ಗೋಣಿಕೊಪ್ಪ ವರದಿ, ಫೆ. 27: ಮೇ ತಿಂಗಳಿನಲ್ಲಿ ಮಾಯಮುಡಿ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನ ಆಯೋಜಿಸಲು ಉದ್ದೇಶಿಸಿರುವ ಅಮ್ಮಕೊಡವ ಜನಾಂಗಗಳ ನಡುವಿನ ಬಾನಂಡ ಕ್ರಿಕೆಟ್ ಕಪ್‍ಗೆ ಮೈದಾನ ದುರಸ್ತಿ ಕಾರ್ಯಪೂರ್ಣಗೊಂಡಿದೆ.

ಮೈದಾನ ಅಗಲೀಕರಣ ಕಾರ್ಯ ಪೂರ್ಣಗೊಂಡಿದ್ದು, ಮಾರ್ಚ್ 17 ರಂದು ಬಾನಂಡ ಕ್ರಿಕೆಟ್ ಕಪ್ ಲೋಗೋ ಬಿಡುಗಡೆ ಮೂಲಕ ಕ್ರೀಡಾ ಚಟುವಟಿಕೆಗೆ ಚಾಲನೆ ನೀಡುವ ಬಗ್ಗೆ ಬಾನಂಡ ಕುಟುಂಬಸ್ಥರು ನಿರ್ಧರಿಸಿದರು.

ಮೈದಾನದಲ್ಲಿ ಬಾನಂಡ ಕುಟುಂಬಸ್ಥರು ಸಭೆ ನಡೆಸಿ, ಲೋಗೋ ಅನಾವರಣದ ಮೂಲಕ ಕ್ರೀಡಾಕೂಟ ಪೂರ್ವಭಾವಿಯಾಗಿ ಆರಂಭ ನೀಡುವ ಬಗ್ಗೆ ನಿರ್ಧರಿಸಿದರು.

ಬಾನಂಡ ಕುಟುಂಬದ ಪ್ರಮುಖರುಗಳಾದ ಬಾನಂಡ ಪ್ರಥ್ಯು ಮಾತನಾಡಿ, ಮೊದಲ ಬಾರಿಗೆ ಮಾಯಮುಡಿ ಗ್ರಾಮದಲ್ಲಿ ಜನಾಂಗಗಳ ನಡುವಿನ ಕ್ರಿಕೆಟ್ ಟೂರ್ನಿ ನಡೆಯುತ್ತಿರುವದರಿಂದ ಹೆಚ್ಚಿನ ಕ್ರೀಡಾಭಿಮಾನಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಬಾನಂಡ ಕುಟುಂಬದ ಮೂಲ ಸ್ಥಾನ ಕೂಡ ಮಾಯಮುಡಿ ಗ್ರಾಮ ಆಗಿರುವದರಿಂದ ಕ್ರೀಡೆಯ ಮೂಲಕ ಗ್ರಾಮವನ್ನು ಜನಾಂಗದವರಿಗೆ ಪರಿಚಯಿಸುವ ಅವಕಾಶ ಲಭಿಸಿದೆ ಎಂದರು.

ಈ ಸಂದರ್ಭ ಬಾನಂಡ ಕ್ರಿಕೆಟ್ ಕಪ್ ಕಾರ್ಯದರ್ಶಿ ಬಾನಂಡ ಪ್ರಕಾಶ್, ಖಜಾಂಚಿ ಬಾನಂಡ ಸುದನ್, ಪ್ರಮುಖರುಗಳಾದ ಕ್ರಿಶ್‍ರಾಜ್, ಸುನಿತ್ ಹಾಗೂ ಶಿವು ಉಪಸ್ಥಿತರಿದ್ದರು.

- ಸುದ್ದಿಪುತ್ರ