‘ತತ್ಪುರಷಾಯ ವಿದ್ಮತೇ ಮಹಾದೇವಾಯ ಧೀಮಹೀ|
ತನ್ನೋ ರುದ್ರಃ ಪ್ರಚೋದಯಾಆತ್||
ನಿರಾಕಾರ ಸ್ವರೂಪವಾದ ಪರಬ್ರಹ್ಮ ಶಕ್ತಿಯೇ, ಸೃಷ್ಟಿಯ ಆದ್ಯ ಶಕ್ತಿಯೇ, ಮೂಲ ಶಕ್ತಿಯೇ, ರಚನಾ ಶಕ್ತಿಯೇ ಭಗವಾನ್ ಮಹಾಶಿವನ ಸ್ವರೂಪವನ್ನು ಧ್ಯಾನಿಸುತ್ತ ಒಂದು ಬಿಲ್ವದಳ ಶಿವಪಾದಕೆ... ಓಂ ನಮಃ ಶಿವಾಯ...
ಭಗವಂತನು ನಮ್ಮ ಇಂದ್ರಿಯಗಳಿಗೆ ಕಾಣುವದಿಲ್ಲ. ಕೇವಲ ಹೃದಯ, ಮನಸ್ಸು ಮತ್ತು ಬುದ್ಧಿಗಳಿಂದ ಆ ಶಕ್ತಿಯನ್ನು ಅನುಭವಿಸು ಎಂದು ಉಪನಿಷತ್ತು ಹೇಳುತ್ತದೆ. ನಿರಾಕಾರಿಯಾಗಿ ಸರ್ವ ವ್ಯಾಪಕನಾಗಿರುವ ಆ ಪರಬ್ರಹ್ಮ ಶಕ್ತಿಯನ್ನು ನಮಗಿಷ್ಟವಾದ ರೂಪಗಳಿಂದ ಆಕೃತಿಗಳಿಂದ ಪೂಜಿಸಿ, ಜಪಿಸಿ ಧನ್ಯತೆಯನ್ನು ಪಡೆಯುವ ಸ್ವಾತಂತ್ರ್ಯವು ಎಲ್ಲರಿಗೂ ಇದೆ. ಮೊದಲು ಸಾಕಾರ ಉಪಾಸನೆ ಮಾಡಿದಾಗ ಅದು ನಮ್ಮಲ್ಲಿ ನಿರಾಕಾರದ ಅರಿವನ್ನು ಮೂಡಿಸುತ್ತದೆ. ಒಂದು ದೈವೀ ಕರ್ಮವು ‘ಯಜ್ಞ’ವೆನಿಸಬೇಕಾದರೆ ಅದನ್ನು ಕಾಯೇನ ವಾಚಾ ಮನಸಾ ಶ್ರದ್ಧಾ ಭಕ್ತಿಗಳಿಂದ ಸಮರ್ಪಣಾ ಭಾವದೊಂದಿಗೆ ಮಾಡಬೇಕು. ನಮ್ಮ ಹಿಂದಿನ ಅನೇಕ ಜನ್ಮಗಳಲ್ಲಿ ಮಾಡಿದ ಸುಕೃತ ಫಲದಿಂದ ಈ ಮಾನವ ಜನ್ಮ ಲಭಿಸಿರುತ್ತದೆ. ಈ ಜನ್ಮದ ಸಾರ್ಥಕತೆ ಉಂಟಾಗಬೇಕಾದರೆ ಈ ಜನ್ಮದಲ್ಲಿ ಸತ್ಕರ್ಮಗಳನ್ನು ಮಾಡುತ್ತಿರಬೇಕು. ಧರ್ಮದ ಮಾರ್ಗದಲ್ಲಿ ಮುನ್ನಡೆದು ಭಗವಂತನಲ್ಲಿ ಭಕ್ತಿ, ಶ್ರದ್ಧೆ, ಸಮರ್ಪಣಾ ಭಾವದ ಪೂಜೆ, ಜಪ, ತಪ, ಆರಾಧನೆಗಳಿಂದ ನಮ್ಮಲ್ಲಿ ಅಡಗಿರುವ ಆ ಗುಪ್ತಶಕ್ತಿ ಜಾಗೃತವಾಗುತ್ತದೆ. ಆಗ ನಮ್ಮ ವ್ಯಕ್ತಿತ್ವವು ಮೇಲ್ಮಟ್ಟಕ್ಕೇರುತ್ತ ನಮ್ಮನ್ನು ಸಾಧನೆಯ ಮಾರ್ಗದತ್ತ ಕೊಂಡೊಯ್ಯುತ್ತದೆ. ನಾನು ದೇಹವಲ್ಲ... ಈ ದೇಹವನ್ನೇ ನಿಯಂತ್ರಿಸುವ ದೇಹದಲ್ಲಿದ್ದು ದೇಹಕ್ಕೆ ಅತೀತವಾದ ಎಂದೆಂದಿಗೂ ನಂದದ ‘ಜ್ಯೋತಿ ಸ್ವರೂಪ’ ಆ ಗುಪ್ತ ಶಕ್ತಿಯೇ ‘ಆತ್ಮಶಕ್ತಿ’. ಜನನ, ಮರಣ, ದುಃಖ, ದಾರಿದ್ರ್ಯ, ವ್ಯಾಧಿ, ಚಿಂತೆಗಳ ಸಂತಾಪದಲ್ಲಿರುವ ಮಾನವನಿಗೆ ‘ಆತ್ಮ’ದ ಅರಿವು ಮೂಡಿದಾಗ ಬದುಕಿನಲ್ಲಿ ಸ್ವಾರ್ಥರಹಿತವಾಗಿ ಅರ್ಥಪೂರ್ಣವಾಗಿ ಬದುಕಬಲ್ಲ ಪುಣ್ಯಾತ್ಮರು ನಾವಾಗುತ್ತೇವೆ. ಆ ಆತ್ಮ- ಪರಮಾತ್ಮರ ಮಧುರ ಮಿಲನವೇ ಈಶ್ವರಾನುಭೂತಿ’...
ವೇದಾಂತವು ಪರಮ ತತ್ವವನ್ನು ‘ಬ್ರಹ್ಮ’ ಎಂದು ಕರೆದಿದೆ. ಅದನ್ನೇ ತಂತ್ರಶಾಸ್ತ್ರದಲ್ಲಿ ‘ಪರಮಶಿವ’ ಎಂದು ಕರೆದಿದ್ದಾರೆ. ‘ಶಿವತತ್ವವು’ ನಿರ್ವಿಕಾರವಾದುದು. ಅಂದರೆ ಬದಲಾವಣೆ ಹೊಂದದೆ ಇರುವಂತದ್ದು. ಪರಮ ಶಿವನೇ ಭಿನ್ನ ಭಿನ್ನವಾಗಿ ಕಂಡು ಬಂದಾಗ ಅದನ್ನೇ ‘ಜಗತ್ತು’ ಎನ್ನುತ್ತೇವೆ. ಆಧುನಿಕ ವಿಜ್ಞಾನ ಎಲ್ಲಾ ಬಗೆಯ ದ್ರವ್ಯದ ಮೂಲ ಸ್ಥಿತಿಗೇ ‘ಶಕ್ತಿ’ಯೇ ಕಾರಣವೆಂದು ಹೇಳುತ್ತದೆ. ಇದರ ಅರ್ಥ ಒಂದು ಮೂಲ ಭೌತಿಕ ಶಕ್ತಿಯಿಂದಲೇ ಈ ಜಗತ್ತು ನಿರ್ಮಾಣಗೊಂಡಿದೆ ಎಂದು ಇಲ್ಲಿ ಹೊರಹೊಮ್ಮುತ್ತಿರುವದು ಮನಸ್ಸು ಮತ್ತು ಭೌತಿಕ ಪದಾರ್ಥಗಳ ಮೂಲಕ ವ್ಯಕ್ತವಾಗುವ ಪರಾಶಕ್ತಿಯಿಂದಲೇ ಎಂದು ಶಿವ ಮತ್ತು ಶಕ್ತಿ ಬೇರೆಯಲ್ಲ. ಇವೆರಡೂ ಒಂದೇ ಪರಮತತ್ವದ ಕ್ರಿಯಾರಹಿತ (ಶಿವಾ) ಮತ್ತು ಕ್ರಿಯಾ ಸಹಿತ (ಶಕ್ತಿ) ಮುಖಗಳೆಂಬುವದು ತಂತ್ರಶಾಸ್ತ್ರದ ಅಭಿಮತ. ಶಿವ ತತ್ವವೇ ಕ್ರಿಯಾಸ್ಥಿತಿಯಲ್ಲಿ ‘ಶಕ್ತಿ’ ಎಂಬ ಹೆಸರು ಪಡೆಯುತ್ತದೆ. ಶಕ್ತಿಯ ತತ್ವವೇ ಸುಪ್ತಸ್ಥಿತಿಯಲ್ಲಿ ‘ಶಿವ’ನೆಂಬ ಹೆಸರು ಪಡೆಯುತ್ತದೆ. ತಂತ್ರಶಾಸ್ತ್ರದ ಪ್ರಕಾರ ಈ ಜಗತ್ತು ವಿಕಸನಗೊಂಡಿರುವದು ಪರಿಪೂರ್ಣ ಮತ್ತು ಪರಿಶುದ್ಧ ಶಿವ-ಶಕ್ತಿ ಸ್ಥಿತಿಯಿಂದ. ಆದ್ದರಿಂದಲೇ ಈ ಜಗತ್ತು ‘ಈಶ್ವರಾನುಭೂತಿಯಿಂದ ಕೂಡಿರುವಂತದ್ದು. ಈ ಈಶ್ವರಾನುಭೂತಿಯೇ ಭಕ್ತನ ಭಾವನೆಯಲ್ಲಿ ‘ಭಗವತ್ತ್ ಸ್ವರೂಪನಾಗಿ ಹೊರಹೊಮ್ಮುತ್ತದೆ. ಆ ಮಂಗಲಕರ ಭಾವವೇ ‘ಶಿವಾ’. ಈ ಜಗವೇ ಶಿವನ ಲೀಲಾರಂಗ. ಶಿವಕೃಪೆಯಿಂದಲೇ ಆಯಸ್ಸು, ಆರೋಗ್ಯ, ಐಶ್ವರ್ಯ, ಸುಖ - ಸಂಪತ್ತು ಲಭಿಸುವದೆಂದು ‘ಶ್ರೀ ಶಿವ ರಹಸ್ಯ’ದಲ್ಲಿ ತಿಳಿಸಲಾಗಿದೆ. ‘ಆತ್ಮ - ಪರಮಾತ್ಮ’ರ ಮಧುರ ಮಿಲನವೇ ಶಿವಯೋಗ! ನಮ್ಮವರು ಸ್ತ್ರೀಯನ್ನು ದೇಹ - ಪ್ರಕೃತಿಗೂ, ಆತ್ಮವನ್ನು ಪರುಷನೆಂದೂ ತಿಳಿಯುವಂತೆ ಮಾಡಿ ದೇಹ- ಆತ್ಮಗಳ ಸಂಬಂಧವನ್ನೇ ಶಿವ - ಶಕ್ತಿ ಎಂದು ಕಲ್ಪಿಸಿದ್ದಾರೆ. ಈ ಶಿವ -ಶಕ್ತಿಯರ ವಿಶೇಷ ಆರಾಧನೆಯ ದಿನವೇ ‘ಮಹಾಶಿವರಾತ್ರಿ’. ಮನುಷ್ಯ ಜೀವನವೇ ಒಂದು ರಾತ್ರಿಕಾಲ ರಾತ್ರಿಯಾಚೆಗಿನ ಅಮೃತದ ಬೆಳಕಿನಲ್ಲಿ ಜ್ಞಾನಸೂರ್ಯ ಶಿವನ ಮೊದಲ ಕಿರಣ ಸ್ಪರ್ಶಿಸುವ ಸುಖರಾತ್ರಿಯೇ ‘ಶಿವರಾತ್ರಿ’. ಶಂಕೆ, ಶೋಕ, ಶೂಲೆಗಳಿಂದ ಶವಗೊಂಡ ಮನಸ್ಸಿನ ಮಾನವನ ಬದುಕಿನಲ್ಲಿ ಜೀವನ ಶೃಂಗಾರವನ್ನು ತುಂಬುವ ಹರ್ಷದ ಹಬ್ಬವೇ ‘ಶಿವರಾತ್ರಿ’. ಸೃಷ್ಟಿ, ಸ್ಥಿತಿ, ಲಯಗಳು ಚರಾಚರ ಜಗತ್ತಿನ ಪ್ರಮುಖ ಆಯಾಮಗಳು. ಲಯವೆಂದರೆ ನಾಶವೆಂಬ ಅರ್ಥವಲ್ಲ. ಲಯವೆಂದರೆ ಪರಿವರ್ತನೆ. ಇದು ವಿಕಾಸದ ರಹಸ್ಯವು, ರೀತಿಯೂ ಹೌದು. ಸರ್ವಭೂತಗಳಲ್ಲಿಯೂ, ಈಶ್ವರನ ವಿಕಾಸದ ಅಂಶವಿದೆ. ‘ಈಶಾವಾಸ್ಯ ಮಿದಂ ಸರ್ವಮ್| ಸರ್ವವೂ ಶಿವಮಯ. ಪಂಚತತ್ವಗಳಿಂದ ಕೂಡಿರುವ ಶಿವನ ಬಾಹ್ಯ ಸ್ವರೂಪ ಅನೇಕ ಆಧ್ಯಾತ್ಮಿಕ ಭೌಮ ವಿಚಾರಗಳ ಸಂಕೇತ. ಭಗವಾನ್ ಶಿವನ ಪಂಚಮುಖಗಳು ಈಶಾನ, ತತ್ಪುರುಷ, ಅಘೋರ, ವಾಮದೇವ ಮತ್ತು ಸದ್ಯೋಜಾತ್. ತತ್ಪುರುಷ ಮುಖವು ಪೂರ್ವಾಭಿಮುಖವಾಗಿದ್ದು, ಗಾಳಿಯ ಮೇಲಿನ ನಿಯಂತ್ರಣ, ಅಂಧಕಾರ ಮತ್ತು ಅಜ್ಞಾನ ತತ್ವವನ್ನು ಪ್ರತಿನಿಧಿಸುತ್ತದೆ. ಉತ್ತರಾಭಿಮುಖವಾಗಿರುವ ಅಘೋರ ವದನವು ಅಗ್ನಿಯ ಮೇಲಿನ ಅಧಿಕಾರ, ವಿಶ್ವದ ಸ್ವೀಕಾರ್ಯ ಮತ್ತು ಸಂಸ್ಕಾರ ಶಕ್ತಿಯ ಪ್ರತಿನಿಧಿಯಾಗಿರುತ್ತದೆ. ವಾಮದೇವ ಮುಖವು ದಕ್ಷಿಣಾಭಿಮುಖವಾಗಿದ್ದು, ಜಲದ ಮೇಲಿನ ಶಕ್ತಿ. ಆ ಮೂಲಕ ಸಂರಕ್ಷಣಾ ಗುಣವನ್ನು ಪ್ರತಿಪಾದಿಸುತ್ತದೆ. ಸೃಷ್ಟಿ ಶಕ್ತಿಯ ಸಂಕೇತ. ಭೂಮಿಯ ಮೇಲಿನ ಅಧಿಕಾರವನ್ನು ಪಶ್ಚಿಮಾಭಿಮುಖವಾಗಿರುವ ಸದ್ಯೋಜಾತ ವದನವು ನಿರೂಪಿಸುತ್ತದೆ. ಕ್ಷಿತಿಜದತ್ತ ಮುಖಮಾಡುವ ಈಶಾನ ವದನಾರವಿಂದವು ಸದಾಶಿವ, ಆಕಾಶ, ಮೋಕ್ಷ ನೀಡುವ ಸ್ವರೂಪವಾಗಿದೆ, ಲೀನವಾಗುತ್ತದೆ ಆದರೂ ಒಂದು ಆಕಾರ ತಿಳಿಯುತ್ತದೆ ಎಂದರೆ ಲೀಯತೆ, ಗಮ್ಯತೆ ಸಾಕಾರ - ನಿರಾಕಾರಗಳ ಮಧ್ಯವರ್ತಿಯಾಗಿ ‘ಲಿಂಗ’ ಇದು ಶಿವ ಪ್ರತೀಕ.
