ನಾಪೋಕ್ಲು, ಮಾ. 3: ವಿಜ್ಞಾನಿ ಸರ್ ಸಿ.ವಿ. ರಾಮನ್ ಸಂಶೋಧಿಸಿದ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ರಸಾಯನ ಶಾಸ್ತ್ರ ಉಪನ್ಯಾಸಕಿ ವೈ.ಎಂ. ಅಮೃತ ಹೇಳಿದರು.
ಬೆಟ್ಟಗೇರಿಯ ಉದಯ ಪ್ರೌಢಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಹಾಗೂ ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು. ರಾಮನ್ ಪರಿಣಾಮ ಭಾರತದ ವೈಜ್ಞಾನಿಕ ಕ್ಷೇತ್ರದಲ್ಲಿ ಪ್ರಮುಖ ಮೈಲಿಗಲ್ಲು ಎನಿಸಿದೆ. ವಿದ್ಯಾರ್ಥಿಗಳು ವಿಜ್ಞಾನದ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಬೇಕು ಎಂದರು. ಮೂಲ ವಿಜ್ಞಾನಕ್ಕೆ ಆದ್ಯತೆ ನೀಡಬೇಕಾದ ಅಗತ್ಯವಿದೆ. ಇದರೊಂದಿಗೆ ವಿದ್ಯಾರ್ಥಿಗಳು ಸಂವಹನ ಕಲೆಯನ್ನು ಬೆಳೆಸಿ ಓದುವ ಆಸಕ್ತಿಯನ್ನು ಮೈಗೂಡಿಸಿಕೊಳ್ಳಬೇಕಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಅಧ್ಯಕ್ಷ ತಳೂರು ಕಿಶೋರ್‍ಕುಮಾರ್ ವಹಿಸಿದ್ದರು. ಉದಯ ಪ್ರೌಢಶಾಲಾ ಆಡಳಿತ ಮಂಡಳಿ ನಿರ್ದೇಶಕ ಕೆ.ಸಿ. ಮಾದಪ್ಪ ಮುಖ್ಯ ಶಿಕ್ಷಕಿ ಎನ್.ಪಿ. ಕವಿತ ಉಪಸ್ಥಿತರಿದ್ದರು.
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ಜರುಗಿದವು. ಮಡಿಕೇರಿ ತಾಲೂಕಿನ 17 ಪ್ರೌಢಶಾಲೆಗಳ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು. ವಿಜ್ಞಾನ ಪ್ರಾತ್ಯಕ್ಷಿಕೆ ಸ್ಪರ್ಧೆಯಲ್ಲಿ ಮಡಿಕೇರಿಯ ಸಂತ ಜೋಸೆಫರ ಪ್ರೌಢಶಾಲೆಯ ಅರ್ಲಿನ್ ಫರ್ನಾಂಡಿಸ್, ರಕ್ಷಿತ ಮತ್ತು ಇಂಚರ ತಂಡ ಪ್ರಥಮ ಸ್ಥಾನಗಳಿಸಿ ದರು. ದ್ವಿತೀಯ ಸ್ಥಾನವನ್ನು ನಾಪೋಕ್ಲು ಸರ್ಕಾರಿ ಪ್ರೌಢಶಾಲೆಯ ನೇಸರ ನಸ್ರಿನ, ಮತ್ತು ಅಫ್ರಿನ ತಂಡ ಪಡೆದುಕೊಂಡರು. ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಚೆಂಬು ಸರ್ಕಾರಿ ಪ್ರೌಢಶಾಲೆಯ ಎ.ಆರ್. ಪೂರ್ಣ ಮತ್ತು ಎಂ.ವೈ. ಹರ್ಷಶ್ರೀ ಪ್ರಥಮ ಸ್ಥಾನ ಗಳಿಸಿದರು. ದ್ವಿತೀಯ ಸ್ಥಾನವನ್ನು ಪೆರಾಜೆ ಜ್ಯೋತಿ ಪ್ರೌಢಶಾಲೆಯ ಕೀರ್ತನ್ ಮತ್ತು ಶಿವ ಗಣೇಶ್ ಪಡೆದರು. ವಿಜೇತ ವಿದ್ಯಾರ್ಥಿಗಳಿಗೆ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಜಿ.ಆರ್. ರವಿಶಂಕರ್ ಸದಸ್ಯರಾದ ಮೂಗೂರು ರಾಮಚಂದ್ರ ಹಾಗೂ ಶ್ರೀಹರಿ ಪಾಲ್ಗೊಂಡಿದ್ದರು. ನಾಪೊಕ್ಲು ಸರಕಾರಿ ಪ್ರೌಢಶಾಲೆಯ ಶಿಕ್ಷಕ ಸದಾನಂದ, ಚೇರಂಬಾಣೆಯ ಅರುಣ ಪ್ರೌಢಶಾಲೆಯ ಶಿಕ್ಷಕ ಗಣೇಶ್, ನಾಪೋಕ್ಲು ಅಂಕುರ್ ಶಾಲೆಯ ಪ್ರಾಂಶುಪಾಲೆ ರತ್ನಾ ಚರ್ಮಣ್ಣ, ನೇತಾಜಿ ಪ್ರೌಢಶಾಲೆಯ ಶಿಕ್ಷಕ ಸಿ.ಎಸ್. ಸುರೇಶ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದರು.