ಮಡಿಕೇರಿ, ಮಾ. 1: ನಿನ್ನೆ ಹಾಗೂ ಇಂದು ನಗರದ ರಾಜಾಸೀಟ್ ಬಳಿಯ ಶ್ರೀ ಕುಂದೂರು ಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದಲ್ಲಿ ವಾರ್ಷಿಕ ದೈವಕೋಲಗಳ ಉತ್ಸವ ಜರುಗಿತು. ನಿನ್ನೆ ಸಂಜೆಯಿಂದ ವಿಶೇಷ ಪೂಜೆಯೊಂದಿಗೆ ಸದ್ಭಕ್ತರಿಗೆ ವಾರ್ಷಿಕೋತ್ಸವ ಪ್ರಯುಕ್ತ ಅನ್ನಸಂತರ್ಪಣೆ ಏರ್ಪಡಿಸಲಾಯಿತು.
ಆ ಬಳಿಕ ದೈವಿಕ ವಿಧಿ ವಿಧಾನಗಳೊಂದಿಗೆ ಮಂಗಳವಾದ್ಯಗಳು ಮೊಳಗಿದವು, ಸನ್ನಧಿಯ ಆವರಣದಲ್ಲಿ ರಕ್ತೇಶ್ವರಿ, ವಿಷ್ಣುಮೂರ್ತಿ, ಕುಟ್ಟಿಚಾತ, ಕರಿಂಗಾಳಿ, ಗುಳಿಗ, ನುಚ್ಚುಟ್ಟ, ಬೈರವ, ಪಾಷಾಣಮೂರ್ತಿ ಸಹಿತ ಒಂದರ ಬಳಿಕ ಮತ್ತೊಂದು ದೈವಕೋಲಗಳ ದರ್ಶನದೊಂದಿಗೆ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಕಂಡುಕೊಂಡರು. ಬೆಳಿಗ್ಗೆ ತನಕವೂ ದೈವಕೋಲ ಉತ್ಸವಗಳು ಸಾಗುವದರೊಂದಿಗೆ ಬೆಳಿಗ್ಗೆ ಅಪ್ಪಚ್ಚೀರ ಮಂದಣ್ಣ ತೆರೆ, ಶ್ರೀ ಓಂಕಾರೇಶ್ವರ ಸನ್ನಿಧಿಗೆ ತೆರಳಿ ರಾಜಪರಂಪರೆಯ ಗೌರವ ಸಲ್ಲಿಸಿ ಹಿಂತಿರುಗಿತು. ಅಂತೆಯೇ ಅಜ್ಜಪ್ಪ ತೆರೆ ಸಹಿತ ಹಗಲು ಬಹುಹೊತ್ತಿನ ತನಕ ಈ ವಿನೂತನ ಕೈಂಕರ್ಯಗಳು ನಡೆದು ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
.