್ಲ, ಸಮಾಜ ದ್ರೋಹಿಗಳು ಕೂಡಾ. ಅವರನ್ನು ದೃಷ್ಟಿಯಲ್ಲಿಟ್ಟುಕೊಂಡೇ ನಾನು ಈ ಹೇಳಿಕೆ ನೀಡಿದ್ದೆ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಕುಂಕುಮ ನಾಮ, ಕಾವಿ ಬಟ್ಟೆಗಳೆಲ್ಲ ಭಾರತೀಯ ಧಾರ್ಮಿಕ ಪರಂಪರೆಯ ಭಾಗ, ಅದಕ್ಕೊಂದು ಪಾವಿತ್ರ್ಯ ಇತ್ತು. ಆದರೆ ಯಾವಾಗ ಬಿಜೆಪಿ ನಾಯಕರೆಲ್ಲ ಇವುಗಳನ್ನೆಲ್ಲ ರಾಜಕೀಯಕ್ಕೆ ದುರುಪಯೋಗ ಮಾಡಿಕೊಳ್ಳಲು ಹೊರಟರೋ, ಅದ ನಂತರ ಕುಂಕುಮ, ಕಾವಿ ಹಾಕಿಕೊಂಡವರನ್ನು ಜನತೆ ಸಂಶಯ-ಭಯದಿಂದ ನೋಡುವಂತಾಗಿದೆ. ನಾನು ಬಿಜೆಪಿ ನಾಯಕರಿಗಿಂತ ಒಳ್ಳೆಯ ಹಿಂದು. ನಾನೆಂದೂ ಅವರಂತೆ ತಿಲಕ, ಕಾವಿ, ಧರ್ಮಗಳನ್ನು ರಾಜಕೀಯಕ್ಕೆ ದುರುಪಯೋಗ ಪಡಿಸಿಕೊಂಡಿಲ್ಲ. ನನ್ನದು ಜನಪರ ರಾಜಕಾರಣ, ದೇವರು, ಧರ್ಮ ಎಲ್ಲ ನನ್ನ ಮನೆಯೊಳಗಿನ ನಂಬಿಕೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ದಾಳಿಯಲ್ಲಿ ಉಗ್ರ ಕಟ್ಟಡ ಧ್ವಂಸವಾಗಿಲ್ಲ
ನವದೆಹಲಿ, ಮಾ. 3: ಭಾರತೀಯ ವಾಯುಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಬಾಲಕೋಟ್‍ನ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಯಾವದೇ ಕಟ್ಟಡ ಧ್ವಂಸವಾಗಿಲ್ಲ. ದಾಳಿ ನಡೆದಿದೆ ಎನ್ನಲಾಗುತ್ತಿರುವ ಕಟ್ಟಡ ಈಗಲೂ ಸುಸಜ್ಜಿತವಾಗಿರುವದು ಸ್ಯಾಟ್ ಲೈಟ್ ಚಿತ್ರಗಳಿಂದ ಬಹಿರಂಗವಾಗಿದೆ. ಪಾಕಿಸ್ತಾನದ ಬಾಲಕೋಟ್‍ನಲ್ಲಿ ಭಾರತ ವೈಮಾನಿಕ ದಾಳಿ ನಡೆಸಿ, ಸುರಕ್ಷಿತವಾಗಿ ಮರಳಿದ ಬಗ್ಗೆ ಸಾಕಷ್ಟು ಅನುಮಾನ ಹಾಗೂ ಊಹಾಪೆÇೀಹಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ದಾಳಿ ನಡೆದ ಆರು ದಿನಗಳ ನಂತರ, ಮಾರ್ಚ್ 4 ರಂದು ತೆಗೆದ ಉಪಗ್ರಹ ಚಿತ್ರಗಳನ್ನು ಪರಿಶೀಲಿಸಿದ್ದು, ಜೈಶ್‍ಗೆ ಸೇರಿದ ಮದರಸಾದ ಆರು ಕಟ್ಟಡಗಳು ಸುಸಜ್ಜಿತವಾಗಿರುವದು ಸ್ಪಷ್ಟವಾಗಿದೆ. ಅಮೇರಿಕಾ ಮೂಲದ ಖಾಸಗಿ ಸ್ಯಾಟ್‍ಲೈಟ್ ನಿರ್ವಾಹಕ ಪ್ಲಾನೆಟ್ ಲ್ಯಾಬ್ಸ್ ಇಂಕ್ ಈ ಹೈ ರೆಸಲ್ಯೂಷನ್ ಚಿತ್ರಗಳನ್ನು ನೀಡಿದ್ದು, ಭಾರತ ದಾಳಿ ನಡೆಸಿದೆ ಎನ್ನಲಾಗುತ್ತಿರುವ ಕಟ್ಟಡದ ಚಿತ್ರ ಸ್ಪಷ್ಟವಾಗಿ ಕಾಣುತ್ತಿದೆ. ಕಟ್ಟಡಗಳ ಮೇಲ್ಛಾವಣಿಗಳಲ್ಲಿ ಯಾವದೇ ರಂಧ್ರಗಳಿಲ್ಲ, ಗುಂಡಿನ ದಾಳಿ ನಡೆಸಿದ ಅಥವಾ ಸ್ಫೋಟಿಸಿದ ಬಗ್ಗೆ ಯಾವದೇ ಗುರುತುಗಳಿಲ್ಲ. ಗೋಡೆಗಳು, ಮದ್ರಸಾ ಸುತ್ತಲೂ ಇರುವ ಮರಗಳು ಹಾಗೆಯೇ ಇವೆ. ವೈಮಾನಿಕ ದಾಳಿಯ ಯಾವದೇ ಚಿಹ್ನೆಗಳು ಚಿತ್ರಗಳಲ್ಲಿ ಇಲ್ಲ. ಈ ಫೆÇೀಟೋಗಳಲ್ಲಿ ಭಾರತೀಯ ವಾಯುಸೇನೆ ದಾಳಿ ಮಾಡಿತ್ತು ಎನ್ನಲಾದ ಉಗ್ರ ನೆಲೆಗಳು ಸುರಕ್ಷಿತವಾಗಿರುವದು ಸ್ಪಷ್ಟವಾಗಿದೆ.
