ನವದೆಹಲಿ, ಫೆ. 27: ಪಾಕಿಸ್ತಾನದ ವೈಮಾನಿಕ ದಾಳಿಯನ್ನು ಭಾರತ ವಿಫಲಗೊಳಿಸಿದೆ. ಭಾರತದ ಗಡಿ ಉಲ್ಲಂಘಿಸಿದ್ದ ಪಾಕಿಸ್ತಾನದ ಎಫ್-16 ಯುದ್ಧ ವಿಮಾನವೊಂದನ್ನು ಭಾರತೀಯ ವಾಯುಪಡೆ ಹೊಡೆದುರುಳಿಸಿದೆ ಎಂದು ಬುಧವಾರ ವಿದೇಶಾಂಗ ಸಚಿವಾಲಯ ಖಚಿತಪಡಿಸಿದೆ.ಉಭಯ ದೇಶಗಳ ನಡುವೆ ಯುದ್ಧ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ -21 ವಿಮಾನ ಪತನವಾಗಿದ್ದು, ಓರ್ವ ಪೈಲಟ್ ನಾಪತ್ತೆಯಾಗಿದ್ದಾರೆ. ಆ ಪೈಲಟ್ ನಮ್ಮ ವಶದಲ್ಲಿದ್ದಾರೆ ಎಂದು ಪಾಕ್ ಹೇಳಿದೆ. ಆದರೆ ಈ ಬಗ್ಗೆ ಪರಿಶೀಲಿಸಬೇಕಿದೆ ಎಂದರು. ಪಾಕಿಸ್ತಾನ ಇಂದು ನಮ್ಮನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಅದಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ಅವರು ತಿಳಿಸಿದ್ದಾರೆ.

ಜೈಶ್ -ಇ- ಮೊಹಮದ್ ಉಗ್ರ ಸಂಘಟನೆ ನೆಲೆಗಳ ಮೇಲೆ ವೈಮಾನಿಕ ದಾಳಿ ಹಿನ್ನೆಲೆಯಲ್ಲಿ, ಇಂದು ಬೆಳಗ್ಗೆ ಪಾಕ್ ವಾಯುಪಡೆ ಭಾರತದ ಗಡಿ ಉಲ್ಲಂಘಿಸಿದ್ದು, ಭಾರತೀಯ ವಾಯುಪಡೆಯ ಗಸ್ತು ವಿಮಾನಗಳು ಹಿಮ್ಮೆಟ್ಟಿಸಿವೆ ಎಂದು ಅವರು ಹೇಳಿದರು. ಪಾಕಿಸ್ತಾನದ ಯುದ್ಧ ವಿಮಾನಗಳನ್ನು ಹಿಮ್ಮೆಟ್ಟಿಸಲು ಭಾರತದ 6 ‘ಮಿಗ್- 21’ ವಿಮಾನ ತೆರಳಿದ್ದವು. ಆ ಪೈಕಿ ಒಂದು ವಿಮಾನ ಶತ್ರು ದಾಳಿಗೆ ಪತನಗೊಂಡಿತು.

ಪಾಕ್‍ನಿಂದ ವೀಡಿಯೋ ಬಿಡುಗಡೆ

ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ಕಾರ್ಮೋಡ ಪಸರಿಸಿರುವ ಬೆನ್ನಲ್ಲೇ ಪಾಕಿಸ್ತಾನ ಭಾರತೀಯ ಪೈಲಟ್‍ರನ್ನು ಬಂಧಿಸಿರುವ ವೀಡಿಯೋವನ್ನು ಬಿಡುಗಡೆ ಮಾಡಿದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ

(ಮೊದಲ ಪುಟದಿಂದ) ಸೇನೆಯ ಜೆಟ್ ವಿಮಾನ ಪತನಗೊಂಡಿದ್ದು ಇದರಲ್ಲಿದ್ದ ಪೈಲಟ್‍ಗಳ ಪೈಕಿ ಒಬ್ಬರನ್ನು ಬಂಧಿಸಿದ್ದೇವೆ. ಇನ್ನೊಬ್ಬ ಪೈಲಟ್‍ನನ್ನು ಆಸ್ಪತ್ರೆಯಲ್ಲಿ ದಾಖಲಿಸಿರುವದಾಗಿ ಪಾಕಿಸ್ತಾನ ಹೇಳಿದೆ.

