ಆಲೂರು-ಸಿದ್ದಾಪುರ, ಫೆ. 28: ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಂಸ್ಕøತಿ-ಪರಂಪರೆಯಲ್ಲಿ ನಂಬಿಕೆ, ವಿಶ್ವಾಸ ಭಯಭಕ್ತಿ ಇಲ್ಲದಿದ್ದರೆ ಸಮಾಜಕ್ಕೆ ಕಂಟಕವಾಗುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೋಮವಾರಪೇಟೆ ತಾಲೂಕು ಯೋಜನಾಧಿಕಾರಿ ವೈ. ಪ್ರಕಾಶ್ ಅಭಿಪ್ರಾಯಪಟ್ಟರು.

ಗೋಣಿಮರೂರು ಶ್ರೀ ಬಸವೇಶ್ವರ ದೇವಾಲಯದ ಸಭಾಂಗಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೆಬ್ಬಾಲೆ ವಲಯ, ಗೋಣಿಮರೂರು ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಮತ್ತು ಬಾಣವಾರ ಶ್ರೀ ಬಸವೇಶ್ವರ ದೇವಾಲಯ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಿವೃತ್ತ ಪಿಡಿಓ ಮೋಹನ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜನರು ದೇವರು ಮತ್ತು ಆಧ್ಯಾತ್ಮಿಕ ವಿಚಾರದಲ್ಲಿ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬರೂ ಆಧ್ಯಾತ್ಮಿಕ ಮತ್ತು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಯ ಭಕ್ತಿಯ ಮನೋಭಾವನೆಯನ್ನು ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.

ಶ್ರೀ ಬಸವೇಶ್ವರ ದೇವಾಲಯದ ಗೌರವ ಅಧ್ಯಕ್ಷ ಎ.ಬಿ. ಧರ್ಮಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಾರಿಗೊಂಡ ಮೇಲೆ ಮಹಿಳೆಯರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದುತ್ತಿರುವದು ಶ್ಲಾಘನಿಯ ಎಂದರು. ಗೋಣಿಮರೂರು ಒಕ್ಕೂಟದ ಅಧ್ಯಕ್ಷ ಸುರೇಂದ್ರ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ರೇವಣ್ಣ, ಪ್ರಮುಖ ಚೇತನ್ ಮಾತನಾಡಿದರು. ಸಮಾರಂಭದಲ್ಲಿ ಹೆಬ್ಬಾಲೆ ವಲಯ ಮೇಲ್ವಿಚಾರಕ ಕೆ. ವಿನೋದ್‍ಕುಮಾರ್, ಬಾಣವಾರ ಒಕ್ಕೂಟದ ಅಧ್ಯಕ್ಷ ದೊಡ್ಡಪ್ಪ, ದೇವಾಲಯ ಸಮಿತಿ ಅಧ್ಯಕ್ಷ ಪುಟ್ಟಪ್ಪ, ಅಕ್ಕನಬಳಗ ಅಧ್ಯಕ್ಷೆ ವಿಶಾಲಾಕ್ಷಿ, ಸೇವಾ ಪ್ರತಿನಿಧಿಗಳಾದ ಸರೋಜ, ಉಷಾ ಮುಂತಾದವರು ಹಾಜರಿದ್ದರು. ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮದ ಪ್ರಯುಕ್ತ ಅನ್ನದಾನವನ್ನು ಏರ್ಪಡಿಸಲಾಗಿತ್ತು.