ಮಡಿಕೇರಿ, ಫೆ. 27: ಸರ್ಕಾರದ ವಿಶೇಷ ಯೋಜನೆಯಡಿ ಜಿಲ್ಲೆಯ ವಿಶೇಷಚೇತನ ವಿದ್ಯಾರ್ಥಿಗಳಿಗೆ ವಿಶೇಷ ಪ್ರಾಧಾನ್ಯತೆ ನೀಡುವ ನಿಟ್ಟಿನಲ್ಲಿ ಸರ್ಕಾರವು ಸಾಕಷ್ಟು ಯೋಜನೆ ಹಾಗೂ ಅನುದಾನ ನೀಡಿದೆ. ವಿಶೇಷಚೇತನರ ಕ್ಷೇಮಾಭಿವೃದ್ಧಿಗೆ ಅಧಿಕಾರಿಗಳು ಮತ್ತು ಪೋಷಕರು ವಿಶೇಷ ಜವಾಬ್ದಾರಿಯನ್ನು ತೆಗೆದುಕೊಳ್ಳುವದು ಅಗತ್ಯ ಎಂದು ಅಂಗವಿಕಲರ ರಾಜ್ಯ ಆಯುಕ್ತ ವಿ.ಎಸ್. ಬಸವರಾಜ್ ಸೂಚನೆ ನೀಡಿದ್ದಾರೆ.
ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ವಿಶೇಷಚೇತನರ ಕ್ಷೇಮಾಭಿವೃದ್ಧಿ ಬಗ್ಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ವಿಶೇಷಚೇತನರಿಗೆ ವಿಶೇಷ ಪ್ರಾಧಾನ್ಯತೆ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರವು ಪ್ರತಿಯೊಂದು ಇಲಾಖೆಗಳಿಗೂ ಕೂಡ ಅನುದಾನ ಬಿಡುಗಡೆ ಮಾಡಿದೆ. ಅನುದಾನವು ಫಲಾನುಭವಿಗಳಿಗೆ ನೇರವಾಗಿ ವಿತರಣೆಯಾಗಬೇಕು. ವಿವಿಧ ಇಲಾಖೆಯ ಅಧಿಕಾರಿಗಳು ವಿಶೇಷಚೇತನರ ಸಂಬಂಧಪಟ್ಟ ಸಮಸ್ಯೆಗಳಿಗೆ ಮಾನವೀಯ ದೃಷ್ಟಿಯಿಂದ ಸ್ಪಂದಿಸುವ ಮೂಲಕ ನೆರವಾಗಬೇಕು ಎಂದು ಆದೇಶಿಸಿದರು.
ಸಮಾಜ ಕಲ್ಯಾಣ ಇಲಾಖೆಯಿಂದ ವಿಶೇಷಚೇತನರ ಕ್ಷೇಮಾಭಿವೃದ್ಧಿಗೆ ವಿಶೇಷವಾದ “ವಿಕಲ ಸ್ನೇಹಿ ಶೌಚಾಲಯ ನಿರ್ಮಾಣ”, ವಿಶೇಷವಾದ ವಿದ್ಯಾರ್ಥಿ ನಿಲಯಗಳ ಸ್ಥಾಪನೆ, ಶಿಕ್ಷಣ ಇಲಾಖೆಯ ಮೂಲಕ ಶಾಲೆಯಿಂದ ಹೊರಗುಳಿದ 18 ವರ್ಷದ ಒಳಗಿನ ಮಕ್ಕಳ ಬಗ್ಗೆ ಕಾಳಜಿ ವಹಿಸಿ “ಮರಳಿ ಶಾಲೆಗೆ” ಶಿಬಿರ ಏರ್ಪಡಿಸುವಂತಾಗಬೇಕು ಎಂದರು.
