ಮಡಿಕೇರಿ, ಮಾ. 1: ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಕುಂಬಳದಾಳು ಗ್ರಾಮದಲ್ಲಿ ನಡೆದ ಒಂಟಿ ಮಹಿಳೆಯ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಕೊಡಗು ಜಿಲ್ಲಾ ಅಪರಾಧ ಪತ್ತೆ ದಳ ಹಾಗೂ ಮಡಿಕೇರಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದು, ಮೂವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೊಪ್ಪಿಸ ಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪಣ್ಣೇಕರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಿದ ಅಪರಾಧ ಪತ್ತೆ ದಳದ ತಂಡ ಹಾಗೂ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ತಂಡ ಪ್ರಕರಣದ ಪ್ರಮುಖ ಆರೋಪಿ ಗೊಂದಿಬಸವನಹಳ್ಳಿಯ ಸುಬ್ರಮಣಿ, ಮುಳ್ಳುಸೋಗೆಯ ಮಧು ಹಾಗೂ ಸುಬ್ರಮಣಿಯ ಅಕ್ಕ ಕಾವ್ಯಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ವಿಚಾರಣೆಗೊಳಪಡಿಸಲಾಗಿ ಆರೋಪಿ ಸುಬ್ರಮಣಿಗಿದ್ದ ಹಣದ ಮುಗ್ಗಟ್ಟೇ ಈ ಕೃತ್ಯವೆಸಗಲು ಕಾರಣ ಎಂದು ತಿಳಿದು ಬಂದಿದೆ ಎಂದು ಅವರು ತಿಳಿಸಿದರು.ಮೃತೆ ಕರ್ಣಯ್ಯನ ರಾಧ ಅವರ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಸುಬ್ರಮಣಿ, ರಾಧ ಅವರ ಮನೆಯ ಆಗುಹೋಗುಗಳನ್ನು ಗಮನಿಸಿ ತನ್ನ ಸ್ನೇಹಿತ ಮಧು ನೊಂದಿಗೆ ಸೇರಿ ತಾ. 21 ರಂದು ಸಂಜೆ ರಾಧ ಅವರು ಮನೆಯಲ್ಲಿ ಒಬ್ಬರೇ ಇರುವದನ್ನು ಖಾತ್ರಿಪಡಿಸಿ ಕೊಂಡು ಮನೆಯನ್ನು ಪ್ರವೇಶಿಸಿ ಅಡುಗೆ ಮನೆಯಲ್ಲಿದ್ದ ರಾಧ ಅವರ ಹಿಂದಿನಿಂದ ಹೋಗಿ ಕತ್ತು ಹಿಸುಕಿ ಕೊಲೆ ಮಾಡಿ ಯಾರಿಗೂ ಅನುಮಾನ ಬಾರದ ರೀತಿಯನ್ನು ಆಕೆಯನ್ನು ಎತ್ತಿ ಹಾಸಿಗೆಯ ಮೇಲೆ ಮಲಗಿಸಿ ಗಾಡ್ರೇಜ್

(ಮೊದಲ ಪುಟದಿಂದ) ಬೀರುವಿನಲ್ಲಿಟ್ಟಿದ್ದ ರೂ. 3 ಲಕ್ಷ ಮೌಲ್ಯದ ಚಿನ್ನದ ಒಡವೆಗಳನ್ನು ಕಳವು ಮಾಡಿ ಪರಾರಿಯಾಗಿ, ಸುಬ್ರಮಣಿಯ ಅಕ್ಕ ಕಾವ್ಯಳ ಸಹಾಯದಿಂದ ಒಡವೆಗಳನ್ನು ಮೈಸೂರಿನಲ್ಲಿ ಮಾರಾಟ ಮಾಡಿದ್ದರು ಹಾಗೂ ಸುಬ್ರಮಣಿ ಬಳಿ ಇದ್ದ ರೂ. 7 ಸಾವಿರ ಹಣ, ಕಳ್ಳತನದ ಹಣದಲ್ಲಿ ಮಧು ಖರೀದಿಸಿದ್ದ ರೆಡ್‍ಮಿ ಮೊಬೈಲ್ ಅನ್ನು ವಶಕ್ಕೆ ತೆಗೆದು ಕೊಂಡಿರುವದಾಗಿ ಅವರು ಹೇಳಿದ್ದಾರೆ.

ಮಡಿಕೇರಿ ಉಪಾಧೀಕ್ಷಕ ಕೆ.ಎಸ್. ಸುಂದರರಾಜ್ ಅವರ ಮಾರ್ಗ ದರ್ಶನದಲ್ಲಿ, ಡಿಸಿಐಬಿ ಪೊಲೀಸ್ ನಿರೀಕ್ಷಕ ಎಂ. ಮಹೇಶ್, ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಸಿದ್ದಯ್ಯ, ಮಡಿಕೇರಿ ನಗರ ಪೊಲೀಸ್ ಠಾಣಾಧಿಕಾರಿ ಶಣ್ಮುಗಂ, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಚೇತನ್, ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ನಂಜುಂಡಸ್ವಾಮಿ, ಜಿಲ್ಲಾ ಅಪರಾಧ ಪತ್ತೆದಳದ ಎಎಸ್‍ಐ ಕೆ.ವೈ. ಹಮೀದ್, ಸಿಬ್ಬಂದಿಗಳಾದ ಬಿ.ಎಲ್. ಯೋಗೇಶ್‍ಕುಮಾರ್, ಎಂ.ಎನ್, ನಿರಂಜನ್, ಕೆ.ಎಸ್. ಅನಿಲ್ ಕುಮಾರ್, ಕೆ.ಆರ್. ವಸಂತ, ಸುಮತಿ, ವಿ.ಜಿ. ವೆಂಕಟೇಶ್, ಮಡಿಕೇರಿ ನಗರ ಪೊಲೀಸ್ ಠಾಣಾ ಸಿಬ್ಬಂದಿ ದಿನೇಶ್ ಹಾಗೂ ಮಧು, ಫ್ರಾನ್ಸಿಸ್, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಇಬ್ರಾಹಿಂ, ಶಿವರಾಜು, ಸಿಡಿಆರ್ ಸೆಲ್‍ನ ರಾಜೇಶ್, ಗಿರೀಶ್, ಚಾಲಕರಾದ ಕೆ.ಎಸ್. ಶಶಿಕುಮಾರ್, ಅರುಣ್, ಸುನಿಲ್ ಅವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.