ಮಡಿಕೇರಿ, ಮಾ.1: ಟಿಬೇಟಿಯನ್ ಬಂಧುಗಳು ಸ್ಥಳೀಯ ಎಲ್ಲಾ ವರ್ಗದವ ರೊಂದಿಗೆ ಶಾಂತಿ ಸೌಹಾರ್ದತೆ ಯಿಂದ ಜೀವನ ನಡೆಸುತ್ತಿರುವದು ಪ್ರಶಂಸನೀಯ ಎಂದು ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು. ಕುಶಾಲನಗರ ಸಮೀಪದ ಬೈಲಕುಪ್ಪೆ ಸುವರ್ಣ ಮಂದಿರ ಆವರಣದಲ್ಲಿ ಬೌದ್ಧ ಸನ್ಯಾಸಿಗಳು ಆಯೋಜಿಸಿದ್ದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜ್ಯೋತಿ ಬೆಳಗಿಸಿ ಮಾತನಾಡಿದರು. ಹಲವಾರು ವರ್ಷಗಳ ಹಿಂದೆ ಬಂದು ನೆಲಸಿದ್ದ ಟಿಬೇಟಿಯನ್ ಸಾರ್ವಜನಿಕರು ಇಲ್ಲಿಯ ಆಚಾರವಿಚಾರಕ್ಕೆ ತಕ್ಕಂತೆ ಹೊಂದಿಕೊಂಡು ರಾಜ್ಯದ ಯಾವದೇ ವರ್ಗಕ್ಕೂ ಕಪ್ಪು ಚುಕ್ಕಿ ಬಾರದಂತೆ ನೋಡಿಕೊಂಡು ಹೋಗುತ್ತಿದ್ದು ಇದೇ ರೀತಿ ಮುಂದುವರಿಯಿರಿ ಎಂದು ಆಶಿಸಿದರು ಹಾಗೂ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಹೋಮಾಗ್ನಿಗೆ ಮುಖ್ಯಮಂತ್ರಿಯವರು (ಮೊದಲ ಪುಟದಿಂದ) ಹಾಲು, ತುಪ್ಪ, ಜೇನು ನೈವೇದ್ಯ ನೆರವೇರಿಸಿ ಬುದ್ಧನಿಗೆ ಹಾರಹಾಕುವ ಮೂಲಕ ನಮಸ್ಕರಿಸಿದರು.
ಗೋಲ್ಡನ್ ಟೆಂಪಲ್ ಸಂಸ್ಥಾಪಕರಾದ ‘ಪೆಮ ನೊರ್ಬು ರೆಂಪೋಚೆ’ ಮಾತನಾಡಿ ಹಲವಾರು ವರ್ಷಗಳ ಹಿಂದೆ ಬಂದ ನಮಗೆ ಭಾರತದಲ್ಲಿ ನೆಲೆನೀಡಿ ಸಹಕರಿಸಿದ ರಾಜ್ಯ ಹಾಗೂ ರಾಷ್ಟ್ರ ನಾಯಕರುಗಳನ್ನು ಸ್ಮರಿಸಿದರು ಹಾಗೂ ಮಹಾತ್ಮ ಗಾಂಧೀಜಿ ತತ್ವಸಿದ್ದಾಂತವನ್ನು ನಾವು ಸದಾ ಪಾಲಿಸುತ್ತೇವೆ ಎಂದು ತಿಳಿಸಿದರು.
ನಂತರ ಮುಖ್ಯಮಂತ್ರಿಗಳು ಕರ್ಮ ರೆಂಪೂಚೆ ಮಂದಿರಕ್ಕೆ ಭೇಟಿ ನೀಡಿ ಬೌದ್ಧ ಸನ್ಯಾಸಿಗಳು ಪ್ರಾರ್ಥನೆಯಲ್ಲಿ ಪಾಲ್ಗೊಂಡು ಹಿರಿಯ ಗುರುಗಳಿಂದ ಆಶೀರ್ವಾದ ಪಡೆದರು. ಕರ್ಮ ರೆಂಪೂಚೆಯವರು ಸುಮಾರು 100 ಎಕರೆಯಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಟ್ಟಿರುವದನ್ನು ವೀಕ್ಷಿಸಿ ಹೆಚ್ಚು ಆಮ್ಲಜನಕವನ್ನು ನೀಡುವ ಅರಳಿ ಗಿಡವನ್ನು ನೆಟ್ಟು ನೀರೆರೆದರು.
ಈ ಸಂದರ್ಭದಲ್ಲಿ ರೇಷ್ಮೆ ಸಚಿವ ಹಾಗೂ ಕೊಡಗು ಉಸ್ತುವಾರಿ ಸಚಿವ ಸಾ.ರಾ. ಮಹೇಶ್, ಸಣ್ಣನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು, ಸಂಸದ ಡಿ.ಕುಪೇಂದ್ರರೆಡ್ಡಿ, ಪಿರಿಯಾಪಟ್ಟಣದ ಶಾಸಕ ಹಾಗೂ ಕೈಗಾರಿಕಾ ನಿಗಮ ಮಂಡಳಿಯ ಅಧ್ಯಕ್ಷ ಕೆ.ಮಹದೇವ್ ಮತ್ತಿತರರು ಹಾಜರಿದ್ದರು.