ಮಡಿಕೇರಿ, ಮಾ. 2: ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಮಳೆಗಾಲ ಆರಂಭವಾಗುವದಕ್ಕೆ ಮುನ್ನ ಮನೆಗಳನ್ನು ಹಸ್ತಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಅವರು ಮನೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಮದೆ ಮತ್ತು ಕರ್ಣಂಗೇರಿಯಲ್ಲಿ 55 ಮನೆಗಳ ನಿರ್ಮಾಣ ಕಾಮಗಾರಿ ಮೇಲ್ಛಾವಣಿ ಹಂತ ತಲುಪಿದೆ ಎಂದು ವಿವರಿಸಿದರು. ಪ್ರಥಮ ಹಂತದಲ್ಲಿ ಮನೆ ಕಳೆದುಕೊಂಡ 840 ನಿರಾಶ್ರಿತರನ್ನು ಗುರುತಿಸಲಾಗಿತ್ತು, ಬಳಿಕ ಕೆಲವರ ಹೆಸರು ಕೈಬಿಡಲಾಗಿದೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆ, ಕೈಬಿಟ್ಟಿರುವವರನ್ನು ಸೇರ್ಪಡೆ ಮಾಡಲು ಕ್ರಮವಹಿಸಲಾಗಿದೆ. ಈಗಾಗಲೇ ಜಂಬೂರು ಮದೆ, ಕರ್ಣಂಗೇರಿ ಮತ್ತಿತ್ತರ ಕಡೆಗಳ ಮನೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಮೊದಲ ಆದÀ್ಯತೆಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮದಿಂದ ಸಂತ್ರಸ್ತರಿಗೆ ಮನೆ ನಿರ್ಮಿಸುವದು, ಎರಡನೇ ಆದ್ಯತೆಯಲ್ಲಿ ಸಂತ್ರಸ್ತರು ಸ್ವತಃ ಮನೆ ಕಟ್ಟಿಕೊಳ್ಳಲು ಮುಂದೆ ಬಂದವರಿಗೆ ಹಣ ಪಾವತಿಸುವದು, ಮೂರನೇ ಆದ್ಯತೆ ಸಂತ್ರಸ್ತರ ಜಾಗದಲ್ಲಿ ಏಜನ್ಸಿಗಳ ಮೂಲಕ ಮನೆ ನಿರ್ಮಾಣಕ್ಕೆ ಕ್ರಮವಹಿಸುವದು. ಸರ್ಕಾರಿ ಭೂಮಿಯಲ್ಲಿ ಏಜೆನ್ಸಿಗಳಿಂದ ಮನೆ ನಿರ್ಮಿಸಿ ಕೊಡುವದು. ಈ ಕಾರ್ಯಗಳು ನಡೆದಿದ್ದು, ಇನ್ಫೋಸಿಸ್ ಮತ್ತು ಟಿಟ್ಟೂಸ್ ಸಂಸ್ಥೆಗಳು ಮುಂದೆ ಬಂದಿವೆ. ಇವರಲ್ಲಿ ಈಗಾಗಲೇ ಇನ್ಫೋಸಿಸ್ ಸಂಸ್ಥೆಗೆ ಜಂಬೂರಿನಲ್ಲಿ ಜಾಗ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಪರಿಹಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಜೀವ ಹಾನಿಯಾದ 19 ಕುಟುಂಬಗಳಿಗೆ ತಲಾ 5 ಲಕ್ಷ ರೂ ಪರಿಹಾರದ ಚೆಕ್ ನೀಡಲಾಗಿದೆ. ಗೃಹ ಉಪಯೋಗಿ ವಸ್ತುಗಳನ್ನು ಕಳೆದುಕೊಂಡ 4,564 ಕುಟುಂಬದವರಿಗೆ ಮೊದಲ ಕಂತಿನಲ್ಲಿ 3,800 ರೂ ನಂತೆ 173 ಲಕ್ಷ ರೂ ಪರಿಹಾರ ಪಾವತಿಸಲಾಗಿದೆ.

