ಮಡಿಕೇರಿ, ಫೆ. 27: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಶಾಸಕ ಕೆ.ಜಿ. ಬೋಪಯ್ಯ ಅವರು ಮತ್ತೆ ತಮ್ಮ ವಿವಿಧ ಕಾಮಗಾರಿಗಳಿಗೆ ಸರಣಿ ಭೂಮಿ ಪೂಜೆಯನ್ನು ಮಾಡುತ್ತಾ ಜನರ ಹಾದಿ ತಪ್ಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಸಮಿತಿ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಬಿ.ಎಸ್.ರಮಾನಾಥ್, ಪ್ರಕೃತಿ ವಿಕೋಪದಿಂದ ನಲುಗಿ ಹೋಗಿರುವ ಜಿಲ್ಲೆಯ ಜನರಿಗೆ ಪುನರ್‍ವಸತಿ ಮತ್ತು ಮೂಲಭೂತ ಸೌಲಭ್ಯ ಒದಗಿಸಲು ಸರ್ಕಾರ ಕೋಟ್ಯಾಂತ ರೂ. ಹಣವನ್ನು ನೀಡಿದೆ. ಅಲ್ಲದೆ ವಿವಿಧ ಸಂಘ ಸಂಸ್ಥೆ ಮತ್ತು ಸಾರ್ವಜನಿಕ ವಲಯದಿಂದಲೂ ಆರ್ಥಿಕ ನೆರವು ದೊರೆತಿದೆ. ಆದರೆ ಶಾಸಕ ಬೋಪಯ್ಯ ಅವರು ಪ್ರಕೃತಿ ವಿಕೋಪದ ಪರಿಹಾರ ನಿಧಿಯಲ್ಲಿ ನಡೆಯುತ್ತಿರುವ ರಸ್ತೆಗಳ ಅಭಿವೃದ್ಧಿಗೆ ಭೂಮಿ ಪೂಜೆ ಮಾಡುತ್ತಿದ್ದಾರೆ ಎಂದು ರಮಾನಾಥ್ ದೂರಿದರು.
ಪಾರಾಣೆ ಗ್ರಾ.ಪಂ ಮಾಜಿ ಸದಸ್ಯ ಬೊಳ್ಳಂಡ ಶರಿ ಗಿರೀಶ್ ಮಾತನಾಡಿ, ವಿಧಾನ ಪರಿಷತ್ ಸದಸ್ಯೆ ವೀಣಾಅಚ್ಚಯ್ಯ ಅವರ ಶಿಫಾರಸ್ಸಿನ ಮೇಲೆ ಕೊಣಂಜಗೇರಿ ಗ್ರಾ.ಪಂ. ವ್ಯಾಪ್ತಿಯ ಕೈಕಾಡು, ಕಿರುಂದಾಡು, ಎತ್ತುಕಾಡು ಸಂಪರ್ಕ ರಸ್ತೆಗೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಮೂಲಕ 30 ಲಕ್ಷ ರೂ.ಗಳ ಕ್ರಿಯಾ ಯೋಜನೆ ಅನುಮೋದನೆಗೊಂಡು ಕಾಮಗಾರಿ ಕಳೆದ ಡಿ. 28 ರಂದು ಆರಂಭಗೊಂಡಿತ್ತು. ಆದರೆ ಆರಂಭಗೊಂಡ ಕಾಮಗಾರಿಗೆ ಇದೇ ಜನವರಿ 3 ರಂದು ಗ್ರಾ.ಪಂ.ಗೆ ಯಾವದೇ ಮಾಹಿತಿ ನೀಡದೆ ಶಾಸಕ ಭೂಮಿ ಪೂಜೆ ನೆರವೇರಿಸಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಪಿ.ಜಿ.ಕುಟ್ಟಯ್ಯ, ಕೆ.ಯು.ಹ್ಯಾರೀಸ್ ಹಾಗೂ ಪಾರಾಣೆ ಗ್ರಾ.ಪಂ. ಅಧ್ಯಕ್ಷೆ ವನಿತಾತಮ್ಮಯ್ಯ ಉಪಸ್ಥಿತರಿದ್ದರು.