ಸೋಮವಾರಪೇಟೆ,ಮಾ.1: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸದಸ್ಯತ್ವದ ಕಾರಣ ನೀಡಿ ವಿವಿಧ ಇಲಾಖೆಗಳ ನೌಕರರಿಗೆ ಕೆಲವರು ಅಕ್ರಮವಾಗಿ ಸದಸ್ಯತ್ವದ ಹಣ ಸಂಗ್ರಹಿಸುತ್ತಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಕಾನೂನು ಕ್ರಮ ಕೈಗೊಳ್ಳುವದಾಗಿ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಕೆ.ಎಸ್. ಪ್ರಸನ್ನಕುಮಾರ್ ಎಚ್ಚರಿಸಿದ್ದಾರೆ.
ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ಒದಗಿಸಿದ ಅವರು, ಕಳೆದ ಐದು ವರ್ಷಗಳಲ್ಲಿ ಒಂದು ವರ್ಷವೂ ಸಹ ಸದಸ್ಯತ್ವ ಶುಲ್ಕ ನೀಡದ ಕೆಲವರು ಇತ್ತೀಚೆಗೆ ವಿವಿಧ ಇಲಾಖೆಗಳಿಗೆ ತೆರಳಿ, ರಶೀದಿ ನೀಡದೇ ಅಕ್ರಮವಾಗಿ ಸದಸ್ಯತ್ವದ ಹಣ ಸಂಗ್ರಹಿಸುತ್ತಿರುವದು ಸಂಘದ ಗಮನಕ್ಕೆ ಬಂದಿದ್ದು, ಇಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಂಘ ತೀರ್ಮಾನಿಸಿದೆ ಎಂದರು.
ಅಕ್ರಮವಾಗಿ ಹಣ ಸಂಗ್ರಹಣೆಗೆ ಬಂದರೆ ಯಾರೂ ಸಹ ಅಂತಹವರಿಗೆ ಹಣ ನೀಡಬಾರದು. ಸದಸ್ಯತ್ವಕ್ಕಾಗಿ ಶಾಖೆಯ ಅಧ್ಯಕ್ಷರನ್ನು ಸಂಪರ್ಕಿಸಬೇಕೇ ಹೊರತು, ಇತರರಿಗೆ ಹಣ ನೀಡಬಾರದು. ಈ ಮೊದಲು ಹಣ ನೀಡಿದ್ದಲ್ಲಿ ವಾಪಸ್ ಪಡೆದುಕೊಳ್ಳಬೇಕು ಎಂದು ಪ್ರಸನ್ನಕುಮಾರ್ ಮನವಿ ಮಾಡಿದರು.
ತಾಲೂಕು ಶಾಖೆಯ ಚುನಾವಣಾ ಪ್ರಕ್ರಿಯೆ ತಾ. 16 ರಿಂದ ಏಪ್ರಿಲ್ 8ರವರೆಗೆ ನಡೆಯಲಿದೆ. ಕರಡು ಮತದಾರರ ಪಟ್ಟಿಯನ್ನು ಮಾ.6ರಂದು ಸಂಘದ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುವದು. ಮೂರು ವರ್ಷಗಳ ಸದಸ್ಯತ್ವ ಶುಲ್ಕ ಪಾವತಿಸಿರುವವರಿಗೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಲು ಹಾಗೂ ಮತ ಚಲಾಯಿಸಲು ಅವಕಾಶವಿದ್ದು, 2019ನೇ ಸಾಲಿನ ಸದಸ್ಯತ್ವ ಪಡೆಯಲು ತಾ. 28.02.2019 ಅಂತಿಮ ದಿನವಾಗಿತ್ತು. ಆದರೂ ಸಹ ಇಂದಿಗೂ ಸದಸ್ಯತ್ವಕ್ಕಾಗಿ ಹಣ ಸಂಗ್ರಹ ಮಾಡುತ್ತಿರುವದು ಕಾನೂನು ಬಾಹಿರ ಎಂದರು.
ಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಪ್ರದೀಪ್, ಖಜಾಂಚಿ ಸುಗುಣಾನಂದ, ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಅವರುಗಳು ಉಪಸ್ಥಿತರಿದ್ದರು.