ಸುಂಟಿಕೊಪ್ಪ, ಮಾ. 5: ಕಟ್ಟಡ ನಿರ್ಮಾಣದ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಸಂದರ್ಭ ಆಯತಪ್ಪಿ ಕೆಳಗೆ ಬಿದ್ದು ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕಾರ್ಮಿಕ ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ರಾತ್ರಿ ಮೃತಪಟ್ಟಿದ್ದಾನೆ.
ಇಲ್ಲಿನ ಮಧುರಮ್ಮ ಬಡಾವಣೆಯ ನಿವಾಸಿ ವಳ್ಳಿ ಎಂಬವರ ಪುತ್ರ ಹರೀಶ್ (20) ಎಂಬಾತನೇ ಮೃತಪಟ್ಟ ಯುವಕ. ಕಳೆದ 2 ವಾರಗಳ ಹಿಂದೆ ಕುಶಾಲನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡವನ್ನೇರಿ ಸೆಂಟ್ರಿಂಗ್ ಕೆಲಸ ಮಾಡುತ್ತಿದಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾನೆ. ಇದರಿಂದ ತಲೆಗೆ ತೀವ್ರವಾಗಿ ಗಾಯಗೊಂಡು ಕೋಮಾಸ್ಥಿತಿಗೆ ತಲಪಿದ್ದ ಈತನಿಗೆ ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಮಧ್ಯೆ ಗಾಯಾಳು ಹರೀಶ್‍ನನ್ನು ಮೈಸೂರಿನಿಂದ ಮಡಿಕೇರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ರಾತ್ರಿ ಮೃತಪಟ್ಟಿದ್ದಾನೆ.