ಮಡಿಕೇರಿ, ಮಾ. 1: ಮಡಿಕೇರಿ ನಗರಸಭೆಯ ಆಡಳಿತ ಮಂಡಳಿಯ ಅವಧಿ ಇನ್ನೇನು 15 ದಿನಗಳಲ್ಲಿ ಕೊನೆಗೊಳ್ಳಲಿದ್ದು, ಮೀಸಲಾತಿ ಗೊಂದಲ ಸರಕಾರ ಮತ್ತು ಹೈಕೋರ್ಟ್ ನಡುವೆ ಇರುವದರಿಂದ ಅತೀ ಶೀಘ್ರದಲ್ಲೇ ನಡೆಯಲಿರುವ ಲೋಕಾಸಭಾ ಚುನಾವಣೆ ಮುಗಿದು ಮಳೆಗಾಲದ ನಂತರ ಮಡಿಕೇರಿ ನಗರಸಭೆಗೆ ಚುನಾವಣೆ ನಡೆಯುವ ಸಂಭವವಿದೆ.

ನಗರದ ಅಭಿವೃದ್ಧಿ ಬದಲು ಕೇವಲ ಸ್ವಾರ್ಥಕ್ಕೆಂದೆನ್ನಬಹುದಾದ ಪರಸ್ಪರ ಕಚ್ಚಾಟ, ಕೆಸರೆರಚಾಟದಲ್ಲಿ ಕಳೆದ ಐದು ವರ್ಷಗಳನ್ನು ಪೂರೈಸಿದ ಮಡಿಕೇರಿ ನಗರಸಭಾ ಆಡಳಿತ ಮಂಡಳಿಯ ಅಧಿಕಾರದ ದರ್ಬಾರ್ ಮಾರ್ಚ್ 14ಕ್ಕೆ ಕೊನೆಯಾಗಲಿದೆ. ನಗರಸಭಾ ಆಡಳಿತ ಮಂಡಳಿಗೆ 2013ರ ಡಿಸೆಂಬರ್ 22 ರಂದು ಚುನಾವಣೆ ನಡೆದಿದ್ದು, 2019ರ ಮಾರ್ಚ್ 14ಕ್ಕೆ ಈಗಿನ ಆಡಳಿತ ಮಂಡಳಿಯ ಅಧಿಕಾರಾವಧಿ ಪೂರ್ಣಗೊಳ್ಳಲಿದೆ.

ಇಷ್ಟರಲ್ಲಾಗಲೇ ಚುನಾವಣೆ ಘೋಷಣೆಗೊಂಡು ಬಿರುಸಿನಿಂದ ಚುನಾವಣಾ ಪ್ರಕ್ರಿಯೆ ನಡೆಯಬೇಕಿತ್ತು. ಆದರೆ, ಲಭ್ಯ ಮಾಹಿತಿ ಪ್ರಕಾರ ಎ.ಸಿ .ದೇವಯ್ಯ, ಅಶ್ರಫ್ ಮತ್ತು ಎಸ್.ಸಿ. ಸತೀಶ್ ಎಂಬ ಮೂವರು ಕೆಲವು ವಾರ್ಡ್‍ಗಳ ಮೀಸಲಾತಿಯನ್ನು ಬದಲಾಯಿಸಿದ್ದಲ್ಲದೆ ರೋಸ್ಟರ್ ಪ್ರಕಾರ ಮಾಡಲಿಲ್ಲ ಎಂದು ಆಕ್ಷೇಪಿಸಿ ಹೈಕೋರ್ಟ್‍ನಲ್ಲಿ ರಿಟ್ ಪಿಟೀಷನ್ ಅರ್ಜಿ ಸಲ್ಲಿಸಿದ್ದಾರೆನ್ನಲಾಗಿದೆ.

ಈ ರಿಟ್ ಪಿಟಿಷನ್ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್ ಮೀಸಲಾತಿಯ ಪರಿಶೀಲನೆ ಅಗತ್ಯವಿದ್ದು, ಮುಂದಿನ 14 ದಿನದೊಳಗೆ ಸಮಗ್ರವಾದ ಮೀಸಲಾತಿಯನ್ನು ರೋಸ್ಟರ್ ಪ್ರಕಾರ ಸಲ್ಲಿಸುವಂತೆ ಹೈಕೋರ್ಟ್ ಸರಕಾರಕ್ಕೆ ಸೂಚಿಸಿತ್ತು. ಆದರೆ, ಸರಕಾರ ರೋಸ್ಟರ್ ಪ್ರಕಾರ ಮೀಸಲಾತಿಯನ್ನು ಸಲ್ಲಿಸಿದೆಯೋ ಇಲ್ಲವೋ ಎಂಬ ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ರಿಟ್ ಪಿಟೀಷನ್ ಸಲ್ಲಿಸಿದ ಮೂವರು ಇದೀಗ ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆಯಾಗಿದೆ ಎಂದು ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರೆ ಇಷ್ಟರಲ್ಲಾಗಲೇ ಚುನಾವಣೆಯನ್ನು ಘೋಷಿಸುತ್ತಿತ್ತು. ಆದರೆ, ಈ ಮೂವರು ಸ್ಪಂದಿಸಲಿಲ್ಲ ಎಂದು ಬಲ್ಲಮೂಲಗಳಿಂದ ತಿಳಿದುಬಂದಿದೆ.

2013 ರಲ್ಲಿ ತ್ರಿಕೋನ ಸ್ಪರ್ಧೆ

ಕಳೆದ 2014ರ ಮಾರ್ಚ್‍ನಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್,ಬಿಜೆಪಿ ಹಾಗೂ ಎಸ್.ಡಿ.ಪಿ.ಐ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟು ಕಾಂಗ್ರೆಸ್‍ನಿಂದ ಕಾವೇರಮ್ಮ ಸೋಮಣ್ಣ, ಜುಲೇಕಾಬಿ, ಶ್ರೀಮತಿ ಬಂಗೇರ, ಕೆ.ಎಂ.ಗಣೇಶ್, ಪ್ರಕಾಶ್ ಆಚಾರ್ಯ, ಲೀಲಾಶೇಷಮ್ಮ, ಹೆಚ್.ಎಂ. ನಂದಕುಮಾರ್, ಚುಮ್ಮಿ ದೇವಯ್ಯ, ವೀಣಾಕ್ಷಿ, ತಜಸುಂ, ಬಿಜೆಪಿಯಿಂದ ಪಿ.ಡಿ. ಪೊನ್ನಪ್ಪ, ಕೆ.ಎಸ್. ರಮೇಶ್, ಉನ್ನಿಕೃಷ್ಣ, ಸವಿತ ರಾಖೇಶ್, ಅನಿತಾ ಪೂವಯ್ಯ, ಐ.ಜಿ. ಶಿವಕುಮಾರಿ, ಟಿ.ಎಸ್. ಪ್ರಕಾಶ್, ಲಕ್ಷ್ಮೀ, ಎಸ್.ಡಿ.ಪಿ.ಐ.ಯಿಂದ ಅಮೀನ್ ಮೋಯಿಸಿನ್, ಮನ್ಸೂರ್, ಕೆ.ಜಿ. ಪೀಟರ್, ನೀಮಾ ಅರ್ಷದ್ ಹಾಗೂ ಜೆಡಿಎಸ್‍ನಿಂದ ಸಂಗೀತಾ ಪ್ರಸನ್ನ ಹೀಗೆ ಒಟ್ಟು 23 ಮಂದಿಯುಳ್ಳ ಆಡಳಿತ ಮಂಡಳಿಯ ರಚನೆಯಾಯಿತು.