ವೇದವು ವಿದ್ಯೆಗಳಲ್ಲಿ ಶ್ರೇಷ್ಠವಾದುದು. ಅದರಲ್ಲಿರುವ ‘ಶ್ರೀರುದ್ರ ನಮಕ’ದಲ್ಲಿ ‘ನಮಃ ಶಿವಾಯಚ ಶಿವ ತರಾಯಚ’ ಎಂಬ ವಾಕ್ಯದಿಂದ ಆಯ್ದ ಮಂತ್ರವೇ ಶಿವ ಪಂಚಾಕ್ಷರೀ ಎಂದರೆ ‘ನಮಃ ಶಿವಾಯ’ ಇದರೊಡನೆ ಓಂಕಾರವು ಸೇರಿ ‘ಓಂ ನಮಃ ಶಿವಾಯ’ ಎಂಬ ವೇದೋಕ್ತ ಮಂತ್ರವಾಗಿದ್ದು, ಶಿವನಾಮ ಜಪಗಳಲ್ಲಿ ಸರ್ವಶ್ರೇಷ್ಠವೆನಿಸಿರುತ್ತದೆ. ನಮ್ಮ ಸಾವು ಹೇಗೆ ನಿಶ್ಚಿತವೋ ಅದೇ ರೀತಿಯಲ್ಲಿ ಪುನಃ ಹುಟ್ಟುವದು ಅಷ್ಟೇ ನಿಶ್ಚಿತ. ಇದೊಂದು ವಿಶ್ವ ನಿಯಮದ ಸಹಜ ಚಕ್ರ. ಸುಖವಾಗಲೀ, ದುಃಖವಾಗಲೀ ಯಾವದೂ ನಿರಂತರವಲ್ಲ. ಇವುಗಳನ್ನು ಸಮಭಾವದಿಂದ ಸ್ವೀಕರಿಸಿ ಜೀವನದಲ್ಲಿ ಶಾಂತಿ, ನೆಮ್ಮದಿಗಳನ್ನು ಹೊಂದಲು ಶಿವಾನುಗ್ರಹವು ಅತ್ಯಂತ ಅವಶ್ಯ. ಸಜ್ಜನಿಕೆ, ದೈವೀಕತೆ ಮತ್ತು ಉತ್ತಮ ಭಾಗ್ಯವನ್ನು ಸಾಧಕನಿಗೆ ಕರುಣಿಸುವ ರಾತ್ರಿಯೇ ‘ಮಹಾಶಿವರಾತ್ರಿ’. ‘ಶಿವ’ನು ಸರಳತೆ, ಪ್ರಾಮಾಣಿಕತೆ ಮತ್ತು ನಿಷ್ಕಲ್ಮಶ ಮನಸ್ಸುಗಳ ಪ್ರತೀಕ. ಛಲಬಿಡದ ಸಾಧನೆಯ ಧ್ಯೋತಕ. ಧ್ಯಾನಪ್ರಿಯ ಮಹಾಶಿವ ಭಕ್ತರಿಂದ ಬಯಸುವದು ನಿಷ್ಕಲ್ಮಶ ಮತ್ತು ಪ್ರಾಮಾಣಿಕ ಭಕ್ತಿ ಮಾತ್ರ. ಎಲ್ಲಾ ಆಡಂಭರಗಳಿಂದ ಮುಕ್ತರಾಗಿ ಸರಳ ಸಜ್ಜನಿಕೆಗಳಿಂದ ಪರಶಿವನನ್ನು ನೆನೆದು ಭಜಿಸಿ ಭಕ್ತಿಯಿಂದ ಆರಾಧಿಸಿ ಈ ಮಹಾಶಿವರಾತ್ರಿಯನ್ನು ಆಚರಿಸೋಣ. ಜಗತ್ತಿನಲ್ಲು ಎಲ್ಲಾ ಕೆಟ್ಟ ಫಲಗಳಿಂದ ಮುಕ್ತಗೊಂಡು ಸಾತ್ವಿಕತೆ, ಭಕ್ತಿ, ಆಧ್ಯಾತ್ಮಿಕತೆ, ಸ್ನೇಹ, ಪ್ರೇಮ, ಸುಭಿಕ್ಷೆಯಿಂದ ಕೂಡಿರಲೆಂದು ಪ್ರಾರ್ಥಿಸೋಣ.
‘ಸರ್ವೇಜನಾಃ ಸುಖಿನೋ ಭವಂತುಃ ಸರ್ವೇ ಸಂತು ನಿರಾಮಯ’
-ಮುಕ್ಕಾಟಿರ ದಿವ್ಯಾ ಕಾರ್ಯಪ್ಪ, ಪೊನ್ನಂಪೇಟೆ.