ಗೋಣಿಕೊಪ್ಪ ವರದಿ, ಮಾ. 1 : ಸರ್ಕಾರದಿಂದ ಬೆಳೆಹಾನಿ ಪರಿಹಾರಧನವನ್ನು ಬೆಳೆಗಾರರ ಬ್ಯಾಂಕ್ ಖಾತೆಗೆ ಜಮೆ ಮಾಡಿದ ಬೆನ್ನಲ್ಲೆ ಹಿಂಪಡೆಯುತ್ತಿರುವದರಿಂದ ಬೆಳೆಗಾರರಲ್ಲಿ ಅನವಶ್ಯಕ ಗೊಂದಲ ಎದುರಾಗುತ್ತಿದೆ. ಈ ಬಗ್ಗೆ ಬೆಳೆಗಾರರಿಗೆ ಸ್ಪಷ್ಟ ಮಾಹಿತಿ ನೀಡಬೇಕಿದೆ ಎಂದು ವೀರಾಜಪೇಟೆ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ನೆಲ್ಲಿರ ಚಲನ್ ಹೇಳಿದರು.ಪೊನ್ನಂಪೇಟೆ ಸಾಮಥ್ರ್ಯ ಸೌಧದಲ್ಲಿ ವೀರಾಜಪೇಟೆ ತಾಲೂಕು ಪಂಚಾಯಿತಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಬೆಳೆಹಾನಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಪರಿಹಾರ ಧನ ಜಮಾವಣೆಗೊಂಡ ಬೆನ್ನೆಲ್ಲೆ, ಹಿಂಪಡೆಯಲಾಗುತ್ತಿದೆ. ಇದರ ಮರ್ಮವೇನು ಎಂದು ತಿಳಿಯದೆ ಬೆಳೆಗಾರರು ಚಿಂತಾಕ್ರಾಂತರಾಗಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಸ್ಪಷ್ಟ ಉತ್ತರ ನೀಡಬೇಕಿದೆ ಎಂದರು. ಖಾತೆಗೆ 13,800 ಸಾವಿರ ಜಮಾವಣೆಗೊಂಡು ನಂತರ ಹಿಂಪಡೆಯಲಾಗುತ್ತಿದೆ. ಒಂದಕಿಂತ ಕಡಿಮೆ ಹೆಕ್ಟೇರ್ ವಿಸ್ತೀರ್ಣದ ಫಲಾನುಭವಿಗಳಿಗೂ 13,800 ಸಾವಿರ ಜಮಾವಣೆಗೊಂಡು ಕಡಿತಗೊಳಿಸ ಲಾಗುತ್ತಿದೆ ಎಂಬ ಮಾಹಿತಿ ಇದೆ. ಆದರೆ, ಕೃಷಿಕ ಹಣ ಬಂದ ಖುಶಿಯ ಬೆನ್ನಲ್ಲೇ ನಿರಾಸೆ ಅನುಭವಿಸು ವಂತಾಗಿದೆ. ಈ ಬಗ್ಗೆ ಅಧಿಕಾರಿಗಳು ಉತ್ತರಿಸಬೇಕಿದೆ ಎಂದರು.

ಈಗಾಗಲೇ ಕ್ರಿಯಾಯೋಜನೆ ರೂಪಿಸಿ ಅನುಮೋದನೆ ಪಡೆದು ಕೊಂಡಿರುವ ಕಾಮಗಾರಿಗಳನ್ನು ತುರ್ತಾಗಿ ಅನುಷ್ಠಾನಗೊಳಿಸುವಂತೆ ಇಒ ಜಯಣ್ಣ ಅಧಿಕಾರಿಗಳಿಗೆ ಸೂಚಿಸಿದರು. ನರೇಗಾ ಯೋಜನೆ ಮತ್ತು ಇಂಜಿನಿಯರ್ ವಿಭಾಗ ಈ ಬಗ್ಗೆ ಹೆಚ್ಚಿನ

(ಮೊದಲ ಪುಟದಿಂದ) ಮುತುವರ್ಜಿ ವಹಿಸಬೇಕಿದೆ. ಅನುದಾನ ಅನುಷ್ಠಾನಗೊಳ್ಳದೆ ಹಣ ಹಿಂದೆ ಹೋಗದಂತೆ ಕ್ರಮಕೈಗೊಳ್ಳಬೇಕಿದೆ ಎಂದು ಅವರು ಹೇಳಿದರು.

