ವೀರಾಜಪೇಟೆ, ಫೆ. 28: ಸಮಾಜದಲ್ಲಿ ಹೆಚ್ಚಿನ ಕಾನೂನು ಉಲ್ಲಂಘನೆ ಪ್ರಕರಣಗಳು ವರದಿಯಾಗುತ್ತಿದ್ದು ಜನರಲ್ಲಿ ಕಾನೂನು ಅರಿವು ಹಾಗೂ ಸಾಮಾಜಿಕ ಪರಿಕಲ್ಪನೆ ಇಲ್ಲದಿರುವದು ಇದಕ್ಕೆ ಕಾರಣ ಎಂದು ಸಮುಚ್ಚಯ ನ್ಯಾಯಾಲಯದ ಪ್ರಿನ್ಸಿಫಲ್ ಮುನ್ಸಿಫ್ ನ್ಯಾಯಾಧೀಶ ಶಿವಾನಂದ ಲಕ್ಷ್ಮಣ್ ಅಂಚಿ ಅಭಿಪ್ರಾಯಪಟ್ಟರು.
ವೀರಾಜಪೇಟೆ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಲಯನ್ಸ್ ಕ್ಲಬ್ ಹಾಗೂ ಅಮ್ಮತ್ತಿ ಗ್ರಾಮ ಪಂಚಾಯಿತಿಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಸಾಮಾಜಿಕ ನ್ಯಾಯ ದಿನಾಚರಣೆ ಯನ್ನು ಉದ್ಘಾಟಿಸಿದ ಲಕ್ಷ್ಮಣ್ ಅಂಚಿ ಅವರು ದೇಶದ ಪ್ರಜೆಯೊಬ್ಬ ತನ್ನ ಮೂಲಭೂತ ಹಕ್ಕಿನ ರಕ್ಷಣೆಗಾಗಿ ಇತರರ ಹಕ್ಕನ್ನು ಕಸಿದು ಕೊಳ್ಳಬಾರದು. ಸಾಮಾಜಿಕ ನ್ಯಾಯದಲ್ಲಿ ತಮ್ಮ ಹಕ್ಕುಗಳನ್ನು ರಕ್ಷಿಸಿ ಕೊಳ್ಳುವದರೊಂದಿಗೆ ಇತರರ ಹಕ್ಕಿನ ರಕ್ಷಣೆಗೂ ಆದ್ಯತೆ ನೀಡಿದರೆ ಸಾಮಾಜಿಕ ನ್ಯಾಯ ಎಂಬದು ಸಾಕಾರಗೊಳ್ಳಲಿದೆ ಎಂದರು.
ಅಮ್ಮತ್ತಿ ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ವೀರಾಜಪೇಟೆ ನೋಟರಿ ಹಾಗೂ ವಕೀಲ ಎಂ.ಎಂ. ಪೂಣಚ್ಚ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅತಿಥಿಗಳಾಗಿ ವಕೀಲರ ಸಂಘದ ಅಧ್ಯಕ್ಷ ಎಂ.ಎಂ. ನಂಜಪ್ಪ, ಪ್ರಶಾಂತ್, ಅಮ್ಮತ್ತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಾ, ಕೆನರಾ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ರಾಹುಲ್ ನಾಥ್, ತಾಲೂಕು ವೈದ್ಯಾಧಿಕಾರಿ ಡಾ. ಹೇಮಾವತಿ, ಡಾ. ಅಲ್ಲಮಪ್ರಭು ಭಾಗವಹಿಸಿದ್ದರು.