ಮಡಿಕೇರಿ, ಫೆ. 27: ಕೊಡಗು ಜಿಲ್ಲಾ ರೆಡ್‍ಕ್ರಾಸ್ ಘಟಕಕ್ಕೆ ಅಗತ್ಯವಾದ ಕಚೇರಿ ಮತ್ತು ನೂತನ ಕಟ್ಟಡ ನಿರ್ಮಾಣಕ್ಕೆ ಎಲ್ಲಾ ರೀತಿಯ ಸಹಾಯ ನೀಡುವದಾಗಿ ಜಿಲ್ಲಾಧಿಕಾರಿ ಮತ್ತು ರೆಡ್‍ಕ್ರಾಸ್ ಘಟಕದ ಜಿಲ್ಲಾ ಅಧ್ಯಕ್ಷೆ ಅನೀಸ್ ಕಣ್ಮಣಿ ಜಾಯ್ ಭರವಸೆ ನೀಡಿದ್ದಾರೆ.
ನಗರದ ಬಾಲಭವನದಲ್ಲಿ ಜರುಗಿದ ಜಿಲ್ಲಾ ರೆಡ್‍ಕ್ರಾಸ್ ಘಟಕದ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಕೃತಿ ವಿಕೋಪ ಸಂದರ್ಭ ಸಂತ್ರಸ್ತರಿಗೆ ರೆಡ್‍ಕ್ರಾಸ್ ವತಿಯಿಂದ ಎಲ್ಲಾ ರೀತಿಯ ಸಹಾಯ ನೀಡಿರುವದು ಶ್ಲಾಘನೀಯ. ಅಂತರರಾಷ್ಟ್ರೀಯ ಸೇವಾ ಸಂಸ್ಥೆಯಾಗಿರುವ ರೆಡ್‍ಕ್ರಾಸ್‍ಗೆ ಜಿಲ್ಲೆಯಲ್ಲಿ ಮತ್ತಷ್ಟು ಸೇವಾಕಾಂಕ್ಷೆಯ ಸದಸ್ಯರನ್ನು ನೋಂದಣಿ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದರು.
ಕೊಡಗು ಘಟಕದ ಗೌರವ ಕಾರ್ಯದರ್ಶಿ ಮುರಳೀಧರ್ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಜಿ.ಪಂ. ಸಿಇಒ ಲಕ್ಷ್ಮಿಪ್ರಿಯ ಅವರನ್ನು ಕೊಡಗು ಘಟಕದ ಆಡಳಿತಾತ್ಮಕ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಕೊಡಗು ರೆಡ್‍ಕ್ರಾಸ್ ಸಂಸ್ಥೆಯ ಆಡಳಿತಕ್ಕೆ ನೂತನ ಸಭಾಧ್ಯಕ್ಷರಾಗಿ ಬಿ.ಕೆ. ರವೀಂದ್ರ ರೈ ಆಯ್ಕೆಯಾಗಿದ್ದಾರೆ. ಮುಂದಿನ ಮೂರು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಯಿತು. ರಾಜ್ಯ ಸಮಿತಿಗೂ ಅವರನ್ನು ಪ್ರತಿನಿಧಿಯಾಗಿ ಆಯ್ಕೆ ಮಾಡಲಾಯಿತು.
ರೆಡ್‍ಕ್ರಾಸ್ ಕೊಡಗು ಘಟಕದ ಗೌರವ ಕಾರ್ಯದರ್ಶಿಯಾಗಿ ಹೆಚ್.ಆರ್. ಮುರಳೀಧರ್, ಉಪಾಧ್ಯಕ್ಷರಾಗಿ ಪತ್ರಕರ್ತ ಅನಿಲ್ ಎಚ್.ಟಿ. ಮತ್ತು ಜೋಸೇಫ್ ಶ್ಯಾಮ್, ಜಂಟಿ ಕಾರ್ಯದರ್ಶಿಯಾಗಿ ಪಿ.ಟಿ. ಬೋಪಯ್ಯ, ಖಜಾಂಚಿಯಾಗಿ ಡಾ. ಅನಿತಾ ಸುಧಾಕರ್, ಕಾನೂನು ಘಟಕದ ಮುಖ್ಯಸ್ಥರಾಗಿ ವಕೀಲ ಕೆ.ಡಿ. ದಯಾನಂದ, ಪ್ರಥಮ ಚಿಕಿತ್ಸೆ ಘಟಕದ ಮುಖ್ಯಸ್ಥರಾಗಿ ನಾಪೆÇೀಕ್ಲುವಿನ ಡಾ. ಸನ್ನುವಂಡ ಕಾವೇರಪ್ಪ, ವೈದ್ಯಕೀಯ ಮಹಾ ವಿದ್ಯಾಲಯದ ಉಪನ್ಯಾಸಕಿ ಡಾ. ವೀಣಾ, ಯುವ ರೆಡ್‍ಕ್ರಾಸ್ ಘಟಕದ ಮುಖ್ಯಸ್ಥರಾಗಿ ಎಂ. ಧನಂಜಯ್, ಪಿ.ಆರ್. ರಾಜೇಶ್, ವಿವಿಧ ಸಮಿತಿಗಳಿಗೆ ಸಂಚಾಲಕರಾಗಿ ಎಂ.ಎ. ಹನೀಫ್, ಕೆ.ಆರ್. ಬಾಲಕೃಷ್ಣ ರೈ, ಅಬ್ರಾಹಂ ದಿವಾಕರ್, ಕಚೇರಿ ಕಾರ್ಯದರ್ಶಿಯಾಗಿ ಪಿ.ಎಂ. ಪೆÇನ್ನಮ್ಮ ಅವರನ್ನು ನೇಮಕಗೊಳಿಸಲಾಯಿತು.