ಮಡಿಕೇರಿ, ಫೆ. 28: ಗ್ರಾಹಕರು ಬ್ಯಾಂಕ್‍ನಿಂದ ಪಡೆದಿದ್ದ ಸಾಲದ ಹಣ ಸರಕಾರದ ನಿಯಮದಂತೆ ಮನ್ನಾ ಆಗಿದ್ದರೂ ಗ್ರಾಹಕರು ಸಾಲ ಮರು ಪಾವತಿ ಮಾಡಿದ ಹಣವನ್ನು ಹಿಂತಿರುಗಿಸದ ಬ್ಯಾಂಕ್‍ಗೆ ಇಲ್ಲಿನ ಗ್ರಾಹಕರ ವೇದಿಕೆ ದಂಡ ವಿಧಿಸಿ ತೀರ್ಪಿತ್ತಿದೆ.

ಮಡಿಕೇರಿ ತಾಲೂಕು, ಹೆಬ್ಬೆಟ್ಟಗೇರಿ ಗ್ರಾಮದ ನಿವಾಸಿ, ಕೊಕ್ಕಲೆರ ಅರ್ಜುನ ಅವರು ಮಡಿಕೇರಿಯ ಯೂನಿಯನ್ ಬ್ಯಾಂಕಿನಿಂದ ಒಂದು ದೀರ್ಘಾವಧಿ ಸಾಲ ಮತ್ತು ಎರಡು ಮಧ್ಯಮಾವಧಿ ಸಾಲಗಳನ್ನು ಕ್ರಮವಾಗಿ 20.7.1978 ಮತ್ತು 16.4.1988ರಲ್ಲಿ ಪಡೆದಿದ್ದು, ಅದನ್ನು ಸಕಾಲದಲ್ಲಿ ಮರುಪಾವತಿಸಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಬ್ಯಾಂಕಿನವರು ಅರ್ಜುನ ಅವರ ಮೇಲೆ ಸಿವಿಲ್ ದಾವೆ ಹೂಡಿದ್ದರು. ನಂತರ ಏಕ ಕಂತಿನಲ್ಲಿ ಮುಗಿಸಲು ತೀರ್ಮಾನವಾಗಿ ರೂ. 75,000 ಗಳನ್ನು ಪಡೆದುಕೊಂಡ ಕೃಷಿ ಸಾಲ ಕಾಫಿ ಡೆಬ್ಟ್ ರಿಲೀಫ್ ಪ್ಯಾಕೇಜ್ 2010ರಂತೆ ಮನ್ನಾ ಆಗಿದೆಯೆಂದು ಮತ್ತು ಅರ್ಜುನ ಅವರು ಆ ಪ್ಯಾಕೇಜಿನ ಅಡಿಯಲ್ಲಿ ಬರುತ್ತಾರೆಂದು ರೂ, 59,665.50 ಮತ್ತು 29,832. 75 ಗಳನ್ನು ಸರ್ಕಾರದಿಂದ ಬ್ಯಾಂಕು ಸಾಲವನ್ನು ಮರುಪಾವತಿ ಮಾಡಲು ಪಡೆದುಕೊಂಡಿದೆಯೆಂದು ತಿಳಿದು ಬಂದಿದೆ. ಆದರೆ ಅರ್ಜುನ ಅವರು ಸಾಲ ಮರುಪಾವತಿ ಮಾಡಿ ಆಗಿತ್ತು. ನಂತರ ಬ್ಯಾಂಕಿಗೆ ಹೋಗಿ ಸಾಲ ಮುಗಿದ ನಂತರ ಬಂದ ಹಣವನ್ನು ವಾಪಸ್ ಕೊಡಬೇಕೆಂದು ಕೇಳಿದರೂ ಬ್ಯಾಂಕಿನವರು ಕೊಡಲು ನಿರಾಕರಿಸಿದ ಕಾರಣ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಿದ್ದರು. ಗ್ರಾಹಕರ ವೇದಿಕೆಯು ತಾ. 3.8.2013ರಂದು ಬ್ಯಾಂಕಿನ ಸೇವಾ ನ್ಯೂನತೆಯನ್ನು ಪರಿಗಣಿಸಿ ರೂ. 89,498.25ಗಳನ್ನು ದೂರುದಾರರಿಗೆ ಶೇ. 8 ರ ಬಡ್ಡಿ ಸಮೇತ ಹಾಗೂ ರೂ. 5000 ಗಳನ್ನು ಪರಿಹಾರವಾಗಿ ಹಿಂತಿರುಗಿಸುವಂತೆ ಆದೇಶಿಸಿದೆ.

ಬ್ಯಾಂಕಿನವರು ರಾಜ್ಯ ಗ್ರಾಹಕರ ವೇದಿಕೆ, ಬೆಂಗಳೂರು ಇಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದು, ರಾಜ್ಯ ವೇದಿಕೆಯು ಮೇಲ್ಮನವಿಯನ್ನು ವಜಾಗೊಳಿಸಿ, ಜಿಲ್ಲಾ ಗ್ರಾಹಕರ ಆದೇಶವನ್ನು ಎತ್ತಿ ಹಿಡಿದು, ಪೂರ್ತಿ ಆದೇಶದಲ್ಲಿ ನಮೂದಿಸಿದ ಹಣ ಮತ್ತು ಅಂದಿನಿಂದ ಇಂದಿನವರೆಗಿನ ಬಡ್ಡಿ ಸೇರಿಸಿ ನೀಡಬೇಕೆಂದು ತೀರ್ಪಿತ್ತಿದೆ. ದೂರುದಾರರ ಪರವಾಗಿ ಮಡಿಕೇರಿಯ ವಕೀಲೆ ಮೀನಾಕುಮಾರಿ ಎರಡು ಕೋರ್ಟ್‍ನಲ್ಲೂ ವಾದ ಮಂಡಿಸಿದ್ದರು.