ಭಾಗಶಃ ಮನೆ ಹಾನಿಯಾದ 2871 ಕುಟುಂಬಗಳಿಗೆ ಒಟ್ಟು 429.88 ಲಕ್ಷಗಳ ಪರಿಹಾರವನ್ನು ವಿತರಿಸಲಾಗಿದೆ. ಸಂಪೂರ್ಣ ಹಾಗೂ ತೀವ್ರ ಮನೆ ಹಾನಿಯಾದ 1045 ಕುಟುಂಬಗಳಿಗೆ ತಲಾ 1.03 ಲಕ್ಷದಂತೆ ಒಟ್ಟು 631.06 ಲಕ್ಷಗಳು ಹಾಗೂ ರಾಜ್ಯ ಸರ್ಕಾರದ ವತಿಯಿಂದ ಪ್ರತಿ ಕುಟುಂಬಕ್ಕೆ 50 ಸಾವಿರ ರೂಪಾಯಿಗಳಂತೆ ಒಟ್ಟು 510.50 ಲಕ್ಷಗಳ ಹೆಚ್ಚುವರಿ ಪರಿಹಾರವನ್ನು ಸಂತ್ರಸ್ತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಎನ್‍ಇಎಫ್‍ಟಿ ಮೂಲಕ ಜಮಾ ಮಾಡಲಾಗಿದೆ. ಮನೆ ಕಳೆದುಕೊಂಡ ಸಂತ್ರಸ್ತರಿಗೆ ರಾಜ್ಯ ಸರ್ಕಾರದ ವತಿಯಿಂದ ಪ್ರತಿ ತಿಂಗಳಿಗೆ ರೂ.10 ಸಾವಿರದಂತೆ ಮನೆ ಬಾಡಿಗೆಯನ್ನು ನೀಡಲಾಗುತ್ತಿದೆ.

ಸಂಪೂರ್ಣ ಮನೆ ಹಾನಿಯಾದ 1020 ಕುಟುಂಬದವರಿಗೆ ತಲಾ 50 ಸಾವಿರ ರೂ ಪಾವತಿಸಲಾಗಿದೆ. 470 ಕುಟುಂಬಗಳಿಗೆ ಬಾಡಿಗೆ ಭರಿಸಲಾಗುತ್ತಿದೆ.

ಬೆಳೆ ಪರಿಹಾರಕ್ಕೆ 133 ಕುಟುಂಬಗಳ ಬ್ಯಾಂಕ್ ಖಾತೆಯ ರೆಸಿಪೆಂಟ್ ಐಡಿ, ಐಎಫ್‍ಎಸ್‍ಸಿ ಕೋಡ್ ವ್ಯತ್ಯಾಸವಾಗಿರುವದು ಕಂಡುಬಂದಿತ್ತು, ಇದರಲ್ಲಿ 63 ಕುಟುಂಬಗಳ ರೆಸಿಪೆಂಟ್ ಐಡಿ, ಐಎಫ್‍ಎಸ್‍ಸಿ ಕೋಡ್ ಸರಿಪಡಿಸಲಾಗಿದೆ. ಉಳಿದವನ್ನು ಒಂದೆರಡು ದಿನಗಳಲ್ಲಿ ಸರಿಪಡಿಸಿ ಪರಿಹಾರ ವಿತರಣೆಗೆ ಕ್ರಮವಹಿಸಲಾಗುವದು.

ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಾರ್ವಜನಿಕರಿಂದ ಸಾಕಷ್ಟು ಪರಿಹಾರ ಸಾಮಗ್ರಿಗಳು ಕೊಡಗು ಜಿಲ್ಲೆಗೆ ಹರಿದುಬಂದವು. ಈಗಾಗಲೇ ಸಾಮಗ್ರಿಗಳನ್ನು ಸಂತ್ರಸ್ತರಿಗೆ ಒದಗಿಸಲಾಗಿದೆ. ಉಳಿದಂತೆ ಗೋದಾಮಿನಲ್ಲಿ ಇರುವ ಸಾಮಗ್ರಿಗಳನ್ನು ಎರಡು ವಾರದಲ್ಲಿ ಹಂಚಿಕೆ ಮಾಡಲಾಗುವದು ಎಂದು ಅವರು ತಿಳಿಸಿದರು.