ಆದರೆ, ಬಳಿಕ ಪಾಕ್ ತನ್ನ ಮಾತು ಬದಲಿಸಿದೆ. ಇಬ್ಬರಲ್ಲಿ ಒಬ್ಬ ಪೈಲಟ್‍ನನ್ನು ನಮ್ಮ ವಶಕ್ಕೆ ಪಡೆದಿದ್ದೇವೆ ಎಂದು ಪಾಕಿಸ್ತಾನ ಮಿಲಿಟರಿ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್ ಸ್ಪಷ್ಟನೆ ನೀಡಿದ್ದಾರೆ. ಭಾರತದ ವಿಂಗ್ ಕಮಾಂಡರ್ ಅಭಿನಂದನ್ ನಮ್ಮ ವಶದಲ್ಲಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಇದಕ್ಕೂ ಮೊದಲು ಸುದ್ದಿಗೋಷ್ಠಿಯಲ್ಲಿ ಅವರು ಇಬ್ಬರು ಪೈಲಟ್‍ಗಳನ್ನು ವಶಕ್ಕೆ ಪಡೆದಿದ್ದಾಗಿ ಹೇಳಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ವಾಯುಪಡೆಯ ಮಿಗ್-21 ಯುದ್ಧ ವಿಮಾನ ಬುಧವಾರ ಪತನಗೊಂಡ ನಂತರ ನಾಪತ್ತೆಯಾಗಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರು, ಪರಂ ವಿಶಿಷ್ಟ ಸೇವಾ ಪದಕ ವಿಜೇತ ಏರ್ ಮಾರ್ಷೆಲ್ ಸಿಂಹಕುಟ್ಟಿ ವರ್ತಮಾನ್ ಅವರ ಪುತ್ರ ಎಂದು ತಿಳಿದು ಬಂದಿದೆ.

ಪಾಕಿಸ್ತಾನ ಬಿಡುಗಡೆ ಮಾಡಿರುವ ವೀಡಿಯೋದಲ್ಲಿ “ನಾನು ವಿಂಗ್ ಕಮಾಂಡರ್ ಅಭಿನಂದನ್, ನಾನು ಐಎಎಫ್ ಅಧಿಕಾರಿ, ನನ್ನ ಸರ್ವಿಸ್ ನಂಬರ್ 27981.” ಹೀಗೆ ಪೈಲಟ್ ಒಬ್ಬರು ಹೇಳಿರುವ ವೀಡಿಯೋವನ್ನು ಪಾಕಿಸ್ತಾನ ಸೇನೆ ಬಿಡುಗಡೆ ಮಾಡಿದೆ. ಈ ವೀಡಿಯೋದಲ್ಲಿ ಪಾಕ್, ಇದೊಂದು ಅಭೂತಪೂರ್ವ ಯಶಸ್ಸು ಎಂದು ಹೇಳಿಕೊಂಡಿದೆ. ರಕ್ತಸಿಕ್ತ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಂಧಿಸಿ ಕಾರಿನಲ್ಲಿ ಕರೆದೊಯ್ಯುವ ದೃಶ್ಯ ಇದರಲ್ಲಿದೆ.

ಇದು ಎಷ್ಟು ನಿಜ ಎಂಬುದು ಇನ್ನೂ ತಿಳಿದುಬಂದಿಲ್ಲ.

