ಮಡಿಕೇರಿ, ಫೆ. 28: ಕೊಡಗಿನ ಸಹಕಾರ ಕ್ಷೇತ್ರವು ಭವಿಷ್ಯದಲ್ಲಿ ಇನ್ನಷ್ಟು ಉತ್ತಮ ಸಾಧನೆಯೊಂದಿಗೆ ರಾಷ್ಟ್ರೀಯ ಮೇಲ್ಮೈ ಕಾಣುವಂತಾಗಲಿ ಎಂದು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್. ದೇವಯ್ಯ ಆಶಿಸಿದರು. ಇಲ್ಲಿನ ಬಾಲಭವನದಲ್ಲಿ ಸಹಕಾರ ಸಂಘಗಳ ಕಾರ್ಯನಿರ್ವಹಣಾಧಿಕಾರಿಗಳಿಗೆ ಆಯೋಜಿಸಿದ್ದ ಕಚೇರಿ ನಿರ್ವಹಣೆ, ಆದಾಯ ತೆರಿಗೆ ಕುರಿತು ರಾಜ್ಯಮಟ್ಟದ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕೊಡಗಿನಲ್ಲಿ ಜನ ಸಾಮಾನ್ಯರು ಹಾಗೂ ಬಡವರು, ಮಧ್ಯಮ ವರ್ಗಕ್ಕೆ ಸಹಕಾರ ಸಂಘಗಳಿಂದ ಸೌಲಭ್ಯಗಳು ದೊರಕುವಂತಾಗಿದ್ದು, ಒಂದೊಮ್ಮೆ ರಾಷ್ಟ್ರೀಯ ಬ್ಯಾಂಕ್‍ಗಳು ಈ ವರ್ಗಗಳನ್ನು ನಿರ್ಲಕ್ಷಿಸುತ್ತಾ ಬಂದಿದ್ದಾಗಿ ಅವರು ನೆನಪಿಸಿದರು. ಇಂತಹ ಸಹಕಾರ ಸಂಸ್ಥೆಗಳ ಉದ್ಯೋಗಿಗಳು ಪ್ರಾಮಾಣಿಕ ನೆಲೆಯಲ್ಲಿ ಶ್ರಮಿಸುತ್ತಿದ್ದರೆ ಆಡಳಿತ ಮಂಡಳಿ ಹಾಗೂ ಕೃಷಿ ಪತ್ತಿನ ಸಂಸ್ಥೆಗಳಿಗೆ ಉತ್ತಮ ಹೆಸರು ದೊರಕಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕೊಡಗು ಸಹಕಾರ ಯೂನಿಯನ್ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಪ್ರಾಸ್ತಾವಿಕ ನುಡಿಯಾಡುತ್ತಾ, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರ ಸಂಸ್ಥೆಗಳು ರಾಜ್ಯದಲ್ಲೇ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಹೆಗ್ಗಳಿಕೆ ಇದೆಯೆಂದು ಬಣ್ಣಿಸಿದರು. ತಾನು ರಾಜ್ಯ ನಿರ್ದೇಶಕನಾಗಿ ಪ್ರವಾಸ ಸಂದರ್ಭ ಈ ವಾಸ್ತವ ಅರಿವಿಗೆ ಬಂದಿದ್ದು, ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸಿಬ್ಬಂದಿಯ ಪ್ರಾಮಾಣಿಕ ಪ್ರಯತ್ನದಿಂದ ಇದು ಸಾಧ್ಯವಾಗಿದೆ ಎಂದು ನೆನಪಿಸಿದರು.
ಸಾಧನೆಗೆ ಸನ್ಮಾನ: ರಾಷ್ಟ್ರಮಟ್ಟದಲ್ಲಿ ಉತ್ತಮ ಕಾರ್ಯನಿರ್ವಹಣೆಗಾಗಿ ಕುಶಾಲನಗರ ವಾಣಿಜ್ಯ ಸಹಕಾರ ಸಂಘದ ಅಧ್ಯಕ್ಷ ಟಿ.ಎ. ಶರವಣಕುಮಾರ್, ಮಡಿಕೇರಿ ತಾಲೂಕು ಕೃಷಿ ಪ್ರಾಥಮಿಕ ಬ್ಯಾಂಕ್ ಅಧ್ಯಕ್ಷ ಎ.ಕೆ. ಮನುಮುತ್ತಪ್ಪ ಹಾಗೂ ಕಾರ್ಯನಿರ್ವಹಣಾಧಿಕಾರಿ ಬಾಲ ಗಂಗಾಧರ್, ದಕ್ಷಿಣ ಕೊಡಗು ಮುಸ್ಲಿಂ ಸಹಕಾರ ಸಂಸ್ಥೆ ಅಧ್ಯಕ್ಷ ಮಹಮ್ಮದ್ ಸೊಯಬ್ ಹಾಗೂ ಕುಶಾಲನಗರ ಶಾರದಾ ಮಹಿಳಾ ಸಂಘದ ಅಧ್ಯಕ್ಷೆ ಶಾಂತಾ ಮೊದಲಾದವರನ್ನು ಈ ಸಂದರ್ಭ ಸಂಸ್ಥೆಯ ಸೇವೆ - ಸಾಧನೆಗಾಗಿ ಗೌರವಿಸಲಾಯಿತು.
ಸಾಧಕರ ಪರವಾಗಿ ಶರವಣ ಕುಮಾರ್, ಮಹಮ್ಮದ್ ಸೋಯಬ್ ಮಾತನಾಡಿ, ತಮ್ಮ ಸಂಸ್ಥೆಗಳು ಕ್ರಮಿಸಿದ ಏಳಿಗೆಯ ಹಾದಿಯ ಬಗ್ಗೆ ಅಭಿಪ್ರಾಯ ಮಂಡಿಸಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶಂಬುಲಿಂಗಪ್ಪ, ಮಂಜುನಾಥ್ ಸಿಂಗ್ ಮೊದಲಾದವರು ವಿಚಾರ ಮಂಡಿಸಿದರು. ನಿರ್ದೇಶಕರುಗಳಾದ ಎಸ್.ಪಿ. ನಿಂಗಪ್ಪ, ಹೆಚ್.ಎಸ್. ರಾಮಚಂದ್ರ, ಕೆ.ಎಂ. ತಮ್ಮಯ್ಯ, ರವಿ ಬಸಪ್ಪ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೆ.ಎಸ್. ಗಣಪತಿ ಸ್ವಾಗತಿಸಿ, ಮಂಜುಳಾ ಪ್ರಾರ್ಥಿಸಿ, ಅಧಿಕಾರಿ ಯೋಗೇಂದ್ರ ನಾಯಕ್ ನಿರೂಪಿಸಿದರು. ಜಿಲ್ಲೆಯ ಬಹುತೇಕ ಸಹಕಾರ ಸಂಸ್ಥೆಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಪಾಲ್ಗೊಂಡಿದ್ದರು.