ಸೋಮವಾರಪೇಟೆ, ಫೆ. 28: ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಮತ್ತು ಕದಳಿ ಮಹಿಳಾ ವೇದಿಕೆ ಆಶ್ರಯದಲ್ಲಿ ಶಿರಂಗಾಲ ಗ್ರಾಮ ಪಂಚಾಯಿತಿ, ಮಂಟಿಗಮ್ಮ ಮತ್ತು ಉಮಾಮಹೇಶ್ವರ ದೇವಾಲಯ ಸಮಿತಿ, ಅಕ್ಕಮಹಾದೇವಿ ಮಹಿಳಾ ಸಮಾಜ, ಮತ್ತು ಕುಶಾಲನಗರ ಅಕ್ಕನ ಬಳಗ ಇವರ ಸಹಯೋಗದೊಂದಿಗೆ ತಾ. 9 ರಂದು ಬೆಳಿಗ್ಗೆ 10 ಗಂಟೆಗೆ ಶಿರಂಗಾಲದ ಉಮಾಮಹೇಶ್ವರ ದೇವಾಲಯದ ಆವರಣದಲ್ಲಿ ‘ಸ್ತ್ರೀ ಅಸ್ಮಿತೆ ಮತ್ತು ವಚನ ಕ್ರಾಂತಿ’ ಚಿಂತನಾಗೋಷ್ಠಿ ನಡೆಯಲಿದೆ ಎಂದು ಕದಳಿ ಅಧ್ಯಕ್ಷೆ ಲೇಖನ ಧರ್ಮೇಂದ್ರ ತಿಳಿಸಿದ್ದಾರೆ.
ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ದಿವ್ಯಸಾನ್ನಿಧ್ಯದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಬಸವಪಟ್ಟಣದ ತೋಂಟದಾರ್ಯ ಸಂಸ್ಥಾನ ಮಠದ ಸ್ವತಂತ್ರ ಬಸವಲಿಂಗಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಶಿರಂಗಾಲ ದೇವಾಲಯ ಸಮಿತಿಯ ಅಧ್ಯಕ್ಷ ಎಸ್.ಎಸ್. ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
11 ಗಂಟೆಗೆ “ಲಿಂಗಸಮಾನತೆ ಮತ್ತು ಸೂತಕಗಳನ್ನು ಸುಳ್ಳು ಮಾಡಿದ ವಚನಕ್ರಾಂತಿ” ಎಂಬ ವಿಷಯದಲ್ಲಿ ಲೇಖಕಿ ಸೂದನ ರತ್ನಾವತಿ ಪೂಣಚ್ಚ ವಿಚಾರ ಮಂಡನೆ ಮಾಡಲಿದ್ದಾರೆ. 12 ಗಂಟೆಗೆ “ವೈಚಾರಿಕ ದಾಂಪತ್ಯಕ್ಕೆ ಅಡಿಪಾಯ ಹಾಕಿದ ಶರಣಕ್ರಾಂತಿ” ಎಂಬ ವಿಷಯದಲ್ಲಿ ಲೀಲಾ ದಯಾನಂದ ವಿಚಾರ ಮಂಡಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಸಮಾರೋಪ ಸಮಾರಂಭ ಲೇಖಕಿ ಜಲಾ ಕಾಳಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದೆ. ತೊರೆನೂರು ವಿರಕ್ತಮಠದ ಮಲ್ಲೇಶ ಸ್ವಾಮೀಜಿ ದಿವ್ಯಸಾನ್ನಿಧ್ಯ ವಹಿಸಲಿದ್ದಾರೆ. ಅಕ್ಕನಬಳಗ ಅಧ್ಯಕ್ಷೆ ಜಲಜ ಶೇಖರ್ ವಚನ ವಿಶ್ಲೇಷಣೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ, ಹಿರಿಯ ಪತ್ರಕರ್ತ ಚಿ.ನಾ. ಸೋಮೇಶ್, ಜಿ.ಪಂ. ಸದಸ್ಯ ಹೆಚ್.ಆರ್. ಶ್ರೀನಿವಾಸ್ ಭಾಗವಹಿಸಲಿದ್ದಾರೆ.