ಇಂದು ಬೆಳಿಗ್ಗೆ ಪಾಕಿಸ್ತಾನದ ಮೂರು ಯುದ್ಧ ವಿಮಾನಗಳು ಜಮ್ಮು ಮತ್ತು ಕಾಶ್ಮೀರದ ನೌಶೇರ್ ವಲಯದಲ್ಲಿ ಗಡಿ ಉಲ್ಲಂಘನೆ ಮಾಡಿವೆÉ. ಪಾಕಿಸ್ತಾನದ ಯುದ್ಧ ವಿಮಾನಗಳು ದಾಳಿ ನಡೆಸುವ ಉದ್ದೇಶದಿಂದ ಭಾರತ ಪ್ರವೇಶಿಸಿದ್ದವು. ಪಾಕಿಸ್ತಾನದ ಯುದ್ಧ ವಿಮಾನಗಳು ಪೂಂಚ್ ಹಾಗೂ ರಚೌರಿಯಲ್ಲಿ ಭಾರತೀಯ ಸೇನೆಯ ಪೋಸ್ಟ್‍ಗಳ ಮೇಲೆ ಬಾಂಬ್ ದಾಳಿ ನಡೆಸಿವೆÉ ಎಂದು ವರದಿಯಾಗಿದೆ.

ಪಾಕ್‍ನ 5 ಪೋಸ್ಟ್‍ಗಳು ಧ್ವಂಸ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ವಾಯುಸೇನೆ ಉಗ್ರರ ಅಡಗುದಾಣಗಳ ಮೇಲೆ ದಾಳಿ ಮಾಡಿ ಸುರಕ್ಷಿತವಾಗಿ ವಾಪಸ್ ಆದ ಬೆನ್ನಲ್ಲೇ ಇಂಡೋ-ಪಾಕ್ ಗಡಿಯಲ್ಲಿ ಪಾಕಿಸ್ತಾನ ಸೇನೆ ಹತಾಶೆಯಿಂದ ನಿನ್ನೆ ರಾತ್ರಿ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆ ಮಾಡಿದೆ.

ಗಡಿ ನಿಯಂತ್ರಣ ರೇಖೆಯುದ್ಧಕ್ಕೂ ಪಾಕಿಸ್ತಾನ ನಿರಂತರವಾಗಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು ಕದನ ವಿರಾಮ ಉಲ್ಲಂಘನೆ ಮಾಡಿದೆÉ. ಸೇನಾ ಮೂಲಗಳ ಪ್ರಕಾರ ಎಲ್ ಒಸಿಯ ಸುಮಾರು 50 ಕಡೆಗಳಲ್ಲಿ ಪಾಕ್ ಸೇನೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಭಾರತೀಯ ಪಡೆಗಳ ಮೇಲೆ ನಿರಂತರ ಗುಂಡಿನ ದಾಳಿ ಮಾಡಿದೆ. ಅಲ್ಲದೆ ನಿರಂತರವಾಗಿ ಶೆಲ್ ದಾಳಿ ಕೂಡ ಮಾಡಿದ್ದು, ಪಾಕಿಸ್ತಾನ ಸೇನೆಯ ಉದ್ಧಟತನಕ್ಕೆ ಭಾರತ ಕೂಡ ಅದೇ ಧಾಟಿಯಲ್ಲಿ ಉತ್ತರ ನೀಡಿದೆ. ಪಾಕ್ ಸೇನೆಯ ಮೇಲೆ ನಿರಂತರ ಗುಂಡಿನ ದಾಳಿ ನಡೆಸಿದೆ. ಘಟನೆಯಲ್ಲಿ ಭಾರತೀಯ ಸೇನೆಯ ಐವರು ಸೈನಿಕರು ಗಾಯಗೊಂಡಿದ್ದಾರೆ. ಗಾಯಾಳು ಸೈನಿಕರನ್ನು ಸಮೀಪದ ಸೇನಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ದಾಳಿ ನಡೆಸುತ್ತಿದ್ದ ಪಾಕ್ ಸೇನೆಯ 5 ಪೋಸ್ಟ್ ಗಳ ಮೇಲೂ ಭಾರತೀಯ ಯೋಧರು ದಾಳಿ ಮಾಡಿ ಧ್ವಂಸ ಮಾಡಿದ್ದಾರೆ. ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿಯೂ ಭದ್ರತಾ ಪಡೆಗಳು ಮತ್ತು ಉಗ್ರಗಾಮಿಗಳ ನಡುವೆ ಭಾರೀ ಗುಂಡಿನ ಚಕಮಕಿ ಬುಧವಾರ ಮುಂಜಾನೆ ನಡೆದಿದ್ದು ಓರ್ವ ಉಗ್ರನನ್ನು ಸೇನೆ ಹೊಡೆದುರುಳಿಸಿದೆ.

ಶೋಪಿಯಾನ್ ಜಿಲ್ಲೆಯ ಮಾಮೆಂಡರ್ ಗ್ರಾಮದಲ್ಲಿ ಭದ್ರತಾ ಪಡೆ ಪೊಲೀಸರು ಸುತ್ತುವರಿದು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಇಲ್ಲಿ ಉಗ್ರರು ಅವಿತಿರುವ ಬಗ್ಗೆ ನಿನ್ನೆಯೇ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಮತ್ತಿಬ್ಬರು ಉಗ್ರರು ಅಡಗಿ ಕುಳಿತಿರುವ ಶಂಕೆಯಿದೆ.

ಉಗ್ರರು ಅಡಗಿ ಕುಳಿತಿದ್ದ ಅಡಗುದಾಣಗಳ ಸುತ್ತ ಪ್ರದೇಶವನ್ನು ಭದ್ರತಾ ಪಡೆ ಪೊಲೀಸರು ಸುತ್ತುವರಿದಾಗ ಪೊಲೀಸರೆಡೆಗೆ ಗುಂಡಿನ ಮಳೆಗೈಯಲಾರಂಭಿಸಿದರು. ಇದಕ್ಕೆ ಯೋಧರು ಪ್ರತಿ ದಾಳಿ ನಡೆಸಿದ್ದರಲ್ಲಿ ಓರ್ವ ಉಗ್ರ ಹತನಾಗಿದ್ದಾನೆ.

ಯುದ್ಧ ವಾತಾವರಣ

ಪಾಕಿಸ್ತಾನದ ಉಗ್ರ ಕ್ಯಾಂಪ್‍ಗಳ ಮೇಲೆ ಭಾರತ ವೈಮಾನಿಕ ದಾಳಿ ನಡೆಸಿದ ಬೆನ್ನಲ್ಲೇ ಹಲವು ಬೆಳವಣಿಗೆಗಳು ನಡೆದಿದ್ದು, ಗಡಿಯಲ್ಲಿ ಯುದ್ಧದ ವಾತಾವರಣ ಸ್ಪಷ್ಟವಾಗಿ ಗೋಚರಿಸುತ್ತಿದೆ.

ವೈಮಾನಿಕ ದಾಳಿಯಾದ ಮರುದಿನವೇ ಭಾರತದ ವಾಯುಗಡಿ ಉಲ್ಲಂಘಿಸಿದ್ದ ಪಾಕಿಸ್ತಾನ ಭಾರತದ ಸೇನೆಯನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲು ಯತ್ನಿಸಿದೆ.

ಗಡಿ ನಿಯಂತ್ರಣ ರೇಖೆಯನ್ನು ದಾಟಿ ಬಂದಿದ್ದ ಭಾರತದ ವಾಯುಪಡೆಯ ಎರಡು ಯುದ್ಧ ವಿಮಾನಗಳನ್ನು ಪಾಕಿಸ್ತಾನದ ವಾಯುಸೇನೆ ಹೊಡೆದುರುಳಿಸಿದೆ ಎಂದು ಪಾಕಿಸ್ತಾನದ ಸೇನಾ ವಕ್ತಾರ ಮೇಜರ್ ಜನರಲ್ ಅಸಿಫ್ ಗಪೂರ್ ಟ್ವೀಟ್ ಮಾಡಿದ್ದಾರೆ. ಒಂದು ವಿಮಾನ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಬಿದ್ದಿದ್ದು ಇನ್ನೊಂದು ಭಾರತದ ಕಾಶ್ಮೀರದ ಭಾಗದಲ್ಲಿ ಪತನಗೊಂಡಿದೆ ಎಂದಿದ್ದಾರೆ. ಆದರೆ, ಒಂದು ವಿಮಾನ ಪತನಗೊಂಡಿರುವದನ್ನು ಭಾರತ ಖಚಿತಪಡಿಸಿದೆ.

ಪ್ರಧಾನಿ ಕಳವಳ

ಪಾಕಿಸ್ತಾನ ಭಾರತೀಯ ವಾಯುಗಡಿ ದಾಟಿ ವೈಮಾನಿಕ ದಾಳಿ ನಡೆಸಿರುವ ಬೆಳವಣಿಗೆ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ತಾವು ಭಾಗವಹಿಸಿದ್ದ ಕಾರ್ಯಕ್ರಮದಿಂದ ಅರ್ಧದಲ್ಲೇ ನಿರ್ಗಮಿಸಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಗೃಹ ಸಚಿವ ರಾಜನಾಥ್ ಸಿಂಗ್ ನಿವಾಸದಲ್ಲಿ ಉನ್ನತಮಟ್ಟದ ತುರ್ತು ಸಭೆಯಲ್ಲಿ ಭಾಗಿಯಾದರು. ಈ ವೇಳೆ ಪಾಕಿಸ್ತಾನದ ಕೃತ್ಯದ ಬಗ್ಗೆ ಪ್ರಧಾನಿ ಮೋದಿ ಮಾಹಿತಿ ಪಡೆದಿದ್ದು, ಎಫ್-16 ನ್ನು ಹೊಡೆದುರುಳಿಸಿರುವ ಭಾರತೀಯ ಸೇನಾಪಡೆಗಳನ್ನು ಅಭಿನಂದಿಸಿದ್ದಾರೆ. ಆದರೆ, ಪೈಲಟ್ ಓರ್ವ ನಾಪತ್ತೆಯಾದ ಘಟನೆಗೆ ಕಳವಳ ವ್ಯಕ್ತಪಡಿಸಿದ ಅವರು ಈ ಬಗ್ಗೆ ಮುಂದಿನ ಕ್ರವiದ ಕುರಿತು ಚರ್ಚಿಸಿದರು.

ಇದೇ ವೇಳೆ ಜಮ್ಮು-ಕಾಶ್ಮೀರದ ವಿಮಾನ ನಿಲ್ದಾಣಗಳು, ಪಠಾಣ್ ಕೋಟ್‍ನ ವಾಯುನೆಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ರಜೆಯಲ್ಲಿರುವ ಯೋಧರಿಗೆ ಕೂಡಲೇ ಮರಳಿ ಬರುವಂತೆ ರಕ್ಷಣಾ ಇಲಾಖೆ ಸೂಚನೆ ನೀಡಿದೆ. ಇನ್ನು ಯಾವುದೇ ಕ್ಷಣದಲ್ಲಿ ‘ಟೇಕ್ ಆಫ್’ ಆಗಲು ಸಿದ್ಧವಾಗಿರುವಂತೆ ವಾಯುಪಡೆಗೆ ಸೂಚನೆ ನೀಡಲಾಗಿದ್ದು, ಯಲಹಂಕಾ ವಾಯುನೆಲೆಯಿಂದ ಯುದ್ಧವಿಮಾನಗಳನ್ನು ಗಡಿ ಭಾಗಕ್ಕೆ ರವಾನೆ ಮಾಡಲು ಸೂಚನೆ ನೀಡಲಾಗಿದೆ.

