ನಾಪೆÇೀಕ್ಲು, ಮಾ. 2: ಪಾಂಡವರು ತಮ್ಮ ವನವಾಸ ಮತ್ತು ಅಜ್ಞಾತ ವಾಸದ ಕಾಲದಲ್ಲಿ ದೇಶವನ್ನೆಲ್ಲಾ ಸಂಚರಿಸಿದ್ದಾರೆಂದೂ, ಸಂಚರಿಸಿದ ಕಡೆಗಳಲ್ಲೆಲ್ಲಾ ದೇಗುಲ ನಿರ್ಮಿಸಿದ ಹಾಗೂ ನೆಲೆಸಿದ್ದ ಕುರುಹುಗಳು ಇವೆ ಎಂಬದು ಜನರ ನಂಬಿಕೆ. ಅದೇ ತರದ ದೇಗುಲ ಮತ್ತು ಕುರುಹುಗಳು ಸಮೀಪದ ಬೇತು ಗ್ರಾಮದ ಕಾವೇರಿ ನದಿ ತೀರದಲ್ಲಿಯೂ ಕಂಡು ಬಂದಿದೆ. ಇಲ್ಲಿ ಇತ್ತು ಎನ್ನಲಾದ ಪಾಂಡವರು ನಿರ್ಮಿಸಿದ ಶಿವ ದೇಗುಲ ಈಗ ಸಂಪೂರ್ಣ ನಾಶಗೊಂಡಿದೆ. ಆದರೆ ಇಲ್ಲಿ ಪಾಂಡವರು ಪ್ರತಿಷ್ಠಾಪಿಸಿದರೆಂದು ಹೇಳಲಾಗುತ್ತಿರುವ ಸುಮಾರು ನಾಲ್ಕು ಅಡಿ ಎತ್ತರದ ಶಿವಲಿಂಗವೊಂದು ಹಾಗೇ ಅನಾಥವಾಗಿ ಉಳಿದುಕೊಂಡಿದೆ.

ಗ್ರಾಮಸ್ಥರು `ಪಾಂಡವರ’ ಎಂದು ಕರೆಯಲ್ಪಡುತ್ತಿರುವ ಈ ಜಾಗದಲ್ಲಿ ಪಾಂಡವರು ಅಡುಗೆಗೆ ಬಳಸಿದ ಬೃಹದ್ಧಾಕಾರದ ರುಬ್ಬುವ ಕಲ್ಲು, ಅರೆಯುವ ಕಲ್ಲು, ಒಲೆ ಕಂಡು ಬಂದಿರುವದು ಪಾಂಡವರು ಕೆಲ ಕಾಲ ಇಲ್ಲಿ ನೆಲೆಸಿದ್ದರು, ದೇವಳ ನಿರ್ಮಿಸಿದ್ದರು ಎಂಬದಕ್ಕೆ ಸಾಕ್ಷಿಯಾಗಿದೆ.

ಪುರಾತನ ದೇಗುಲ: ಕಾವೇರಿ ನದಿ ಮತ್ತು ಕಕ್ಕಬ್ಬೆ ಹೊಳೆಗಳ ಸಂಗಮ ಸ್ಥಾನವಾದ ಇಲ್ಲಿ ಶಿವ ದೇಗುಲವನ್ನು ನಿರ್ಮಿಸಲಾಗಿತ್ತು ಎಂಬದು ಪ್ರತೀತಿ. ಬೇತು ಮತ್ತು ಹೊದ್ದೂರು ಗ್ರಾಮಸ್ಥರು ಈ ದೇವಾಲಯದ ಉಸ್ತುವಾರಿಯನ್ನು ವಹಿಸಿದ್ದರು. ಎರಡು ಗ್ರಾಮಗಳ ಜನರ ಮಧ್ಯೆ ಇದ್ದ ಬಿನ್ನಾಭಿಪ್ರಾಯ ಗಲಭೆಗೆ ತಿರುಗಿದ ಪರಿಣಾಮ ರೊಚ್ಚಿಗೆದ್ದ ಗ್ರಾಮಸ್ಥರು ಶಿವ ಲಿಂಗವನ್ನು ನದಿಗೆ ಕಿತ್ತೆಸೆದೆರು. ನಂತರ ದೇಗುಲ ನಾಶವಾಯಿತೆಂಬದು ಗ್ರಾಮಸ್ಥರಿಂದ ಕೇಳಿಬರುವ ಮಾತುಗಳು. ಆ ಶಿವಲಿಂಗವು ಹಲವು ಶತಮಾನಗಳನ್ನು ಬಿಸಿಲು ಮಳೆಯಲ್ಲಿ ಕಳೆದಿದ್ದರೂ ಅದು ಹಾಗೇ ಉಳಿದುಕೊಂಡಿರುವದು ಶಿವನ ಮಹಿಮೆಯೇ ಸರಿ ಎನ್ನುತ್ತಾರೆ ಜನ. ಅದರ ಆಸುಪಾಸಿನಲ್ಲಿ ಅದಕ್ಕೆ ಸಂಬಂಧಿಸಿದ ದೇವಾನುದೇವತೆಗಳ ವಿಗ್ರಹಗಳಿರಬಹುದೆಂಬದು ಗ್ರಾಮಸ್ಥರ ನಂಬಿಕೆ.

ರಾಮಾಯಣ, ಮಹಾಭಾರತದ, ದೈವಕಲ್ಪನೆಗಳೆಲ್ಲಾ ಸುಳ್ಳು ಎಂದು ವಾದಿಸುತ್ತಿರುವ ಈ ಕಾಲದಲ್ಲಿ ಬೇತು ಗ್ರಾಮಕ್ಕೆ ಪಾಂಡವರು ಆಗಮಿಸಿ, ವಾಸ್ತವ್ಯ ಹೂಡಿದ್ದರು ಎನ್ನುವ ಮಾತುಗಳು ಆಸ್ತಿಕರ ನಂಬಿಕೆಗೆ ಹೆಚ್ಚಿನ ಬಲ ನೀಡಿದಂತಾಗಿದೆ.

ಶಿವರಾತ್ರಿಯಂದು ಮಾತ್ರ ಶಿವ ಸ್ಮರಣೆ: ವರ್ಷಕ್ಕೊಮ್ಮೆ ಬರುವ ಶಿವರಾತ್ರಿಯಂದು ಮಾತ್ರ ಶಿವ ಧ್ಯಾನ, ಸ್ಮರಣೆ, ಓಂ ನಮಃ ಶಿವಾಯ... ಎನ್ನುವ ಜನ ನಂತರದ ದಿನಗಳಲ್ಲಿ ಇದರ ಬಗ್ಗೆ ಗಮನ ಹರಿಸದಿರುವದು ಇಂತಹ ಶಿವ ಕ್ಷೇತ್ರಗಳು ಕಾಡುಪಾಲಾಗಲು ಕಾರಣ ಎನ್ನುತ್ತಾರೆ ಶಿವ ಭಕ್ತರು. ಇನ್ನು ಮುಂದಾದರೂ ಪುರಾತನ ದೇವಳಗಳ ಅಭಿವೃದ್ಧಿಗೆ ಗ್ರಾಮಸ್ಥರು, ಆಸ್ತಿಕರು ಮನಸ್ಸು ಮಾಡಿದ್ದಲ್ಲಿ ಇಂತಹ ಪುರಾತನ ಕ್ಷೇತ್ರಗಳು ತಮ್ಮ ಗತಕಾಲದ ವೈಭವವನ್ನು ಮರಳಿಸಲು ಸಾಧ್ಯ.

-ಪಿ.ವಿ.ಪ್ರಭಾಕರ್