ಮಡಿಕೇರಿ, ಮಾ. 3: ಇಲ್ಲಿಗೆ ಸಮೀಪದ ಬೆಟ್ಟಗೇರಿ ಗ್ರಾ.ಪಂ. ವ್ಯಾಪ್ತಿಯ ಉಡೋತ್‍ಮೊಟ್ಟೆಯಲ್ಲಿ ಕುಡಿಯುವ ನೀರು, ರಸ್ತೆ ಇನ್ನಿತರ ಮೂಲಭೂತ ಸೌಲಭ್ಯಗಳಿಲ್ಲದೆ ತೊಂದರೆ ಎದುರಾಗಿದ್ದು, ಪ್ರಸಕ್ತ ಉರಿ ಬಿಸಿಲಿನ ನಡುವೆ, ಬೆಟ್ಟಗುಡ್ಡ ಹತ್ತಿ ಇಳಿದರೂ ಸರಿಯಾಗಿ ನೀರು ಲಭಿಸುತ್ತಿಲ್ಲ ಎಂದು ಅಲ್ಲಿನ ನಿವಾಸಿ ಗಳು ಅಳಲು ತೋಡಿಕೊಂಡಿದ್ದಾರೆ.
ಜಿಲ್ಲಾ ಪಂಚಾಯತ್‍ನಿಂದ ರೂ. 3 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆಗೆ ಇಂದು ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಹಾಗೂ ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿದ ಸಂದರ್ಭ ಉಡೋತ್‍ಮೊಟ್ಟೆ ನಿವಾಸಿಗಳು ತಮ್ಮ ಅಳಲು ತೋಡಿಕೊಂಡರು. ಹಗಲು ವೇಳೆ ದುಡಿಯಲು ತೆರಳುತ್ತಿದ್ದು, ಸಂಜೆಗತ್ತಲೆ ನಡುವೆ ತಾವು ಮನೆಗಳಿಗೆ ಸೇರುವಂತಾಗಿದೆ. ಆದರೆ, ನಿತ್ಯ ಕುಡಿಯುವ ನೀರಿಗಾಗಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಸಂಗ್ರಹಗೊಳ್ಳುವ ನೀರನ್ನು ತುಂಬಿಸಿಕೊಳ್ಳುವಷ್ಟರಲ್ಲಿ ನಿಂತು ಹೋಗಲಿದೆ ಎಂದು ಅಸಹಾಯಕತೆ ತೋಡಿಕೊಂಡರು.
ಉಡೋತ್‍ಮೊಟ್ಟೆಯ ಗುಡ್ಡಗಳ ನಡುವೆ ಅಲ್ಲಲ್ಲಿ ನೆಲೆಸಿರುವ ಬಡ ಕಾರ್ಮಿಕರ ಕುಟುಂಬಗಳಿಗೆ, ನೀರು ಕೊಂಡೊಯ್ಯಲು ಸರಿಯಾದ ದಾರಿಯಿಲ್ಲದೆ ಅಪಾಯದ ಹಾದಿ ಯಲ್ಲಿ ನಿತ್ಯ ಬವಣೆ ಪಡುವಂತಾಗಿದೆ ಎಂದು ತಮ್ಮ ಬದುಕಿನ ನೈಜತೆಯ ಕುರಿತು ಗಮನ ಸೆಳೆದರು. ಈ ವೇಳೆ ಸ್ಪಂದಿಸಿ ಮಾತನಾಡಿದ ಶಾಸಕರು ಐಟಿಡಿಪಿ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ವಿಶೇಷ ಕಾರ್ಯಕ್ರಮ ದಡಿಯಲ್ಲಿ ಆದಷ್ಟು ಕೆಲಸಗಳನ್ನು ನಿರ್ವಹಿಸಿಕೊಡಲಾಗುವದು ಎಂದರಲ್ಲದೆ, ಜಿ.ಪಂ. ಸದಸ್ಯರು ಹಾಗೂ ಅಧ್ಯಕ್ಷರು ಆದಷ್ಟು ಬೇಗನೆ ಸಮಸ್ಯೆ ಬಗೆಹರಿಸಲು ಸಲಹೆ ಮಾಡಿದರು. ಅಧ್ಯಕ್ಷ ಬಿ.ಎ. ಹರೀಶ್ ಒಂದು ವಾರದೊಳಗೆ ಕುಡಿಯುವ ನೀರು ಹಾಗೂ ಇತರ ತುರ್ತು ಕೆಲಸಗಳನ್ನು ಮಾಡಿಸಿಕೊಡಲಾಗು ವದು ಎಂದು ಭರವಸೆ ನೀಡಿದರು.
ಕಳೆದ ಮಳೆಗಾಲದಲ್ಲಿ ಮನೆಗಳಿಗೆ ಸಾಗಲು ರೂಪಿಸಿದ್ದ ಕಚ್ಚಾರಸ್ತೆಯ ತಡೆಗೋಡೆ, ಕಾಂಕ್ರೀಟ್ ಸಹಿತ ಜರಿದು ಮನೆಯೊಂದಕ್ಕೆ ಅಪ್ಪಳಿಸಿ ಇಡೀ ಮನೆ ಧ್ವಂಸಗೊಂಡಿರುವ ದೃಶ್ಯವನ್ನು ಅಲ್ಲಿನ ನಿವಾಸಿಗಳು ಬೊಟ್ಟು ಮಾಡಿದರು. ಈ ಬಗ್ಗೆ ತ್ವರಿತ ಕ್ರಮಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕು ಬಿಜೆಪಿ ಅಧ್ಯಕ್ಷ ತಳೂರು ಕಿಶೋರ್‍ಕುಮಾರ್, ಯುವ ಮೋರ್ಚಾದ ಕೆ.ಜಿ. ಕೀರ್ತನ್, ಡಾ. ಋಷ್ವಂತ್, ಲಿಂಗಪ್ಪ, ಚಂದ್ರ ಉಡೋತ್, ತಿರುಮಲ, ತಿರುಪತಿ ಹಾಗೂ ಅಲ್ಲಿನ ನಿವಾಸಿಗಳು ಮೂಲಭೂತ ಸೌಲಭ್ಯ ಕುರಿತು ಗಮನ ಸೆಳೆದರು.
ಈ ವೇಳೆ ಕುಡಿಯುವ ನೀರಿಗಾಗಿ ಮೋಟಾರು ಚಾಲಿತ ಕೊಳವೆ ಬಾವಿಗೆ ಚಾಲನೆ ನೀಡಿದ ಶಾಸಕರು ಮತ್ತು ಜಿ.ಪಂ. ಅಧ್ಯಕ್ಷರು, ಒಂದು ವಾರದೊಳಗೆ ಸಾಧ್ಯವಾದಮಟ್ಟಿಗೆ ನೀರಿನ ಸಮಸ್ಯೆ ನೀಗಿಸುವ ಆಶ್ವಾಸನೆ ನೀಡಿದರು.