ಪಾಕಿಸ್ತಾನ ಪ್ರತೀಕಾರದ ಸೇಡು ತೀರಿಸಿಕೊಳ್ಳಲು ಮುಂದಾದರೆ ಅದಕ್ಕೆ ಸೂಕ್ತ ಕ್ರಮ ಕೈಗೊಂಡಿರುವ ಭಾರತೀಯ ವಾಯುಸೇನೆ ಸಂಭಾವ್ಯ ದಾಳಿಗೆ ಪ್ರತ್ಯುತ್ತರವಾಗಿ ಯುದ್ಧ ವಿಮಾನಗಳು ರನ್ ವೇಯಲ್ಲಿ ಸಜ್ಜಾಗಿ ನಿಂತಿವೆ.

ಜಮ್ಮು-ಕಾಶ್ಮೀರದ ಗಡಿಯಲ್ಲಿ ನಾಗರಿಕರ ರಕ್ಷಣೆಗೆ ಕ್ರಮ ಕೈಗೊಳ್ಳಲು ಗೃಹ ಸಚಿವ ರಾಜನಾಥ್ ಸಿಂಗ್ ಸಿಆರ್‍ಪಿಎಫ್ ಗೆ ಸೂಚನೆ ನೀಡಿದ್ದು, ಆಸ್ಪತ್ರೆಗಳಲ್ಲಿ ಔಷಧಗಳ ಸಂಗ್ರಹಣೆಗೆ ಸೂಚನೆ ನೀಡಲಾಗಿದೆ.

ವಾಯು ದಾಳಿ ಬಳಿಕ ಸೇನೆಯ ಮೂರು ದಳಗಳ ಮುಖ್ಯಸ್ಥರೊಂದಿಗೆ ಪ್ರಧಾನಿ ಮೋದಿ ಚರ್ಚೆ ನಡೆಸಿದ್ದರು. ಈ ಚರ್ಚೆ ಮುಕ್ತಾಯದ ಬೆನ್ನಲ್ಲೇ ಭಾರತದಾದ್ಯಂತ ಹೈಅಲರ್ಟ್ ಘೋಷಣೆ ಮಾಡಲಾಗಿದ್ದು, ಗಡಿಯುದ್ಧಕ್ಕೂ ಕಟ್ಟೆಚ್ಚರದಿಂದ ಇರುವಂತೆ ಸೇನಾಪಡೆಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ ಸೇನೆಯ ಮೂರು ದಳಗಳು ಯಾವುದೇ ಪರಿಸ್ಥಿತಿ ಎದುರಿಸಲು ಸರ್ವಸನ್ನದ್ಧವಾಗಿರುವಂತೆ ಸೂಚನೆ ನೀಡಲಾಗಿದೆ.

ಇದೇ ಕಾರಣಕ್ಕೆ ಭಾರತೀಯ ನೌಕಾಪಡೆ ತಮ್ಮ ತರಬೇತಿ ಮೊಟಕುಗೊಳಿಸಿ ಹಿಂದೂ ಮಹಾಸಾಗರದಲ್ಲಿ ಗಸ್ತು ತಿರುಗುತ್ತಿದ್ದು, ನೌಕಾಪಡೆಯ ಅತ್ಯಾಧುನಿಕ ಯುದ್ಧ ನೌಕೆಗಳನ್ನು ಗಸ್ತು ಕಾರ್ಯಕ್ಕಾಗಿ ಸಮುದ್ರಕ್ಕೆ ಇಳಿಸಲಾಗಿದೆ. ಅಂತೆಯೇ ವಾಯುಪಡೆಯ ಎಲ್ಲ ವಾಯುನೆಲೆಗಳೂ ಸರ್ವ ಸನ್ನದ್ಧವಾಗಿರುವಂತೆ ಸೂಚನೆ ನೀಡಲಾಗಿದ್ದು ಎಲ್ಲ ವಿಮಾನಗಳು ಯಾವದೇ ಪರಿಸ್ಥಿತಿ ಎದುರಿಸಲು ಸಿದ್ಧವಾಗಿರುವಂತೆ ಸೂಚನೆ ನೀಡಲಾಗಿದೆ.

