ಕುಶಾಲನಗರ, ಮಾ. 1: ಕುಶಾಲನಗರದಲ್ಲಿ ಕಳೆದ 1989 ರಲ್ಲಿ ನಿರ್ಮಾಣಗೊಂಡ ಅಗ್ನಿಶಾಮಕ ಠಾಣೆ ಇದೀಗ 3 ದಶಕಗಳ ಸೇವೆ ಸಲ್ಲಿಸಿದ್ದು, ಪ್ರಸಕ್ತ ಈ ಠಾಣೆಯಲ್ಲಿ ಓರ್ವ ಫಯರ್ ಆಫೀಸರ್ ಸೇರಿದಂತೆ ಒಟ್ಟು 23 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರೊಂದಿಗೆ 8 ಮಂದಿ ಹೋಂ ಗಾಡ್ರ್ಸ್ ಕೂಡ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕುಶಾಲನಗರದ ಹಾರಂಗಿ ರಸ್ತೆಯ ಅಂಚಿನಲ್ಲಿ ನೆಲೆ ಕಂಡಿರುವ ಈ ಕಛೇರಿ ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸಲು ಸನ್ನದ್ದವಾಗಿದ್ದು ಅಗ್ನಿಶಮನ ಗೊಳಿಸಲು ಎರಡು ವಾಟರ್ ಟೆಂಡರ್‍ಗಳನ್ನು ಹೊಂದಿದೆ. ಆದರೆ ಇವುಗಳು ಮಾತ್ರ 3 ದಶಕಕ್ಕೂ ಹೆಚ್ಚು ಅವಧಿಯ ಸೇವೆ ಸಲ್ಲಿಸಿ ಸವಕಲಾಗಿದ್ದು ಅತ್ಯಾಧುನಿಕ ತಂತ್ರಜ್ಞಾನವುಳ್ಳ ವಾಹನಗಳ ಕೊರತೆ ಈ ಠಾಣೆಯಲ್ಲಿ ಎದ್ದು ಕಾಣುತ್ತಿದೆ.

2018-19ರ ಸಾಲಿನಲ್ಲಿ ಒಟ್ಟು 50 ಬೆಂಕಿ ಆಕಸ್ಮಿಕಗಳು ಘಟಿಸಿದ್ದು ಇದರೊಂದಿಗೆ ಅಪಾಯದ ಅಂಚಿಗೆ ಸಿಲುಕಿದ ಪ್ರಾಣಿಗಳು ಹಾಗೂ ಮನುಷ್ಯರ ರಕ್ಷಣಾ ಕಾರ್ಯದ 24 ಪ್ರಕರಣಗಳಲ್ಲಿ ಸ್ಥಳೀಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಹೆಚ್ಚಿನ ಅನಾಹುತ ತಪ್ಪಿಸುವಲ್ಲಿ ಯಶಸ್ವಿ ಯಾಗಿದ್ದಾರೆ. ಮನೆ, ತೋಟ, ವಾಣಿಜ್ಯ ವಹಿವಾಟು ಕೇಂದ್ರಗಳು ಮತ್ತಿತರ ವ್ಯಾಪ್ತಿಯಲ್ಲಿ ಬೆಂಕಿ ಅವಘಡ ಸಂಭವಿಸಿದ ಮಾಹಿತಿ ದೊರಕಿದ ತಕ್ಷಣ ಸ್ಥಳಕ್ಕೆ ಧಾವಿಸಲು ವಾಹನದೊಂದಿಗೆ ಠಾಣೆಯ ಸಿಬ್ಬಂದಿ ಸನ್ನದ್ದರಾಗಿರುತ್ತಾರೆ ಎಂದು ಕುಶಾಲನಗರ ಅಗ್ನಿಶಾಮಕ ಠಾಣೆಯ ಪ್ರಬಾರ ಅಧಿಕಾರಿ ವಿ. ಜಯಣ್ಣ ತಿಳಿಸಿದ್ದಾರೆ.

ಕುಶಾಲನಗರ ಸುತ್ತಮುತ್ತ ವ್ಯಾಪ್ತಿಯಲ್ಲಿ ಕಳೆದ ಸಾಲಿನಲ್ಲಿ ಅಗ್ನಿ ಅನಾಹುತ ಮತ್ತು ಜಲಪ್ರಳಯ ಸಂಬಂಧ ಸುಮಾರು ರೂ. 1 ಕೋಟಿಗೂ ಅಧಿಕ ಸ್ವತ್ತುಗಳು ನಾಶಗೊಂಡಿವೆ. ಸುಮಾರು 2 ಕೋಟಿ 27 ಲಕ್ಷ ಸ್ವತ್ತು ರಕ್ಷಣೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕಳೆದ ಸಾಲಿನಲ್ಲಿ ಉಂಟಾದ ಜಲಪ್ರಳಯ ಸಂದರ್ಭ ಸುಮಾರು 1 ವಾರದ ಅವಧಿಯಲ್ಲಿ ಹೆಚ್ಚಿನ ಅನಾಹುತ ನಡೆಯದಂತೆ ತಮ್ಮ ಸಿಬ್ಬಂದಿಗಳು ಕರ್ತವ್ಯದಲ್ಲಿ ತೊಡಗಿದ ಬಗ್ಗೆ ವಿವರ ಒದಗಿಸಿದರು. ಈ ಸಾಲಿನಲ್ಲಿ ಜನವರಿಯಿಂದ ಇದುವರೆಗೆ 31 ಬೆಂಕಿ ಅವಘಡ ಪ್ರಕರಣಗಳು ಸಂಭವಿಸಿವೆ. ಘಟನೆಯೊಂದರಲ್ಲಿ ಹಸುವೊಂದನ್ನು ರಕ್ಷಿಸುವಲ್ಲಿ ತಮ್ಮ ಸಿಬ್ಬಂದಿ ಯಶಸ್ಸು ಕಂಡಿದ್ದಾರೆ ಎಂದು ತಿಳಿಸಿದ್ದಾರೆ.