ಪ್ರಕೃತಿ ವಿಕೋಪದಿಂದಾಗಿ 29,266 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಸೇರಿದಂತೆ ವಿವಿಧ ಬೆಳೆಗಳ ಹಾನಿಯಾಗಿದ್ದು, ಈಗಾಗಲೇ 14,609 ಹೆಕ್ಟೇರ್ ಪ್ರದೇಶಕ್ಕೆ ಪರಿಹಾರ ಪಾವತಿಸಲಾಗಿದೆ.

ಸುಮಾರು 34 ಸಾವಿರ ರೈತ ಕುಟುಂಬಗಳಲ್ಲಿ 28,208 ರೈತರು ಹೆಸರು ನೊಂದಾಯಿಸಿದ್ದಾರೆ. ಶೇ.64 ರಷ್ಟು ಕುಟುಂಬಗಳು ಹೆಸರು ನೋಂದಾಯಿಸಿದ್ದು,

(ಮೊದಲ ಪುಟದಿಂದ) 17 ಕೋಟಿ ರೂ ಪರಿಹಾರ ಪಾವತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು.

ಪ್ರಕೃತಿ ವಿಕೋಪದಿಂದಾಗಿ ಸುಮಾರು 1,309 ಹೆಕ್ಟೇರ್ ಪ್ರದೇಶದಲ್ಲಿ ಭೂಮಿ ಹಾನಿಯಾಗಿದ್ದು (ಭೂ ಕುಸಿತ, ಬರೆ ಕುಸಿತ, ಭೂಮಿ ಕೊಚ್ಚಿಕೊಂಡು ಹೋಗಿರುವದು) ಒಂದು ಹೆಕ್ಟೇರ್ ಪ್ರದೇಶಕ್ಕೆ 18 ಸಾವಿರ ರೂ ಪರಿಹಾರ ವಿತರಿಸಲಾಗುತ್ತದೆ.

ಕೊಡಗು ಜಿಲ್ಲೆ ಬೆಟ್ಟಗುಡ್ಡಗಳಿಂದ ಆವೃತ್ತವಾಗಿದ್ದು ಭೂಕುಸಿತ ಉಂಟಾಗುವ ಪ್ರದೇಶಗಳನ್ನು ಗುರುತಿಸಿ ಮುನ್ನೆಚ್ಚರಿಕೆ ವಹಿಸುವಂತಾಗಬೇಕು ಎಂಬ ಮಾಹಿತಿ ಕೇಳಿ ಬರುತ್ತಿರುವ ಹಿನ್ನೆಲೆ, ಭಾರತೀಯ ಭೂವಿಜ್ಞಾನ ಸಂಸ್ಥೆಯು (ಜಿಐಎಸ್) ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಮಾರ್ಚ್ 30 ರೊಳಗೆ ವರದಿ ನೀಡಲಿದ್ದಾರೆ.

ಪ್ರಕೃತಿ ವಿಕೋಪದ ಪುನರ್ವಸತಿ ಕಾರ್ಯಗಳು ಚುರುಕಿನಿಂದ ನಡೆಯುತ್ತಿದ್ದು. ಮನೆ ನಿರ್ಮಾಣ ಸೇರಿದಂತೆ ಲೋಕೋಪಯೋಗಿ, ಜಿ.ಪಂ ಹಾಗೂ ಹೆದ್ದಾರಿ ರಸ್ತೆಗಳ ಕಾಮಗಾರಿ ಪ್ರಗತಿಯಲ್ಲಿದ್ದು, ಮಳೆಗಾಲ ಆರಂಭವಾಗುವದಕ್ಕೂ ಮೊದಲು ಕಾಮಗಾರಿಗಳನ್ನು ಪೂರ್ಣಗೊಳಿಸುವ ಪ್ರಯತ್ನ ನಡೆದಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹೇಳಿದರು. ಮಳೆಗಾಲಕ್ಕೂ ಮುನ್ನ ಮನೆಗಳ ಹಸ್ತಾಂತರ - ಅನೀಸ್ ಕಣ್ಮಣಿ ಜಾಯ್