ಭಾರತದಿಂದ ಸಮನ್ಸ್

ಇಂದು ಬೆಳಿಗ್ಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನಕ್ಕೆ ಸೇರಿದ್ದ ಎಫ್ -16 ಯುದ್ಧ ವಿಮಾನವನ್ನು ಭಾರತೀಯ ವಾಯುಪಡೆ ಹೊಡೆದುರುಳಿಸಿದ ಬಳಿಕ ಭಾರತ ಹಾಗೂ ಪಾಕಿಸ್ತಾನಗಳು ತಮ್ಮ ತಮ್ಮ ರಾಯಭಾರಿಗಳಿಗೆ ಕದನ ವಿರಾಮ ಉಲ್ಲಂಘನೆ ಕುರಿತು ವಿವರಿಸಿವೆÉ. ಪಾಕಿಸ್ತಾನದಲ್ಲಿನ ಭಾರತ ಹೈಕಮಿಷನರ್ ಗೌರವ್ ಅಹ್ಲುವಾಲಿಯಾ ಅವರಿಗೆ ಸಮನ್ಸ್ ನೀಡಿದ್ದು ಭಾರತದ ಕದನ ವಿರಾಮ ಉಲ್ಲಂಘನೆ ಕುರಿತು ತಿಳಿಸಿದೆ.

ದಕ್ಷಿಣ ಏಷ್ಯಾ ಮತ್ತು ಸಾರ್ಕ್ ಡೈರಕ್ಟರ್ ಜನರಲ್ ಆಗಿರುವ ಡಾ. ಮೊಹಮ್ಮದ್ ಫೈಸಲ್ ಭಾರತೀಯ ರಾಜತಾಂತ್ರಿಕರಿಗೆ ಸಮನ್ಸ್ ನೀಡಿ “2003 ರ ಕದನ ವಿರಾಮ ನಿಯಮವನ್ನು ಗೌರವಿಸಿ, ಭಾರತದ ಪಡೆಗಳು ಗಡಿ ನಿಯಂತ್ರಣ ರೇಖೆಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಬೇಕು” ಎಂದು ಹೇಳಿದ್ದಾರೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದಿಂz. ನೀಡಿದ ಹೇಳಿಕೆ ತಿಳಿಸಿದೆ.

ಪಾಕಿಸ್ತಾನದ ಡೆಪ್ಯುಟಿ ಹೈ ಕಮಿಷನರ್ ಸೈಯದ್ ಹೈದರ್ ಷಾ ಅವರಿಗೆ ಭಾರತ ವಿದೇಶಾಂಗ ಸಚಿವಾಲಯವು ಸಮನ್ಸ್ ನೀಡಿದ್ದು ಪಾಕಿಸ್ತಾನವು ನಾಪತ್ತೆಯಾಗಿರುವ ಪೈಲಟ್ ಕುರಿತು ಮಾಹಿತಿ ನೀಡಬೇಕೆಂದು ಕೇಳಿದೆ. ಅಲ್ಲದೆ ಪುಲ್ವಾಮಾ ದಾಳಿ ಕುರಿತು ಪಾಕ್ ನಿಲುವನ್ನು ಸ್ಪಷ್ಟಪಡಿಸಬೇಕು ಎಂದೂ ಕೇಳಿದೆ.

ವಿಮಾನಯಾನ ಸ್ಥಗಿತ

ಇಂದು ಬೆಳಿಗ್ಗೆ ಪಾಕ್ ವಿಮಾನ ದಾಳಿ ಬಳಿಕ ಭಾರತದ ಸೂಕ್ಷ್ಮ ವಿಮಾನ ನಿಲ್ದಾಣಗಳಲ್ಲಿ ವಿಮಾನ ಯಾನವನ್ನು ಸ್ಥಗಿತಗೊಳಿಸಲಾಗಿತ್ತು.

ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧಭೀತಿ ನಿರ್ಮಾಣವಾಗಿದ್ದ ಹಿನ್ನೆಲೆಯಲ್ಲಿ ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಸ್ಥಗಿತವಾಗಿದ್ದ ನಾಗರಿಕ ವಿಮಾನಯಾನವನ್ನು ಸಂಜೆ ವೇಳೆ ಪುನರಾರಂಭಿಸಲಾಯಿತು.

ವಿಮಾನದ ಮಾರ್ಗದಲ್ಲಿ ಸಂಭಾವ್ಯ ಅಪಾಯಗÀಳ ಮುನ್ನೆಚ್ಚರಿಕೆಗಾಗಿ ‘ಎಮರ್ಜೆನ್ಸಿ ಕರೆ ನೀಡಿಕೆ’ (ನೋಟಮ್) ಅನ್ನು ಹಿಂಪಡೆಯಲಾಗಿದೆ.

ಬೆಳಿಗ್ಗೆಯಿಂದ ಮುಚ್ಚಿದ್ದ ದೇಶದ ಒಂಬತ್ತು ವಿಮಾನ ನಿಲ್ದಾಣಗಳಲ್ಲಿ ನಾಗರಿಕ ವಿಮಾನಯಾನ ಮತ್ತೆ ಪುನರಾರಂಭವಾಗಿದೆ ಎಂದು ಡಿಜಿಸಿಎ ಹೇಳಿದೆ.

ಆದರೆ, ಪಾಕಿಸ್ತಾನದ್ಲ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಇಂದು ವಿಮಾನಯಾನವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು.

ಕೈಕೊಟ್ಟ ಚೀನಾ

ಪಾಕಿಸ್ತಾನವನ್ನು ಸಾರ್ವಕಾಲಿಕ ಪರಮಾಪ್ತ ರಾಷ್ಟ್ರ ಎಂದು ಗುರುತಿಸಿರುವ ಚೀನಾ, ಈಗ ತನ್ನ ಮಿತ್ರನಿಗೆ ಕೈಕೊಟ್ಟಿದೆ.

ಭಾರತ ಪಾಕ್ ಉಗ್ರರ ಕ್ಯಾಂಪ್ ಮೇಲೆ ಬಾಂಬ್ ದಾಳಿ ನಡೆಸಿದ್ದರ ಬಗ್ಗೆ ಪಾಕಿಸ್ತಾನವನ್ನು ಬೆಂಬಲಿಸದೇ ತಟಸ್ಥವಾಗಿ ಉಳಿದು ಶಾಕ್ ನೀಡಿದ್ದ ಚೀನಾ, ಈಗ ಪಾಕ್‍ಗೆ ಮತ್ತೊಂದು ಶಾಕ್ ನೀಡಿದ್ದು, ಮೊದಲು ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಎಚ್ಚರಿಕೆ ನೀಡಿದೆ. ಸುಷ್ಮಾ ಸ್ವರಾಜ್ ಚೀನಾ ಭೇಟಿಯ ಸಂದರ್ಭ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದ್ದರು, ಈಗ ಚೀನಾ ಸಹ ಪಾಕಿಸ್ತಾನ ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಎಚ್ಚರಿಕೆ ನೀಡಿ ಭಾರತದ ಹೇಳಿಕೆಗೆ ಧ್ವನಿಗೂಡಿಸಿರುವುದು ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ತೀವ್ರ ಹಿನ್ನಡೆಯುಂಟಾಗುವದಕ್ಕೆ ಕಾರಣವಾಗಿದ್ದು, ಈಗ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನ ