ಕೂಡಿಗೆ, ಫೆ. 27: ಕೂಡಿಗೆ ಮತ್ತು ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ನಿರ್ಮಿತಿ ಕೇಂದ್ರ, ಕಂದಾಯ ಇಲಾಖೆ ಇವರ ಸಹಯೋಗದಲ್ಲಿ ಬಸವನಹಳ್ಳಿ ಮತ್ತು ಬ್ಯಾಡಗೊಟ್ಟ ಆದಿವಾಸಿಗಳ ಪುನರ್ವಸತಿ ಕೇಂದ್ರದಲ್ಲಿ ನಿವಾಸಿಗಳಿಗೆ ಸ್ವಚ್ಛ ಭಾರತ್ ಮಿಷನ್ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಮತ್ತು ಸ್ವಚ್ಛತೆಯ ಬಗ್ಗೆ ಅರಿವು ಜಾಗೃತಿ ಕಾರ್ಯಕ್ರಮ ಮತ್ತು ಆಧಾರ್ ಕಾರ್ಡ್ ಪಡಿತರ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಮತದಾರರ ಗುರುತಿನ ಚೀಟಿ ಹಾಗೂ ಇನ್ನಿತರ ದಾಖಲೆಗಳ ಮಿಂಚಿನ ನೋಂದಣಿ ಕಾರ್ಯಕ್ರಮ ನಡೆಯಿತು.

ಆಧಾರ್ ಕಾರ್ಡ್ ಪಡಿತರ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೋಂದಣಿ ಪ್ರಕ್ರಿಯೆಯನ್ನು ಕಂದಾಯ ಇಲಾಖೆ ವಿಭಾಗವಾಗಿ ಮಾಡಿದರು. ಕೂಡಿಗೆ ಮತ್ತು ಬಸವನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಮನೆಗಳ ನೋಂದಣಿಗೆ ಬೇಕಾಗುವಂತಹ ನೋಂದಣಿ ಪತ್ರಗಳನ್ನು ನೋಂದಾಯಿಸಿಕೊಳ್ಳಲು ಬಸವನಹಳ್ಳಿ ಮತ್ತು ಬ್ಯಾಡಗೊಟ್ಟದಲ್ಲಿ ಕಂಪ್ಯೂಟರ್‍ಗಳನ್ನು ಅಳವಡಿಸಿ ಕೊಂಡು ಸ್ಥಳದಲ್ಲಿಯೇ ಆದಿವಾಸಿ ಪುನರ್ವಸತಿಯ ಉಳಿಕೆ ಫಲಾನುಭವಿಗಳ ದಾಖಲಾತಿಗಳನ್ನು ಪರಿಶೀಲಿಸಿ ದಾಖಲಿಸಿಕೊಳ್ಳಲಾಯಿತು.

ಮುಂದಿನ ವಾರದಲ್ಲಿ ನಿರ್ಮಿತಿ ಕೇಂದ್ರದಿಂದ ನಿರ್ಮಾಣಗೊಂಡಿರುವ 300 ಮನೆಗಳನ್ನು ಹಸ್ತಾಂತರಿಸಲು ಸಿದ್ಧತೆಯಿರುವದರಿಂದ ಫಲಾನುಭವಿಗಳ ದಾಖಲಾತಿಗಳು ಮತ್ತು ಮನೆಯ ನೋಂದಣಿ ಸಂಖ್ಯೆಗಳ ಅಳವಡಿಸುವ ಕಾರ್ಯ ಎರಡೂ ಪುನರ್ವಸತಿ ಕೇಂದ್ರಗಳಲ್ಲಿ ನಡೆಯಿತು.

ಈ ಎಲ್ಲಾ ಕಾರ್ಯಚಟುವಟಿಕೆ ಗಳನ್ನು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಖುದ್ದು ವೀಕ್ಷಿಸಿ, ಕಾರ್ಯಚಟುವಟಿಕೆಯನ್ನು ತುರ್ತಾಗಿ ಮುಗಿಸುವಂತೆ ಅಧಿಕಾರಿ ವರ್ಗದವರಿಗೆ ಸೂಚಿಸಿದರು. ಇದೇ ತಿಂಗಳ ಅಂತ್ಯದಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಜಿಲ್ಲೆಗೆ ಭೇಟಿ ನೀಡುವ ಸಂದರ್ಭ ಬ್ಯಾಡಗೊಟ್ಟ ಮತ್ತು ಬಸವನಹಳ್ಳಿ ದಿಡ್ಡಳ್ಳಿ ಪುನರ್ವಸತಿ ಕುಟುಂಬಸ್ಥರಿಗೆ ಮನೆಗಳನ್ನು ದಾಖಲಾತಿಗಳೊಂದಿಗೆ ಹಸ್ತಾಂತರಿಸಲು ಸಿದ್ಧಗೊಳಿಸುವಂತೆ ಸೂಚಿಸಿದರು.

ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ, ಅಪರ ಜಿಲ್ಲಾಧಿಕಾರಿ ಜವರೇಗೌಡ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಿವಕುಮಾರ್, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ಸಚಿನ್, ತಾಲೂಕು ತಹಶೀಲ್ದಾರ್ ಗೋವಿಂದ ರಾಜ್, ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಶೇಖರ್, ಕಂದಾಯ ನಿರೀಕ್ಷಕ ಮಧುಸೂದನ್, ಕೂಡಿಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಿ.ಜಿ. ಲೋಕೇಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.