ಚೆಟ್ಟಳ್ಳಿ, ಫೆ. 27: ಎರಡು ದಶಕಗಳ ಕನಸಾದ ಕಾವೇರಿ ತಾಲೂಕು ಹೋರಾಟ ನನಸಾಗಿದ್ದು, ಈ ಹಿನ್ನೆಲೆ ತಾಲೂಕು ಹೋರಾಟದ ನೇತೃತ್ವ ವಹಿಸಿದ್ದ ಕಾವೇರಿ ತಾಲೂಕು ಹೋರಾಟ ಸ್ಥಾನೀಯ ಸಮಿತಿ ಪ್ರಮುಖರನ್ನು ನಮ್ಮ ಕೊಡಗು ತಂಡದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ಕುಶಾಲನಗರವನ್ನು ಕೇಂದ್ರವಾಗಿರಿಸಿ ತಾಲೂಕು ರಚನೆಗಾಗಿ ಹೋರಾಟದ ನೇತೃತ್ವವನ್ನು ವಹಿಸಿದ್ದ ಕಾವೇರಿ ತಾಲೂಕು ಹೋರಾಟ ಕೇಂದ್ರೀಯ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಪ್ರಧಾನ ಕಾರ್ಯದರ್ಶಿ ಆರ್.ಕೆ. ನಾಗೇಂದ್ರಬಾಬು ಹಾಗೂ ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ಅವರನ್ನು ನಮ್ಮ ಕೊಡಗು ತಂಡದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭ ಮಾತನಾಡಿದ ನಮ್ಮ ಕೊಡಗು ತಂಡದ ಅಧ್ಯಕ್ಷ ನೌಶಾದ್ ಜನ್ನತ್, ಕಾವೇರಿ ತಾಲೂಕಿಗಾಗಿ ಆಗ್ರಹಿಸಿ ಎಲ್ಲರೂ ಪಕ್ಷಾತೀತವಾಗಿ ಸಂಘಟಿತರಾಗಿ ಹೋರಾಟ ನಡೆಸಿದ್ದರು. ನಮ್ಮ ಕೊಡಗು ತಂಡದ ವತಿಯಿಂದ ಹೋರಾಟಕ್ಕೆ ಬೆಂಬಲ ನೀಡಿದ್ದೆವು. ಹೋರಾಟ ಸಮಿತಿ ಪ್ರಮುಖರು ಹಗಲು ರಾತ್ರಿಯೆಂದಿಲ್ಲದೇ ಸಂಬಂಧಪಟ್ಟ ಸಚಿವರನ್ನು ಹಾಗೂ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅವರ ಮನವೊಲಿಕೆ ಮಾಡುವದರಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿನ್ನೆಲೆ ನಮ್ಮ ಕೊಡಗು ತಂಡದ ವತಿಯಿಂದ ಕಾವೇರಿ ತಾಲೂಕು ಹೋರಾಟ ಸಮಿತಿ ಪ್ರಮುಖರನ್ನು ಸನ್ಮಾನಿಸಲಾಯಿತು ಎಂದರು. ಕಾವೇರಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ನಾವುಗಳು ಕೊನೆಗೂ ಕಾವೇರಿ ತಾಲೂಕನ್ನು ಪಡೆದಿದ್ದೇವೆ. ಇದಕ್ಕಾಗಿ ತಳದಿಂದ ತುದಿವರೆಗೆ ಹೋರಾಟಗಳಲ್ಲಿ ತೊಡಗಿಸಿ ಕೊಂಡು ಕಾವೇರಿ ತಾಲೂಕನ್ನು ಪಡೆಯಲು ಕಾರಣರಾದರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

ಈ ಸಂದರ್ಭ ನಮ್ಮಕೊಡಗು ತಂಡದ ನಿರ್ದೇಶಕರಾದ ಜಿನ್ಹಾಸುದ್ದೀನ್, ಬಿ.ಬಿ.ಲೋಹಿತ್, ಬಶೀರ್, ಕಾರ್ತಿಕ್, ಮುಂತಾದವರು ಹಾಜರಿದ್ದರು.