ನಾಗರಿಕರು ಮುಂಜಾಗ್ರತೆ ವಹಿಸಿದಲ್ಲಿ ಬೆಂಕಿ ಅವಘಡಗಳನ್ನು ತಪ್ಪಿಸಬಹುದು. ಆಕಸ್ಮಿಕ ಘಟನೆಗಳು ನಡೆದಲ್ಲಿ ತಕ್ಷಣ ಸಮೀಪದ ಅಗ್ನಿಶಾಮಕ ಠಾಣೆಗೆ ಖಚಿತ ಮಾಹಿತಿ ನೀಡುವದರೊಂದಿಗೆ ಹೆಚ್ಚಿನ ಅನಾಹುತ ತಪ್ಪಿಸುವಲ್ಲಿ ನಾಗರಿಕರು ಕೈಜೋಡಿಸುವಂತಾಗಬೇಕು ಎಂದು ಜಯಣ್ಣ ಕೋರಿದ್ದಾರೆ.

ಕುಶಾಲನಗರ ಅಗ್ನಿಶಾಮಕ ಠಾಣೆ ಎಲ್ಲಾ ಮೂಲಭೂತ ಸೌಲಭ್ಯ ಹೊಂದಿದ್ದರೂ ಇರುವ ಸಿಬ್ಬಂದಿಗಳಿಗೆ ವಸತಿ ಗೃಹದ ಕೊರತೆ ಕಂಡು ಬರುತ್ತಿದೆ.

ಠಾಣೆಯಲ್ಲಿರುವ ತುರ್ತು ಸೇವೆಯ ಆಂಬ್ಯುಲೆನ್ಸ್ ಮತ್ತು ಟೋಯಿಂಗ್ ವಾಹನ ದುರಸ್ತಿ ಗೀಡಾಗಿದ್ದು ಇದರ ಬದಲೀ ವಾಹನ ಒದಗಿಸಲು ಇಲಾಖೆ ಕ್ರಮ ಕೈಗೊಳ್ಳಬೇಕು. ತುರ್ತು ಸಂದರ್ಭದಲ್ಲಿ ಅವಶ್ಯಕತೆಯಿರುವ ಬೋಟ್ ಮತ್ತಿತರ ಸಾಮಗ್ರಿಗಳು ಜಿಲ್ಲಾ ಕೇಂದ್ರದಲ್ಲಿ ಮಾತ್ರ ಲಭ್ಯವಿದ್ದು ಇತರ ಠಾಣೆಗಳಿಗೆ ಕೂಡ ಒದಗಿಸಿದಲ್ಲಿ ತುರ್ತು ಕಾರ್ಯಗಳಿಗೆ ಅನುಕೂಲವಾಗಲಿದೆ.

ಕುಶಾಲನಗರ ಅಗ್ನಿಶಾಮಕ ಠಾಣೆಗೆ ಅತ್ಯಾಧುನಿಕ ತಂತ್ರಜ್ಞಾನದ ಹೊಸ ವಾಟರ್ ಟೆಂಡರ್ ವಾಹನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ತುರ್ತಾಗಿ ಒದಗಿಸ ಬೇಕಾಗಿದೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು ಗಮನ ಹರಿಸಬೇಕು.

ಪ್ರಸಕ್ತ ಮಡಿಕೇರಿ ಕೇಂದ್ರದಲ್ಲಿ ಜಿಲ್ಲಾ ಕಚೇರಿ ನಿರ್ವಹಿಸುತ್ತಿರುವ ಅಗ್ನಿಶಾಮಕ ಠಾಣೆ ಹಾಗೂ ಸೋಮ ವಾರಪೇಟೆ, ಗೋಣಿಕೊಪ್ಪದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ನೆರೆಯ ಪಿರಿಯಾಪಟ್ಟಣದಲ್ಲಿ ಕೂಡ ಠಾಣಾ ಕೇಂದ್ರಗಳು ನಿರ್ಮಾಣಗೊಂಡಿದ್ದು ಸುತ್ತಮುತ್ತಲ ವ್ಯಾಪ್ತಿಯ ಅಗ್ನಿ ಅವಘಡಗಳ ಶಮನ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಬೆಂಕಿ ಮತ್ತಿತರ ಅವಘಡವಾದಾಗ ಮಾತ್ರ ಜನರ ನೆನಪಿಗೆ ಬರುವ ಅಗ್ನಿಶಾಮಕ ಘಟಕ ಮತ್ತು ತುರ್ತು ಸೇವೆಗಳ ಕಚೇರಿ ಸಿಬ್ಬಂದಿಗಳ ಸಮಸ್ಯೆಗಳ ಶಾಶ್ವತ ಪರಿಹಾರದ ಬಗ್ಗೆ ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಆಡಳಿತ ಗಮನಹರಿಸಬೇಕಿದೆ.

- ಚಂದ್ರಮೋಹನ್