ಮಡಿಕೇರಿ, ಫೆ. 27: ಮೈಸೂರಿನಲ್ಲಿರುವ ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘ (ಎಂ.ಸಿ.ಪಿ.ಸಿ.ಎಸ್.)ವನ್ನು ಮೈಸೂರು ಕಾಫಿ ವೇರ್ ಹೌಸಿಂಗ್ ಸಹಕಾರ ಸಂಘವಾಗಿ ಪರಿವರ್ತಿಸಿ ಪುನಶ್ಚೇತನಗೊಳಿಸುವ ಮಹತ್ವದ ನಿರ್ಧಾರವನ್ನು ನಿನ್ನೆ ನಡೆದ ಮಹಾಸಭೆಯಲ್ಲಿ ಕೈಗೊಳ್ಳಲಾಗಿದೆ.

ವಿವಾದಾತ್ಮಕ ವಿಚಾರವಾಗಿ ರೂಪುಗೊಂಡಿದ್ದ ಈ ಸಂಘದ ಅಭಿವೃದ್ಧಿಯ ಕುರಿತು ನಿನ್ನೆ ವಿಶೇಷ ಮಹಾಸಭೆ ನಡೆದಿದ್ದು, ಈ ಸಭೆಯಲ್ಲಿ ಪಾಲ್ಗೊಂಡಿದ್ದ ಸದಸ್ಯರು ಈ ಬಗ್ಗೆ ಸರ್ವಾನುಮತದ ನಿರ್ಣಯ ಕೈಗೊಂಡಿದ್ದಾರೆ.

ಸಂಘದ ವಿಚಾರವಾಗಿ ಅಮ್ಮತ್ತಿಯ ಮೂಕೋಂಡ ಬೋಸ್ ದೇವಯ್ಯ ಅವರ ನೇತೃತ್ವದಲ್ಲಿ ಸಂಘದ ಸದಸ್ಯರ ಹಿತರಕ್ಷಣಾ ಸಮಿತಿಯನ್ನು ರಚಿಸಿ ಈ ಸಮಿತಿಯ ಮೂಲಕ ನಡೆಸಿದ ಹೋರಾಟದಂತೆ ಈ ನಿರ್ಧಾರಕ್ಕೆ ಬರಲಾಗಿದೆ.

ಕೊಡಗು ಸೇರಿದಂತೆ ಕಾಫಿ ಬೆಳೆಯುವ ಜಿಲ್ಲೆಗಳ ಬೆಳೆಗಾರರು ಇದರ ಸದಸ್ಯರಾಗಿದ್ದಾರೆ. ನಿನ್ನೆಯ ಸಭೆಯಲ್ಲಿ ಎಂ.ಸಿ.ಪಿ.ಸಿ.ಎಸ್. ಸದಸ್ಯರು ಕಪ್ಪುಪಟ್ಟಿ ಧರಿಸಿ ಮೈಸೂರಿನ ಯಾದವಗಿರಿಯಲ್ಲಿನ ಕಚೇರಿ ಆವರಣದಲ್ಲಿ ಸಂಘದ ಸಮಾಪನಾಧಿಕಾರಿ ವಿಕ್ರಮ ರಾಜರಸ್ ಇವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಪಾಲ್ಗೊಂಡಿದ್ದರು.

ಸಂಘದ ಆಸ್ತಿಗೆ ನಷ್ಟವುಂಟು ಮಾಡಿ, ಸಂಘದ ಸ್ವಂತ ಜಾಗ 10.50 ಎಕರೆಯಲ್ಲಿ 5 ಎಕರೆಯನ್ನು ಕಬಳಿಸಿ, ಉಳಿಕೆ 5.30 ಎಕರೆ ಜಾಗ ಮತ್ತು ಸಂಘದ ಹಣ ರೂ. 2 ಕೋಟಿಯನ್ನು ದುರುಪಯೋಗಪಡಿಸಿಕೊಂಡು ಈಗಲೂ ಅಧಿಕಾರದಲ್ಲಿ ಮುಂದುವರಿಯುತ್ತಿದ್ದು, ಸಂಘವನ್ನು ಸದಸ್ಯರಿಗೆ ವಾಪಾಸ್ಸು ಬಿಟ್ಟುಕೊಡಲು ತಡೆಯೊಡ್ಡುತ್ತಿರುವ ಕೆಲವು ಹಿರಿಯ ಅಧಿಕಾರಿಗಳ ವಿರುದ್ಧ ಬೋಸ್ ದೇವಯ್ಯ ಅವರ ನೇತೃತ್ವದಲ್ಲಿ ಸಾಂಕೇತಿಕ ಪ್ರತಿಭಟನೆಯನ್ನು ನಡೆಸಲಾಯಿತು. ಸಮಾಪನಾಧಿಕಾರಿ ಮುಖಾಂತರ ಕರ್ನಾಟಕ ರಾಜ್ಯ ಮುಖ್ಯಮಂತ್ರಿಯವರಿಗೆ ಸಂಘಕ್ಕೆ ಆಡಳಿತ ಮಂಡಳಿ ರಚಿಸಿ, ಆಸ್ತಿಯನ್ನು ಸದಸ್ಯರಿಗೆ ವಾಪಾಸ್ಸು ನೀಡುವಂತೆ ಮನವಿ ಸಲ್ಲಿಸಲಾಯಿತು.

