ಗೋಣಿಕೊಪ್ಪ ವರದಿ, ಮಾ. 1: ಶಿಕ್ಷಕ ರಿಂದಲೇ ಬಲಿಷ್ಠ ದೇಶ ನಿರ್ಮಾಣಕ್ಕೆ ಸಹಾಯವಾಗುತ್ತಿದೆ ಎಂದು ವಿವೇಕ್ ಚೆಂಗಪ್ಪ ಅಭಿಪ್ರಾಯಪಟ್ಟರು.

ಪೊನ್ನಂಪೇಟೆ ಸಾಯಿಶಂಕರ್ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮ ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.

ನಿಸ್ವಾರ್ಥ ಸೇವೆ ಮೂಲಕ ಮಕ್ಕಳಲ್ಲಿ ದೇಶಾಭಿಮಾನ ಮೂಡಿಸುವ ಮೂಲಕ ಶಿಕ್ಷಕರು ದೇಶ ರಕ್ಷಣೆಗೆ ತಮ್ಮದೇ ಆದ ಕಾಣಿಕೆ ನಿಡುತ್ತಿದ್ದಾರೆ. ಇದರಿಂದಾಗಿ ತಮ್ಮ ಜವಾಬ್ದಾರಿ ಅರಿತು ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದರು.

ಪುರಾತನ ಕಾಲದಿಂದಲೂ ಶಿಕ್ಷಕ ವೃತ್ತಿ ಶ್ರೇಷ್ಠವಾಗಿದೆ. ಗುರುಬ್ರಹ್ಮ ಶ್ಲೋಕ ಕೂಡ ಇದನ್ನು ವ್ಯಕ್ತಪಡಿಸುತ್ತದೆ. ಇದನ್ನು ಪ್ರತೀ ಶಿಕ್ಷಕರು ಅರಿತುಕೊಳ್ಳಬೇಕಿದೆ. ಒಂದು ಮಗು ದೇಶದ ಪ್ರಜೆಯಾಗಿ ರೂಪುಗೊಳ್ಳಲು ಬೇಕಾದ ಸಂಸ್ಕಾರಗಳು ಶಿಕ್ಷಕರಿಂದಲೇ ಕಲಿಯಬೇಕಿದೆ ಎಂದರು.

ಶೇಕಡವಾರು ಮಹಿಳೆಯರೇ ಹೆಚ್ಚಾಗಿ ಶಿಕ್ಷಕರ ವೃತ್ತಿಯಲ್ಲಿ ತೊಡಗಿಕೊಂಡಿರುವದರಿಂದ ಮಹಿಳೆಯರಲ್ಲಿ ಜವಾಬ್ದಾರಿ ಹೆಚ್ಚಾಗಿದೆ. ಉದ್ಯೋಗದ ಮೂಲಕ ವೈಯಕ್ತಿಕ ಬೆಳವಣಿಗೆಗೆ ಇದು ಸಹಕಾರಿಯಾಗುತ್ತಿದೆ ಎಂದರು.

ವಿದ್ಯಾರ್ಥಿಗಳು ಕೇಳುವ ಪ್ರತೀ ಪ್ರಶ್ನೆಗೆ ಉತ್ತರಿಸುವ ಮನೋಭಾವ ಶಿಕ್ಷಕರಲ್ಲಿ ಇರಬೇಕು. ಇದರಿಂದ ಹೆಚ್ಚಿನ ಫಲಿತಾಂಶ ನಿರೀಕ್ಷಿಸಲು ಸಾಧ್ಯವಿದೆ ಎಂದರು.ಈ ಸಂದರ್ಭ ಸಾಯಿ ಶಂಕರ್ ವಿದ್ಯಾ ಸಂಸ್ಥೆ ಮುಖ್ಯಸ್ಥ ಝರುಗಣಪತಿ, ಸೇರಿದಂತೆ ಶಿಕ್ಷಕ ವರ್ಗ ಪಾಲ್ಗೊಂಡಿದ್ದರು.