ಪರಿಶಿಷ್ಟ ಜಾತಿ, ಪರಿಶಿಷ್ಠ ಪಂಗಡಕ್ಕೆ ಸೇರಿದ ಗ್ರಾಮ ಪಂಚಾಯಿತಿಯ ಶೇ. 25ರ ಅನುದಾನವನ್ನು ಬಳಕೆ ಮಾಡಿಕೊಳ್ಳದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಲಾಯಿತು. ಹೆಚ್ಚು ಗಿರಿಜನರು ಇರುವ ಪಂಚಾಯಿತಿ ವ್ಯಾಪ್ತಿಯಲ್ಲಿ ಹಣ ಬಳಕೆಯಾಗಿಲ್ಲ. ಈ ಒಂದು ತಿಂಗಳ ಅವಧಿಯಲ್ಲಿ ಗುರಿ ಸಾಧಿಸಲು ಅಸಾಧ್ಯವಾಗಿದೆ ಎಂದು ಚಲನ್‍ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ಇಂಜಿನಿಯರ್‍ಗಳು ಕಾಮಗಾರಿ ಅನುಷ್ಠಾನದ ಬಗ್ಗೆ ಸ್ಥಳ ಪರಿಶೀಲನೆ ನಡೆಸದೆ ಕೋಣೆಯಲ್ಲಿ ಕೂರುವದರಿ ಂದ ಸಾಕಷ್ಟು ಕಾಮಗಾರಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ ಎಂದು ಉಪಾಧ್ಯಕ್ಷ ನೆಲ್ಲೀರ ಚಲನ್ ಹೇಳಿದರು. ಕಚೇರಿ ಯಲ್ಲಿ ಕುಳಿತು ಸಹಿ ಹಾಕುವದಕ್ಕಿಂತ ಸ್ಥಳ ಪರಿಶೀಲನೆ ನಡೆಸಿದರೆ ಒಂದಷ್ಟು ಕಾಮಗಾರಿ ಶೀಘ್ರಗತಿ ಪಡೆದುಕೊಳ್ಳಲಿದೆ ಎಂದರು.

ಬಿರುನಾಣಿಯಲ್ಲಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಫಲಾನುಭವಿ ಆಶ್ರಯ ಮನೆ ಪಡೆದಿದ್ದರೂ ಬಾವಿ ತೋಡಲು ಹಿಂದೇಟು ಹಾಕುತ್ತಿರುವ ಬಗ್ಗೆ ಚಲನ್ ಅಸಮಾಧಾನ ವ್ಯಕ್ತಪಡಿಸಿದರು. ಆಶ್ರಮ ಮನೆ ಕಟ್ಟಿಕೊಟ್ಟ ಮೇಲೆ ಬಿಪಿಎಲ್ ಪಡಿತರ ಚೀಟಿ ಇರುವ ಫಲಾನುಭವಿ ಎಂದು ತಿಳಿದಿದ್ದರೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಾವಿ ತೋಡಿಕೊಡಲು ಹಿಂದೇಟು ಹಾಕುವದರಿಂದ ಅವರಿಗೂ ಗೊಂದಲ. ಅಧಿಕಾರಿಗಳು ನೇರವಾಗಿ ಕೆಲಸ ಮಾಡಿದರೆ, ಜನಪ್ರತಿನಿಧಿಗಳ ಹತ್ತಿರ ಬರುವ ಜನರ ಸಮಸ್ಯೆ ಕಡಿಮೆಯಾಗುತ್ತದೆ ಎಂದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು, ಅಂಗಡಿ ಮಳಿಗೆ ಸೇರಿದ ತೆರಿಗೆ ವಸೂಲಾತಿ ಮಾಡದ ಆ ಭಾಗದ ಬಿಲ್ ಕಲೆಕ್ಟರ್‍ಗಳ ಭತ್ಯೆ ಕಡಿತಗೊಳಿಸಿ ಎಂದು ಸಭೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿತು. ತೆರಿಗೆ ಸಂಗ್ರಹವಾಗದಿದ್ದರೆ ಅಭಿವೃದ್ಧಿ ಕುಂಠಿತವಾಗುತ್ತದೆ. ಸಿಬ್ಬಂದಿ ಸಂಬಳಕ್ಕೆ ಹಣವಿರುವದಿಲ್ಲ. ಆ ಕಾರಣಕ್ಕಾಗಿ ಅವರ ಭತ್ಯೆ ಸ್ಥಗಿತಗೊಳಿಸಬೇಕು ಎಂದು ಸಭೆ ಸೂಚಿಸಿತು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಾಹಿತಿ ನೀಡಿ, ಸ್ಟ್ಯಾಂಪ್ ಶುಲ್ಕ ಕಾರ್ಯಕ್ರಮ, ಟಾಸ್ಕ್‍ಫೋರ್ಸ್ ಯೋಜನೆಯಡಿ ಕೊಳವೆ ಬಾವಿ ಕೊರೆಸುವ ಕಾಮಗಾರಿ ಪೂರ್ಣಗೊಳ್ಳಬೇಕಿದೆ. ಈ ಬಗ್ಗೆ ಕ್ರಮಕೈಗೊಳ್ಳಲಾಗುವದು ಎಂದರು.

