ಮಡಿಕೇರಿ, ಫೆ. 28: ತಂಬಾಕು, ಗಾಂಜಾ, ಧೂಮಪಾನದಂತಹ ದುಶ್ಚಟಗಳಿಗೆ ಬಲಿಯಾಗದೆ; ಅಂತಹ ಉತ್ಪನ್ನಗಳನ್ನು ತ್ಯಜಿಸುವ ಮುಖಾಂತರ ಆರೋಗ್ಯ ಪೂರ್ಣ ಬದುಕು ಕಂಡುಕೊಳ್ಳುವಂತೆ ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಹಾಗೂ ಕೊಡಗು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಲಹೆ ನೀಡಿದೆ. ನಗರದ ಬಾಲಭವನ ಸಭಾಂಗಣದಲ್ಲಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಈ ಬಗ್ಗೆ ಅರಿವು ಮೂಡಿಸಲಾಯಿತು.

ತಂಬಾಕು ನಿಯಂತ್ರಣ ಘಟಕ ಕೋಲಾರ ಶಾಖೆಯ ಪಿ. ಮಹಮ್ಮದ್ ಈ ಬಗ್ಗೆ ಮಾಹಿತಿ ನೀಡುತ್ತಾ, ತಂಬಾಕಿನೊಂದಿಗೆ ಮಿಶ್ರಗೊಳ್ಳುವ ರಾಸಾಯನಿಕ ಪದಾರ್ಥಗಳ ಸೇವನೆಯಿಂದ ಹೃದಯ ಸಂಬಂಧಿತ ಕಾಯಿಲೆಗಳು, ತಲೆಕೂದಲು ಉದುರುವದು, ಕಣ್ಣಿನ ಹಾಗೂ ಇತರ ನರದೌರ್ಬಲ್ಯ, ದಂತಕ್ಷಯ, ಶ್ವಾಸಕೋಶ ಕ್ಯಾನ್ಸರ್, ಹೊಟ್ಟೆ ಹುಣ್ಣು, ರಕ್ತ ಹೀನತೆ ಇತ್ಯಾದಿ ರೋಗಗಳಿಗೆ ತುತ್ತಾಗುತ್ತಾರೆಂದು ಎಚ್ಚರಿಸಿದರು.

ಇಂತಹ ದುಶ್ಚಟಗಳಿಂದ ದೂರವಿದ್ದರೆ ಹೃದಯ ಬಡಿತ ಹಾಗೂ ರಕ್ತ ಸಂಚಲನ ಸಾಮಾನ್ಯವಿದ್ದು, ಯಾವದೇ ರೋಗಗಳಿಗೆ ಎಡೆಯಿಲ್ಲದಂತೆ ಆರೋಗ್ಯದಿಂದ ದೀರ್ಘಾಯುಷ್ಯ ಹೊಂದುವದು ಸುಲಭವೆಂದು ಅವರು ನೆನಪಿಸಿದರು. ಜಿಲ್ಲಾ ರೈತ ಸಂಘದ ಅಧ್ಯಕ್ಷ ಮನು ಸೋಮಯ್ಯ, ಕಾರ್ಯದರ್ಶಿ ಸುಜಯ್ ಬೋಪಯ್ಯ, ಸಂಚಾಲಕ ಪಿ.ಟಿ. ಸುಭಾಷ್ ಸುಬ್ಬಯ್ಯ, ಎಂ.ಜಿ. ಗಿರೀಶ್ ಸೇರಿದಂತೆ ಇಂದಿನ ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಮಹಿಳಾ ಸಂಘದ ಸದಸ್ಯರು ಪಾಲ್ಗೊಂಡಿದ್ದರು. ತಂಬಾಕು ಉತ್ಪನ್ನಗಳ ದುಷ್ಪರಿಣಾಮ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ಬಿತ್ತಿಪತ್ರಗಳ ಸಹಿತ ಅರಿವು ಮೂಡಿಸಲಾಯಿತು.