ವೀಸಾ ಅವಧಿ ಕಡಿತಗೊಳಿಸಿದ ಅಮೇರಿಕಾ
ಇಸ್ಲಾಮಾಬಾದ್, ಮಾ. 6: ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಡೆತದ ಮೇಲೆ ಹೊಡೆತ ಬೀಳುತ್ತಿದ್ದು, ಆರ್ಥಿಕ ನೆರವನ್ನು ಕಡಿತಗೊಳಿಸಿದ್ದ ಅಮೇರಿಕಾ ಈಗ ಪಾಕ್‍ಗೆ ಮತ್ತೊಂದು ಹೊಡೆತ ನೀಡಿದೆ. ಪಾಕಿಸ್ತಾನದ ನಾಗರಿಕರಿಗೆ ನೀಡಲಾಗುವ ವೀಸಾ ಅವಧಿಯನ್ನು 5 ವರ್ಷದಿಂದ ಕೇವಲ 3 ತಿಂಗಳಿಗೆ ಇಳಿಕೆ ಮಾಡಲಾಗಿದೆ. ಈ ಹೊಸ ನಿಯಮ ಪಾಕಿಸ್ತಾನದ ಪೌರತ್ವ ಹೊಂದಿರುವ ನಾಗರಿಕರಿಗಷ್ಟೇ ಅಲ್ಲದೇ ಪಾಕಿಸ್ತಾನದ ಪತ್ರಕರ್ತರಿಗೂ ಅನ್ವಯವಾಗಲಿದೆ ಎಂದು ಅಮೇರಿಕಾ ರಾಯಭಾರಿ ಕಚೇರಿ ವಕ್ತಾರರು ತಿಳಿಸಿದ್ದಾರೆ. ಇದೇ ವೇಳೆ ಪಾಕಿಸ್ತಾನದ ವೀಸಾ ಅರ್ಜಿಯ ಶುಲ್ಕವನ್ನೂ ಅಮೇರಿಕಾ 160 ಡಾಲರ್‍ನಿಂದ 192 ಏರಿಕೆ ಮಾಡಿದೆ.
ಮೈಸೂರು 3ನೇ ಸ್ವಚ್ಛ ನಗರ
ಮೈಸೂರು, ಮಾ. 6: ಸತತ ಎರಡು ಬಾರಿ ‘ದೇಶದ ನಂ.1 ಸ್ವಚ್ಛ ನಗರಿ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಸಾಂಸ್ಕೃತಿಕ ನಗರಿ ಮೈಸೂರು ಈ ಬಾರಿ ದೇಶದ ಮೂರನೇ ಸ್ವಚ್ಛ ನಗರ ಎಂಬ ಗೌರವಕ್ಕೆ ಪಾತ್ರವಾಗಿದೆ. ಇಂದು ದೆಹಲಿಯಲ್ಲಿ ನಡೆದ ಸ್ವಚ್ಛ ಸರ್ವೇಕ್ಷಣೆ - 2019 ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಇಂದೋರ್ ಸತತ ಮೂರನೇ ಬಾರಿ ಮೊದಲ ಸ್ಥಾನ ಪಡೆದುಕೊಂಡಿದೆ. ಅಂಬಿಕಾಪೂರ್ ಎರಡನೇ ಸ್ಥಾನದಲ್ಲಿದ್ದು, ಮೈಸೂರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. 2015 ಮತ್ತು 2016ರಲ್ಲಿ ಸತತ ಎರಡು ಬಾರಿ ಮೊದಲ ಸ್ಥಾನ ಪಡೆದಿದ್ದ ಮೈಸೂರು ಕಳೆದ ವರ್ಷ ಐದನೇ ಸ್ಥಾನಕ್ಕೆ ಕುಸಿದಿತ್ತು.