2016-17ನೇ ಸಾಲಿನ ಆಡಿಟ್ ವರದಿಯಲ್ಲಿ ಸಂಘದ ಹಣ ರೂ. 2.67 ಲಕ್ಷವನ್ನು ಹಿಂದಿನ ಸಮಾಪನಾಧಿಕಾರಿ ಯವರು ಉಡುಪಿಯಲ್ಲಿನ ಯಾವದೋ ಮುಚ್ಚಿದ ಸಹಕಾರ ಸಂಘದ ಲೆಕ್ಕಕ್ಕೆ ಕಾನೂನು ಬಾಹಿರವಾಗಿ ಕಳುಹಿಸಿರುವದರ ಬಗ್ಗೆ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಇದಕ್ಕೆ ಕಾರಣಕರ್ತರಾದ ಇಲಾಖಾಧಿಕಾರಿ ಗಳಿಂದ ವಸೂಲಿ ಮಾಡಬೇಕೆಂದು ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಸಭೆಯ ಪ್ರಮುಖ ಕಾರ್ಯಕ್ರಮವಾದ ಸಂಘವನ್ನು ಪುನಶ್ಚೇತನಗೊಳಿಸುವ ಸಲುವಾಗಿ ಸಂಘದ ಹೆಸರನ್ನು ಮೈಸೂರು ಕಾಫಿ ವೇರ್ ಹೌಸಿಂಗ್ ಸಹಕಾರ ಸಂಘವಾಗಿ ಪರಿವರ್ತಿಸುವ ಸಂಬಂಧ ಸದಸ್ಯರು ಸಮಾಪನಾಧಿಕಾರಿ ಯವರಿಗೆ ಕಾಯ್ದೆ 28 ರಂತೆ ನೋಟಿಸ್ಸು ಸಲ್ಲಿಸಿ, ನೀಡಿದ 18 ಪುಟಗಳ ಕ್ರಿಯಾಯೋಜನೆಯನ್ನು ಸಭೆಗೆ ಬೋಸ್ ದೇವಯ್ಯ ಅವರು ಸಭೆಗೆ ಮಂಡಿಸಿದರು. ಈ ಕ್ರಿಯಾಯೋಜನೆಗೆ ಸರ್ವಸದಸ್ಯರು ಒಪ್ಪಿಗೆ ನೀಡಿ ಪುನಶ್ಚೇತನ ಸಂಬಂಧ ಸದಸ್ಯರು ಮಂಡಿಸಿದ ಕ್ರಿಯಾ ಯೋಜನೆಯನ್ನು ಕೂಡಲೇ ಅನುಷ್ಠಾನಗೊಳಿಸುವಂತೆ ಸಮಾಪನಾಧಿಕಾರಿಯನ್ನು ಕೋರಿದರು.

ಸಂಘದ ಹಣ ರೂ. 2 ಕೋಟಿ ಈಗಲೂ ಸರಕಾರದ ಅಭಿವೃದ್ಧಿ ನಿಧಿಯಲ್ಲಿರುವದರ ಬಗ್ಗೆ ಸದಸ್ಯರು ಪ್ರಶ್ನಿಸಿ, ಈ ಹಣ ಬ್ಯಾಂಕ್‍ನಲ್ಲಿ ಠೇವಣಿ ಇಟ್ಟಿದ್ದರೆ ಸಂಘಕ್ಕೆ ವಾರ್ಷಿಕ 16 ಲಕ್ಷ ಲಾಭ ಬರುತ್ತಿತ್ತು. ಇದು ಬ್ಯಾಂಕ್‍ನಲ್ಲಿ ಇಲ್ಲದೆ ಹೊರಗಡೆ ಇರುವದರಿಂದ ಸಂಘಕ್ಕೆ ವಾರ್ಷಿಕ 16 ಲಕ್ಷ ನಷ್ಟವುಂಟಾಗುತ್ತಿದೆ ಎಂದು ತಿಳಿಸಿ, ಕೂಡಲೇ ಈ ಹಣವನ್ನು ಸಂಘದ ಹೆಸರಿಗೆ ವಾಪಾಸ್ಸು ಪಡೆಯುವಂತೆ ಆಗ್ರಹಿಸಿದರು.

ಮಹಾಸಭೆಯಲ್ಲಿ ಸಂಘಗಳ ಪ್ರತಿನಿಧಿ ಸದಸ್ಯರುಗಳಾದ ಕೆ.ಬಿ. ಹೇಮಚಂದ್ರ, ಸಿ.ಕೆ. ನಂಜಪ್ಪ, ಮನು ಮುತ್ತಪ್ಪ, ಹರೀಶ್ ಪೂವಯ್ಯ, ಬಿ.ಕೆ. ಚಿನ್ನಪ್ಪ, ಪ್ರಸನ್ನ, ಮಾಜಿ ಅಧ್ಯಕ್ಷರುಗಳಾದ ಎಸ್.ಬಿ. ಶಂಕರು, ಕೆ.ಎಂ. ಸೋಮಯ್ಯ ಮತ್ತು ಕೊಡಗು, ಚಿಕ್ಕಮಗಳೂರು, ಹಾಸನ ಕಾಫಿ ಬೆಳೆಗಾರ ಸದಸ್ಯರು ಸೇರಿ ಒಟ್ಟು 200 ಸದಸ್ಯರು ಹಾಜರಿದ್ದರು.