ಕುಟ್ಟ ವ್ಯಾಪ್ತಿಯಲ್ಲಿ ಆಹಾರ ಇಲಾಖೆ ಮೂಲಕ ವಿತರಣೆಯಾಗಬೇಕಿರುವ ಉಜ್ವಲ ಯೋಜನೆಯ ಅನಿಲ ಕಿಟ್ ಫಲಾನುಭವಿಗಳಿಗೆ ನೀಡದೆ ಸತಾಯಿಸಲಾಗುತ್ತಿದೆ. ಇದರಿಂದ ಫಲಾನುಭವಿಗಳು ಇಕ್ಕಟ್ಟಿಗೆ ಸಿಲುಕಿರುವ ಬಗ್ಗೆ ಉಪಾಧ್ಯಕ್ಷ ಚಲನ್ ಅವರು ಆಹಾರ ಇಲಾಖೆ ಅಧಿಕಾರಿಗಳ ಗಮನ ಸೆಳೆದು ವಿತರಣೆಗೆ ಸೂಚಿಸಿದರು.

ಕಂದಾಯ ಇಲಾಖೆ ಮೂಲಕ ಮಳೆಹಾನಿ ಫಲಾನುಭವಿಗಳಿಗೆ 1.22 ಕೋಟಿ ಪರಿಹಾರ ಹಣ ವಿತರಣೆ ಮಾಡಲಾಗಿದೆ ಎಂದು ಕಂದಾಯ ಅಧಿಕಾರಿ ಮಾಹಿತಿ ನೀಡಿದರು.

ಸಭೆಗೆ ಬಾರದ ತಹಶೀಲ್ದಾರ್ ಹಾಗೂ ಎಡಿಎಲ್‍ಆರ್ ಅವರಿಗೆ ಪತ್ರ ಬರೆದು ಕ್ರಮಕೈಗೊಳ್ಳಲು ಸೂಚಿಸಲಾಯಿತು.

ತೋಟಗಾರಿಕಾ ಇಲಾಖೆಯಿಂದ ಬೇಸಿಗೆಯಲ್ಲಿ ವಿತರಣೆ ಮಾಡಲಾಗುತ್ತಿರುವ ಬಟರ್‍ಫ್ರುಟ್ ಗಿಡಗಳ ವಿತರಣೆ ನಿಲ್ಲಿಸುವಂತೆ ಸೂಚಿಸಲಾಯಿತು. ಮಳೆಗಾಲದಲ್ಲಿ ಗಿಡ ವಿತರಣೆ ಮಾಡಿ, ಈಗ ವಿತರಿಸಿ ಪ್ರಯೋಜನವಾದರೂ ಏನು ಎಂದು ಸಭೆ ಪ್ರಶ್ನಿಸಿತು.

ಮಳೆಹಾನಿ ಪರಿಹಾರದ ರಸ್ತೆ ಕಾಮಗಾರಿಗಳಲ್ಲಿ 23 ಕಾಮಗಾರಿ ಪ್ರಗತಿಯಲ್ಲಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು. ಸಭೆಯಲ್ಲಿ ಇಒ ಜಯಣ್ಣ ಉಪಸ್ಥಿತರಿದ್ದರು.

-ಸುದ್ದಿಪುತ್ರ