ಮೊದಲ ಅವಧಿಯ ಅಧ್ಯಕ್ಷರಾಗಿ ಕಾಂಗ್ರೆಸ್‍ನ ಸದಸ್ಯೆ ಜುಲೇಕಾಬಿ ಅಧ್ಯಕ್ಷರಾಗಿ ಆಯ್ಕೆಗೊಂಡು 15.3.2014ರಿಂದ 31.7.2015 ರವರೆಗೆ ಸೇವೆ ಸಲ್ಲಿಸಿದರು, 31.7.2015ರಿಂದ 14.8.2015ರವರೆಗೆ ಕಾಂಗ್ರೆಸ್‍ನ ಲೀಲಾಶೇಷಮ್ಮ (ನಂತರದ ವರ್ಷಗಳಲ್ಲಿ ರಾಜಕೀಯ ಚದುರಂಗದಾಟದಲ್ಲಿ ಅವರು ಕಾಂಗ್ರೆಸ್ ಬಿಟ್ಟು ಜಾತ್ಯತೀತ ಜನತಾದಳವನ್ನು ಸೇರ್ಪಡೆಗೊಂಡರು. ನಂತರದ ದಿನಗಳಲ್ಲಿ ಕಾನೂನಾತ್ಮಕ ಹೋರಾಟದ ಪರಿಣಾಮ ಅವರ ನಗರಸಭಾ ಸದಸ್ಯತ್ವ ರದ್ದುಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. 14.8.15 ರಿಂದ 14.9.2016ರವರೆಗೆ ಕಾಂಗ್ರೆಸ್‍ನ ಶ್ರೀಮತಿ ಬಂಗೇರ ಅವರು ಅಧ್ಯಕ್ಷರಾಗಿ ಆಯ್ಕೆಗೊಂಡರು. ನಂತರದ ರಾಜಕೀಯ ಬೆಳವಣಿಗೆಯಲ್ಲಿ ಅವರು ಕಾಂಗ್ರೆಸ್‍ನಿಂದ ಉಚ್ಚಾಟಿತಗೊಂಡಿರುವದನ್ನು ಸ್ಮರಿಸಬಹುದು. ನಂತರದ ವರ್ಷಗಳಲ್ಲಿ ಕಾಂಗ್ರೆಸ್‍ನ ಕಾವೇರಮ್ಮ ಸೋಮಣ್ಣ ಅವರು 15.9.2016 ರಿಂದ ಅಧ್ಯಕ್ಷರಾಗಿ ಆಯ್ಕೆಗೊಂಡು ಈಗಲೂ ಮುಂದುವರೆಯುತ್ತಿದ್ದು, 14.3.2019 ರಂದು ಅವರ ಅಧ್ಯಕ್ಷ ಸ್ಥಾನ ಕೊನೆಗೊಳ್ಳುವ ಮೂಲಕ ನಗರಸಭೆಯ ಒಟ್ಟು 23 ಮಂದಿ ಸದಸ್ಯರ ಆಡಳಿತದ ಅವಧಿ ಪೂರ್ಣಗೊಳ್ಳಲಿದೆ. ಇದೀಗ ಐದು ವರ್ಷದ ಬಳಿಕ ಮತ್ತೆ ಚುನಾವಣೆ ನಡೆಯಲಿದ್ದು, ಈಗಾಗಲೇ ಎರಡು ಬಾರಿ ಮೀಸಲಾತಿ ಪ್ರಕಟಗೊಂಡ ಸಂದರ್ಭ ವಿವಿಧ ರಾಜಕೀಯ ಪಕ್ಷಗಳು ಸೇರಿದಂತೆ ಪಕ್ಷೇತರ ಆಕಾಂಕ್ಷಿಗಳು ಅತ್ಯಂತ ಹುರುಪಿನಿಂದ, ಲಗುಬಗೆಯಿಂದ ಚುನಾವಣೆಗೆ ಸಜ್ಜಾಗಲು ಮತ್ತು ಸಮರ್ಥವಾಗಿ ಎದುರಿಸಲು ಸಿದ್ದತೆ ನಡೆಸಿದ್ದರು.

ಮೀಸಲಾತಿ ಪ್ರಕಟಣೆಗೆ ಸೂಚನೆ

ಮಡಿಕೇರಿ ಸೇರಿದಂತೆ ರಾಜ್ಯದ ಕೆಲ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪಟ್ಟಣ ಪಂಚಾಯಿತಿಗಳು ಹೀಗೆ ಒಟ್ಟು 13 ಸ್ಥಳೀಯ ಸಂಸ್ಥೆಗಳ ವಾರ್ಡ್‍ವಾರು ಹೊಸ ಮೀಸಲಾತಿ ಪಟ್ಟಿಯನ್ನು ಪ್ರಕಟಿಸುವಂತೆ ಸರಕಾರಕ್ಕೆ ಹೈಕೋರ್ಟ್ ಸೂಚಿಸಿದ್ದರಿಂದ ಆಕಾಂಕ್ಷಿಗಳ ಹುರುಪು ಕ್ಷೀಣಗೊಂಡು. ಆದರೂ, ತೆರೆಮರೆಯಲ್ಲಿ ಪ್ರಯತ್ನ ನಡೆಯುತ್ತಿರುವದು ಗಮನಾರ್ಹ. ಮೀಸಲು ನಿಗದಿಪಡಿಸುವಲ್ಲಿ ನಿಯಮಗಳನ್ನು ಪಾಲಿಸಲಿಲ್ಲ ಎಂಬ ಕಾರಣಕ್ಕೆ ಮಂಗಳೂರು ಮಹಾನಗರ ಪಾಲಿಕೆ, ಚಿಕ್ಕಮಗಳೂರು, ಚನ್ನಪಟ್ಟಣ, ರಾಮನಗರ, ದೊಡ್ಡಬಳ್ಳಾಪುರ, ಗುಡಿಬಂಡೆ, ವಿಜಯಪುರ, ತೀರ್ಥಹಳ್ಳಿ, ಭದ್ರಾವತಿ, ಸಿರಾ, ತರಿಕೆರೆ ಮತ್ತು ಬೇಲೂರು ಸ್ಥಳೀಯ ಸಂಸ್ಥೆಗಳ ಮೀಸಲು ಪಟ್ಟಿಯನ್ನು ರದ್ದುಗೊಳಿಸಿ ಹೈಕೋರ್ಟ್‍ನ ಏಕ ಸದಸ್ಯ ಪೀಠ ಆದೇಶ ಹೊರಡಿಸಿತ್ತು.