ವಿಕಲಚೇತನ ವಿದ್ಯಾರ್ಥಿಗಳಿಗೆ ಮೊರಾರ್ಜಿ ದೇಸಾಯಿ ಶಾಲೆಗಳಿಗೆ ನೇರ ಆಯ್ಕೆ ಮಾಡಿಕೊಳ್ಳುವದು, ವಿವಿಧ ಯೋಜನೆಗಳನ್ನು ಅನುಷ್ಠಾನ ಗೊಳಿಸಿದೆ. 624 ವಿಕಲಚೇತನ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸು ನೀಡಿದೆ. ಪ್ರವಾಸೋದ್ಯಮ ಇಲಾಖೆ ಯಿಂದ ಜಿಲ್ಲೆಗೆ ಬರುವ ವಿಶೇಷಚೇತನ ಪ್ರವಾಸಿಗರಿಗೆ ವಿಶೇಷವಾದ ಕೊಠಡಿಯ ನಿರ್ಮಾಣ ಮತ್ತು ಹಲವು ಯೋಜನೆಗಳು ಅನುಷ್ಠಾನಗೊಳಿಸುತ್ತಿದೆ. ಮಹಿಳಾ ಮತ್ತು ಮಕ್ಕಳ ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವಿಶೇಷಚೇತನ ಕುಟುಂಬಕ್ಕೆ “ಸ್ವಯಂ ಉದ್ಯೋಗ-ಹಸು, ಕೋಳಿ ಸಾಕಣೆ” ಸೌಲಭ್ಯವನ್ನು ಕಲ್ಪಿಸಿದೆ. ಆರೋಗ್ಯ ಇಲಾಖೆಯಿಂದ ವಿಶೇಷ ಚೇತನ ಮಕ್ಕಳಿಗೆ ಉಚಿತ ಚಿಕಿತ್ಸೆಯನ್ನು ನೀಡುವದು, ಪ್ರತಿ ಅಂಗನವಾಡಿ ಕೇಂದ್ರಗಳಿಗೆ ಭೇಟಿ ಮಾಡಿ ಮಾಹಿತಿ ಪಡೆಯುವದು ಶಿಬಿರಗಳನ್ನು ನಡೆಸುತ್ತಿದ್ದೇವೆ ಎಂದು ನೆನಪಿಸಿದರು.
ಬ್ಯಾಂಕ್‍ಗಳಲ್ಲಿ ಕೆಲವೊಂದು ಯೋಜನೆಗಳಡಿ ವಿಶೇಷಚೇತನರು ಸಾಲಕ್ಕೆ ಅರ್ಜಿ ಸಲ್ಲಿಸಿದರೆ, ಯಾವದೇ ಸೂಕ್ತ ಕಾರಣ ನೀಡದೇ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ ಎಂದು ವಿಶೇಷಚೇತನರು ಸಭೆಯ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು ಅರ್ಜಿ ಸಲ್ಲಿಸಿದ ಎಲ್ಲರಿಗೂ ಸಾಲ ನೀಡಬೇಕು ಎಂದು ಹೇಳಲಾಗುವದಿಲ್ಲ. ಸೂಕ್ತ ದಾಖಲಾತಿಗಳಿದ್ದರೇ ಅಂತಹವರಿಗೆ ಸಾಲ ನೀಡಿ ಹಾಗೂ ಯಾವ ಕಾರಣಕ್ಕಾಗಿ ಅವರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂಬುದರ ಬಗ್ಗೆ ಬ್ಯಾಂಕ್‍ಗಳು ಮಾಹಿತಿ ನೀಡಬೇಕು ಎಂದು ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.
ವಿಕಲಚೇತನರಿಗೆ ಇರುವ ಸೌಲಭ್ಯಗಳ ಬಗ್ಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಿಡಿಒ ಸೌಲಭ್ಯಗಳನ್ನು ಒದಗಿಸುವಲ್ಲಿ ಕಾರ್ಯನಿರ್ವಹಿಸು ವಂತೆ ಸೂಚಿಸಲು ಇಒಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ವೈದ್ಯಕೀಯ ಸೇವೆ
ಆಸ್ಪತ್ರೆಗಳಲ್ಲಿ ವಿಶೇಷಚೇತನರಿಗೆ ಸಮರ್ಪಕವಾಗಿ ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸಬೇಕು. ಕಿವುಡರು, ಮೂಗರು ಹೀಗೆ ಹಲವು ರೀತಿಯ ವಿಶೇಷಚೇತನರನ್ನು ಗುರ್ತಿಸಿ ಸಮರ್ಪಕ ಆರೋಗ್ಯ ಸೇವೆ ಒದಗಿಸಬೇಕು ಎಂದು ರಾಜ್ಯ ಆಯುಕ್ತರು ನಿರ್ದೇಶನ ನೀಡಿದರು.
ನಗರದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಿಶೇಷÀಚೇತನ ಇಲಾಖೆ ಹಾಗೂ ಶಿಕ್ಷಣ ಇಲಾಖೆಗಳು ಸಮನ್ವಯತೆ ಸಾಧಿಸಿ ವಿಶೇಷಚೇತನರಿಗೆ ಶಿಕ್ಷಣ ಆರೋಗ್ಯ ಕಲ್ಪಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮೋಹನ್, ಜಿಲ್ಲಾ ಸರ್ಜನ್ ಡಾ. ಕಸ್ತೂರಿ, ಡಾ. ವಿನಯ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಚ್ಚಾಡೊ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಅರುಂಧತಿ, ವಿಶೇಷಚೇತನರ ಇಲಾಖೆ ಅಧಿಕಾರಿ ದೇವರಾಜು ಇತರರು ಇದ್ದರು.