ಮಡಿಕೇರಿ, ಫೆ. 27: ಸಿದ್ದಾಪುರದಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿನಿಯ ಕೊಲೆ ಪ್ರಕರಣವನ್ನು ನೆಪ ಮಾಡಿಕೊಂಡು ಹೊರ ರಾಜ್ಯಗಳ ಕಾರ್ಮಿಕರ ವಿರುದ್ಧ ಕೊಡಗಿನ ಜನರನ್ನು ಎತ್ತಿ ಕಟ್ಟುವದು ಸರಿಯಾದ ಕ್ರಮವಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿರುವ ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಡಾ.ಇ.ರ. ದುರ್ಗಾಪ್ರಸಾದ್, ವಿದ್ಯಾರ್ಥಿನಿಯನ್ನು ಕೊಲೆಗೈದವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹೊರ ರಾಜ್ಯದವರಿಂದ ಮಾತ್ರ ದಲಿತ ಯುವತಿಯರು ಅಥವಾ ಮಹಿಳೆÉಯರ ಮೇಲೆ ದೌರ್ಜನ್ಯ ಮತ್ತು ಅತ್ಯಾಚಾರ ನಡೆಯುತ್ತಿಲ್ಲ. ಜಿಲ್ಲೆಯ ದುರುಳರಿಂದಲೂ ಇಂತಹ ಹೇಯ ಕೃತ್ಯಗಳು ನಡೆದ ಸಾಕಷ್ಟು ಉದಾಹರಣೆಗಳಿವೆ ಎಂದು ಆರೋಪಿಸಿದರು. ಹೊರ ರಾಜ್ಯಗಳ ಕಾರ್ಮಿಕರು ಮಾತ್ರ ದುಷ್ಟರು ಎಂದು ಪ್ರತಿಬಿಂಬಿಸುತ್ತಿರುವದು ಖಂಡನೀಯವೆಂದರು.

ವಿದ್ಯಾರ್ಥಿನಿ ಪ್ರಕರಣವನ್ನು ಆಧರಿಸಿ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ಕಾರ್ಮಿಕರ ವಿರುದ್ಧ ಆರಂಭದಲ್ಲಿ ಧ್ವನಿ ಎತ್ತಲಾಯಿತು. ಇದೀಗ ಹೊರ ರಾಜ್ಯಗಳ ಎಲ್ಲಾ ಕಾರ್ಮಿಕರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸುತ್ತಿರುವದು ಸರಿಯಲ್ಲ. ಮುಂದಿನ ದಿನಗಳಲ್ಲಿ ಹೊರ ಜಿಲ್ಲೆಯ ಜನರನ್ನೂ ಹೊರ ದಬ್ಬಬೇಕೆನ್ನುವ ಒತ್ತಾಯ ಕೇಳಿ ಬಂದರೆ ಆಶ್ಚರ್ಯ ಪಡಬೇಕಾಗಿಲ್ಲ. ಕೊಡವ ಭಾಷಿಕರು ಹಾಗೂ ಯರವ, ಕುರುಬ ಮೊದಲಾದ ಬುಡಕಟ್ಟು ವಿಭಾಗದವರು ಮಾತ್ರವೇ ಕೊಡಗಿನ ಮೂಲ ನಿವಾಸಿಗಳಾಗಿದ್ದು, ಉಳಿದವರು ಇತರ ಜಿಲ್ಲೆಯವರು ಎನ್ನುವ ಭಾವನೆಯೂ ಮೂಡದಿರಲು ಸಾಧ್ಯವಿಲ್ಲವೆಂದರು.

ಕಡಿಮೆ ಕೂಲಿ ಪಡೆಯುತ್ತಾರೆ ಎನ್ನುವ ಕಾರಣಕ್ಕಾಗಿ ಹೊರ ರಾಜ್ಯದ ಕಾರ್ಮಿಕರನ್ನು ಸ್ಥಳೀಯ ತೋಟ ಮಾಲೀಕರು ನಿಯೋಜಿಸಿಕೊಳ್ಳುತ್ತಿದ್ದಾರೆಯೇ ಹೊರತು, ಯಾರೂ ಸ್ವ ಇಚ್ಛೆಯಿಂದ ಜಿಲ್ಲೆಗೆ ಬಂದಿಲ್ಲ. ಶ್ರಮಿಕ ವರ್ಗಕ್ಕೆ ಅಗತ್ಯ ಸೌಲಭ್ಯ ನೀಡದೆ ದುಡಿಸಿಕೊಳ್ಳುತ್ತಿರುವ ಮಂದಿ ಒಂದೆಡೆಯಾದರೆ, ಮತ್ತೊಂದೆಡೆ, ಅಕ್ರಮ ವಲಸಿಗರು ಎಂದು ಹಣೆ ಪಟ್ಟಿ ಕಟ್ಟುವ ಗುಂಪಿನಿಂದಲೂ ದೌರ್ಜನ್ಯ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಒಬ್ಬ ವ್ಯಕ್ತಿಯಿಂದ ಆದ ಘಟನೆಗಳಿಗೆ ಇಡೀ ಸಮುದಾಯವನ್ನು ಗುರಿ ಮಾಡಿ, ಸಮಾಜವನ್ನು ಒಡೆಯುವ ಪ್ರಯತ್ನದಲ್ಲಿ ತೊಡಗಿರುವ ಶಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಈ ಬಗ್ಗೆ ಜನ ಜಾಗೃತರಾಗಬೇಕು ಎಂದು ಕರೆ ನೀಡಿದ ದುರ್ಗಾಪ್ರಸಾದ್, ಮೃತ ವಿದ್ಯಾರ್ಥಿನಿಯ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಿಪಿಐಎಂ ಜಿಲ್ಲಾ ಸಂಘÀಟನಾ ಸಂಚಾಲಕ ಎ.ಸಿ. ಸಾಬು ಉಪಸ್ಥಿತರಿದ್ದರು.