ಮಡಿಕೇರಿ, ಮಾ. 1: ಬೆಟ್ಟತ್ತೂರು ಗ್ರಾಮದ ಧರ್ಮಪ್ಪ ಎಂಬವರ ತೋಟದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿರುವದನ್ನು ಪತ್ತೆ ಹಚ್ಚಿದ ಗ್ರಾಮಾಂತರ ಠಾಣಾ ಪೊಲೀಸರು ಈ ಸಂಬಂಧ ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಸುಮನ್ ಡಿ. ಪಣ್ಣೇಕರ್ ಅವರ ನಿರ್ದೇಶನದಂತೆ ಮಡಿಕೇರಿ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಕೆ.ಎಸ್. ಸುಂದರ್ ರಾಜ್ ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಸಿದ್ದಯ್ಯ, ಉಪ ನಿರೀಕ್ಷಕ ಚೇತನ್ ವಿ. ಮತ್ತು ಎ.ಎಸ್.ಐ. ಶ್ರೀಧರ್ ಹಾಗೂ ಸಿಬ್ಬಂದಿಗಳಾದ ಇಬ್ರಾಹಿಂ, ತೀರ್ಥಕುಮಾರ್, ಹನೀಫ್, ರಾಜೇಶ್, ಕನ್ನಿಕ ಹಾಗೂ ಚಾಲಕ ಅರುಣ್ ಅವರ ತಂಡ ಧರ್ಮಪ್ಪ ಅವರ ತೋಟದಲ್ಲಿ ಬೆಳೆದಿದ್ದ ಐದೂವರೆ ಕೆಜಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದು, ಧರ್ಮಪ್ಪನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.ಜಿಲ್ಲೆಯ ಯಾವದೇ ಪ್ರದೇಶದಲ್ಲಿ ಗಾಂಜಾ ಹಾಗೂ ಇತರ ಮಾದಕ ವಸ್ತುಗಳ ಮಾರಾಟ ಹಾಗೂ ಸಾಗಾಣಿಕೆ ಬಗ್ಗೆ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಮಾದಕ ವಸ್ತು ಮುಕ್ತ ಕೊಡಗು ಜಿಲ್ಲೆಯನ್ನಾಗಿಸಲು ಸಹಕರಿಸಬೇಕಾಗಿ ವರಿಷ್ಠಾಧಿಕಾರಿಗಳು ಕೋರಿದ್ದಾರೆ.