ವೀರಾಜಪೇಟೆ, ಮಾ. 3: ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣದೊಂದಿಗೆ ಕೈಗೊಳ್ಳುವ ಇತರ ಚಟುವಟಿಕೆಗಳಿಂದ ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯನ್ನು ಕಾಣಬಹುದು, ಎಲ್ಲ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಬೆಳವಣಿಗೆಗೆ ಕಾರಣವಾಗುವ ಚಟುವಟಿಕೆಗಳನ್ನು ಅಗತ್ಯವಾಗಿ ಹಮ್ಮಿಕೊಳ್ಳಬೇಕೆಂದು ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಮನೆಯಪಂಡ ದೇಚಮ್ಮ ತಿಳಿಸಿದರು.
ವೀರಾಜಪೇಟೆ ಕಾವೇರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಹಾಗೂ ಮಕ್ಕಳ ಸಂತೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ದೇಚಮ್ಮ ಕಾಳಪ್ಪ ಅವರು ಶಾಲೆಯಲ್ಲಿ ನೈರ್ಮಲ್ಯ ಕಾಪಾಡುವದರಿಂದ ಮಕ್ಕಳ ಆರೋಗ್ಯ ಕಾಪಾಡಲು ಸಾಧ್ಯವಾಗಲಿದೆ. ಶಾಲೆಯ ಆಡಳಿತ ಮಂಡಳಿಯವರು ಶಾಲೆಯ ಮುಂದಿನ ರಸ್ತೆಯನ್ನು ದತ್ತು ತೆಗೆದುಕೊಂಡು ರಸ್ತೆ ಮತ್ತು ಪರಿಸರದ ಸ್ವಚ್ಚತೆ ಕಾಪಾಡುವ ಜವಾಬ್ದಾರಿಯನ್ನು ಶಾಲೆಯೇ ವಹಿಸಿಕೊಳ್ಳಬೇಕಾಗುತ್ತದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಮುಕ್ಕಾಟಿರ ಮುತ್ತಣ್ಣ ಅವರು ಮಾತನಾಡಿ ದೇಚಮ್ಮ ಅವರು ಆಡಳಿತ ಮಂಡಳಿಗೆ ಉತ್ತಮ ಸಲಹೆ ನೀಡಿದ್ದು, ಶಾಲೆಯ ಮುಂಭಾಗದ ರಸ್ತೆಯನ್ನು ದತ್ತು ತೆಗೆದುಕೊಳ್ಳಲಾಗುವದು ಎಂದು ಹೇಳಿದರು. ಸಮಾರಂಭದಲ್ಲಿ ವಿವಿಧ ಕ್ರೀಡೆಗಳಲ್ಲಿ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರಿಗೆ ಪ್ರಶಸ್ತಿ ಪತ್ರ ಮತ್ತು ಪದಕಗಳನ್ನು ವಿತರಿಸಲಾಯಿತು. ಎಸ್.ಎಸ್.ಎಲ್.ಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು. ಸಮಾರಂಭದಲ್ಲಿ ವಿದ್ಯಾರ್ಥಿಗಳಿಂದ ತಯಾರಿಸಲಾದ ಕರಕುಶಲ ವಸ್ತು ಪ್ರದರ್ಶನ, ಮಕ್ಕಳು ತಯಾರಿಸಿದ ವಿಜ್ಞಾನ ಮಾದರಿಯ ಚಿತ್ರ ಪ್ರದರ್ಶನ, ವಿವಿಧ ರೀತಿಯ ಮನರಂಜನಾ ಕ್ರೀಡೆಗಳು, ಮಕ್ಕಳು ತಯಾರಿಸಿದ ತಿಂಡಿ ತಿನಿಸುಗಳು, ಪಾನೀಯ ಆಕರ್ಷಣೀಂiÀiವಾಗಿತ್ತು. ಇದರಿಂದ ಮಕ್ಕಳ ವ್ಯವಹಾರ ಜ್ಞಾನ ಬೆಳೆಯಲು ಸಹಕಾರಿಯಾಗಿತ್ತು. ಶಾಲೆಯ ಪ್ರಾಂಶುಪಾಲ ಪಿ.ಎನ್.ವಿನೋದ್ ಸ್ವಾಗತಿಸಿದರು. ಶಿಕ್ಷಕಿ ಜ್ಯೋತಿ, ಭಾಗ್ಯ ನಿರೂಪಿಸಿದರು. ಸಹ ಶಿಕ್ಷಕಿ ಪ್ರಮೀಳ ವಂದಿಸಿದರು.