ಭಾಗಮಂಡಲ, ಫೆ. 27: ಇಲ್ಲಿಗೆ ಸಮೀಪದ ಅಯ್ಯಂಗೇರಿ ಗ್ರಾಮದಲ್ಲಿ ಪ್ರತಿ ವರ್ಷ ಫೆಬ್ರವರಿ ಕೊನೆಯ ವಾರ ಅಥವಾ ಮಾರ್ಚ್ ಮೊದಲ ವಾರ ಜರುಗುವ ಶ್ರೀ ಚಿನ್ನತಪ್ಪ (ಶ್ರೀಕೃಷ್ಣ) ಉತ್ಸವ ಇಂದು ಭಕ್ತಿಪೂರ್ವಕವಾಗಿ ಜರುಗಿತು. ನಿನ್ನೆ ಬೆಳಗ್ಗಿನ ಉತ್ಸವದೊಂದಿಗೆ ಆರಂಭಗೊಂಡ ಉತ್ಸವದಲ್ಲಿ ಶ್ರೀ ಕೃಷ್ಣನ ಕೊಳಲನ್ನು 7.40ರ ಸಮಯಕ್ಕೆ ದೇವಾಲಯದಿಂದ ಹೊರತಂದು ನಿರ್ಧಿಷ್ಟ ಸ್ಥಳಗಳಲ್ಲಿ ಮೂರು ಬಾರಿ ನುಡಿಸುತ್ತಾ ಮಂದ್ ಸಮೀಪದ ಕೈಬಿಲಿ ಕೋಟದ ಬಳಿ ಬಂದು ಹಿಂತಿರುಗಲಾಯಿತು. ಸೂರ್ಯಾಸ್ತವಾಗುತ್ತಿದ್ದಂತೆ ಸಮೀಪದ ಕಲ್ಲುಹೊಳೆಗೆ ತೆರಳಿ ಸಾಂಪ್ರದಾಯಿಕ ಪೂಜಾವಿಧಿವಿಧಾನಗಳನ್ನು ನೆರವೇರಿಸಿದರು. ರಾತ್ರಿ 8.30ರಿಂದ ಧಾರಾ ಪೂಜೆ, ಹಬ್ಬದ ಪೂಜೆ ಹಾಗೂ ಸಾಂಪ್ರದಾಯಿಕ ಪೂಜೆ ಬೆಳಗ್ಗಿನ ಜಾವ 2ಗಂಟೆಯವರೆಗೆ ನೆರವೇರಿತು.

ಇಂದು ಮಧ್ಯಾಹ್ನ ದೇವಾಲಯ ದಿಂದ ಶ್ರೀಕೃಷ್ಣನದು ಎನ್ನಲಾದ ಕೊಳಲನ್ನು ಭಕ್ತಿಪೂರ್ವಕವಾಗಿ ಹೊರತೆಗೆಯಲಾಯಿತು. ಹಬ್ಬಕ್ಕೆ ನಿಗದಿ ಪಡಿಸಿದ ಈ ವರ್ಷ ಬಿದ್ದಿಯಂಡ ಹರೀಶ್ ಕೊಳಲನ್ನು ಎತ್ತಿಕೊಂಡು ನಿರ್ಧಿಷ್ಟ ಜಾಗಗಳಲ್ಲಿ ಮೂರು ಬಾರಿ ನುಡಿಸುತ್ತಾ ಬಂದು ಮಧ್ಯಾಹ್ನ 1.18 ರ ವೇಳೆಗೆ ಊರ ಮಂದ್‍ಗೆ ಆಗಮಿಸಿದರು. ಅಶ್ವತ್ಥ ವೃಕ್ಷದ ಕೆಳಗೆ ನೆರೆದಿದ್ದ ಭಕ್ತಾದಿಗಳ ಸಮ್ಮುಖದಲ್ಲಿ ಕೃಷ್ಣನ ಕೊಳಲನ್ನು ನುಡಿಸಲಾಯಿತು. ಕೃಷ್ಣನ ಕೊಳಲಿನ ನಾದವನ್ನು ಭಕ್ತರು ಆಲಿಸಿ ಪುನೀತರಾದರು.

ಕೊಳಲನ್ನು ನುಡಿಸುತ್ತಿದ್ದಂತೆ ಆಕಾಶದಲ್ಲಿ ಗರುಡ ಕಾಣಿಸಿತು. ಈ ಸಂದರ್ಭ ನಾಳಿಯಂಡ ಮಾನಿ ಎಂಬಲ್ಲಿಂದ ಎತ್ತುಪೋರಾಟ ದೊಂದಿಗೆ ಹೊರಟ ಶ್ವೇತವಸ್ತ್ರಧರಿಸಿದ ಮಹಿಳೆಯರು ಊರಮಂದ್‍ಗೆ ಆಗಮಿಸಿದರು. ಬಳಿಕ ಊರಮಂದ್‍ನ ಗದ್ದೆಯಲ್ಲಿ ಮೂರು ಸುತ್ತು ಎತ್ತು ಪೋರಾಟ ನಡೆಯಿತು. ಚಿಂಗಂಡ ಡಿಸೋಜ ಅವರು ತೆಂಗಿನಕಾಯಿಗೆ ಗುಂಡು ಹೊಡೆಯುವದರ ಮೂಲಕ ಹಬ್ಬದ ಕಟ್ಟು ಸಡಿಲಿಸಲಾಯಿತು. ಬಳಿಕ ಧಾರಾ ಪೂಜೆ ನಡೆದ ಸ್ಥಳಕ್ಕೆ ಕೃಷ್ಣನ ಕೊಳಲನ್ನು ಹಿಡಿದವರು, ಶ್ವೇತವಸ್ತ್ರ ಧರಿಸಿದ ಮಹಿಳೆಯರು ಹಾಗೂ ಎತ್ತು ಪೋರಾಟ ನಡೆಸಿದವರು ಬಂದು ಅಪ್ಪಾಂಡ ಆಳಿ ಎಂಬಲ್ಲಿ ತೆರಳಿ ತಪ್ಪಡ್ಕ ಸಲ್ಲಿಸಿ ಮೀನಿಗೆ ಅಕ್ಕಿ ಹಾಕಲು ಆಹ್ವಾನಿಸಲಾಯಿತು. ಧಾರಾಪೂಜೆ ನಡೆದ ಸ್ಥಳಕ್ಕೆ ತೆರಳಿದ ಕುಟುಂಬಸ್ಥರು ಮೀನಿಗೆ ಅಕ್ಕಿ ಹಾಕಿದ ಬಳಿಕ ದೇವಾಲಯಕ್ಕೆ ತೆರಳುವದ ರೊಂದಿಗೆ ಉತ್ಸವಕ್ಕೆ ತೆರೆ ಎಳೆಯಲಾಯಿತು.

-ಸುನಿಲ್ ಕುಯ್ಯಮುಡಿ