ಸರಕಾರ ಮೀಸಲು ನಿಗದಿ ಮಾಡಿ 2018ರ ಆಗಸ್ಟ್‍ನಲ್ಲಿ ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ಮಂಗಳೂರಿನ ರವೀಂದ್ರ ಕಾಮತ್ ಎಂಬವರು ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಅರ್ಜಿಗಳ ಕುರಿತು ವಾದ-ಪ್ರತಿವಾದ ಆಲಿಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಮೂರ್ತಿ ಸುನಿಲ್ದತ್ ಯಾದವ್ ಅವರಿದ್ದ ಏಕ ಸದಸ್ಯ ಪೀಠ ತೀರ್ಪು ಪ್ರಕಟಿಸಿದೆ. ಇದೀಗ ಸರಕಾರದ ಮೀಸಲು ಅಧಿಸೂಚನೆ ರದ್ದುಗೊಂಡಿದ್ದರಿಂದ 13 ಸ್ಥಳೀಯ ಸಂಸ್ಥೆಗಳಿಗೆ ಹೊಸದಾಗಿ ಮೀಸಲು ಮರು ನಿಗದಿಪಡಿಸುವಂತೆ ನ್ಯಾಯಪೀಠ ಆದೇಶಿಸಿದೆ. ಸರಕಾರ ಅನಗತ್ಯ ವಿಳಂಬ ಮಾಡದೆ ಜ. 28 ರೊಳಗೆ ರದ್ದಾಗಿರುವ 13 ಸಂಸ್ಥೆಗಳಿಗೆ ರೊಟೇಶನ್ ಹಾಗೂ ಮೀಸಲು ನಿಯಮವನ್ನು ಪಾಲಿಸಿ ಹೊಸ ಮೀಸಲು ಪಟ್ಟಿಯನ್ನು ಹೊರಡಿಸಬೇಕೆಂದು ಚುನಾವಣಾ ಆಯೋಗ ಆದೇಶದಲ್ಲಿ ಸ್ಪಷ್ಟಪಡಿಸಿತ್ತು. ಆದರೆ ಸರ್ಕಾರ ಯಾವದೇ ಹೊಸ ಪಟ್ಟಿ ಬಿಡುಗಡೆ ಮಾಡಿಲ್ಲ.

ಮೀಸಲಾತಿಗೆ ಸಂಬಂಧಿಸಿದಂತೆ ಕೊನೆ ಕ್ಷಣದಲ್ಲಿ ಗೊಂದಲಗಳು, ವ್ಯತ್ಯಾಸಗಳುಂಟಾಗುವದನ್ನು ತಪ್ಪಿಸಲು ಸರಕಾರ ಇನ್ನು ಮುಂದೆ ಸ್ಥಳೀಯ ಸಂಸ್ಥೆಗಳ ಅಧಿಕಾರಾವಧಿ ಮುಗಿಯುವ ಒಂದು ವರ್ಷದ ಮೊದಲೇ ಅವುಗಳ ಮೀಸಲು ಪಟ್ಟಿಯನ್ನು ಅಂತಿಮಗೊಳಿಸಬೇಕು. ಸಂಬಂಧಪಟ್ಟವರು ತಮ್ಮ ಆಕ್ಷೇಪಣೆ ಸಲ್ಲಿಸಲು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ನ್ಯಾಯಾಲಯ ಈಗಾಗಲೇ ತನ್ನ ಆದೇಶದಲ್ಲಿ ಸರಕಾರಕ್ಕೆ ಸ್ಪಷ್ಟವಾಗಿ ಸೂಚಿಸಿದೆ. - ಶ್ರೀವತ್ಸ