ಮಡಿಕೇರಿ, ಮಾ. 1: ಪಾಕ್‍ನಲ್ಲಿ ಸೆರೆಸಿಕ್ಕ ಭಾರತೀಯ ವಾಯುಪಡೆಯ ವಿಂಗ್‍ಕಮಾಂಡರ್ ಅಭಿನಂದನ್ ಅವರನ್ನು ಇಂದು ಪಾಕಿಸ್ತಾನ ಬಿಡುಗಡೆ ಮಾಡಿದ್ದು, ಅಭಿನಂದನ್ ತಾಯ್ನಾಡಿಗೆ ಹಿಂತಿರುಗಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಸಂಭ್ರಮಾಚರಣೆ ಆಚರಿಸಲಾಗುತ್ತಿದೆ. ಜಿಲ್ಲೆಯಲ್ಲೂ ಕೂಡ ವಿವಿಧ ಸಂಘ - ಸಂಸ್ಥೆಗಳ ಸಂಭ್ರಮಾಚರಣೆ ಮಾಡುತ್ತಿದ್ದಾರೆ.
ಮಡಿಕೇರಿ ನಗರಸಸಭಾ ವ್ಯಾಪ್ತಿಯ ಕನ್ನಂಡಬಾಣೆ ಸೇರಿದಂತೆ ವಿವಿಧೆಡೆ ಸಂಭ್ರಮಾಚರಣೆ ಮಾಡಲಾಗಿದೆ. ಕನ್ನಂಡಬಾಣೆ ನಿವಾಸಿ ನಗರಸಭಾ ಸದಸ್ಯ ಕೆ.ಎಸ್. ರಮೇಶ್ ಹಾಗೂ ಕುಟುಂಬ ತಮ್ಮ ಮನೆಯಲ್ಲಿಯೇ 200 ಶಾಟ್‍ನ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಜತೆಯಲ್ಲಿ ವಾರ್ಡ್‍ನ ಇತರರೂ ಕೂಡ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಗೌಳಿಬೀದಿ ಜಂಕ್ಸನ್‍ನಲ್ಲಿ ಯುವಕರ ಪಡೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಸಿದ್ದಾಪುರ: ಪುಲ್ವಾಮದಲ್ಲಿ ಸಂಭವಿಸಿದ ಭಾರತದ ಯೋಧರ ಬಲಿದಾನಕ್ಕೆ ಪ್ರತ್ಯುತ್ತರವಾಗಿ, ಭಾರತೀಯ ಸೇನೆಯು ನಡೆಸಿದ ಯಶಸ್ವಿ ಕಾರ್ಯಾಚರಣೆ ಹಾಗೂ ಪಾಕಿಸ್ತಾನದ ವಶದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ಬಿಡುಗಡೆಯಾದ ಹಿನ್ನೆಲೆಯಲ್ಲಿ ಸಿದ್ದಾಪುರ ಹಾಗೂ ನೆಲ್ಯಹುದಿಕೇರಿಯ ಯುವಬ್ರಿಗೇಡ್ ವತಿಯಿಂದ ಸಿದ್ದಾಪುರದಲ್ಲಿ ಪಟಾಕಿ ಸಿಡಿಸಿ, ಜಯ ಘೋಷ ಹಾಕಿ ಸಂಭ್ರಮಿಸಿದರು. ಯುವ ಬ್ರಿಗೇಡ್ ಸಂಘಟನೆಯ ಪ್ರಮುಖರಾದ ಸುರೇಶ್ ನೆಲ್ಲಿಕಲ್ ಮಾತನಾಡಿದರು. ಈ ಸಂಧರ್ಭ ಸಂಘಟನೆಯ ಪ್ರಮುಖರಾದ ಪ್ರವೀಣ್, ಶರಣ್, ರತೀಶ್, ವಿನು, ಪ್ರಜಿತ್, ರಾಜು ಪದ್ಮನಾಭ ಇನ್ನಿತರರು ಹಾಜರಿದ್ದರು.
ಕುಶಾಲನಗರ: ವಾಯುಪಡೆ ವಿಂಗ್ ಕಮಾಂಡರ್ ಅಭಿನಂದನ್ ಅವರ ಬಿಡುಗಡೆ ಹಿನ್ನೆಲೆಯಲ್ಲಿ ಕುಶಾಲನಗರದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ ಮಾಡಿದರು.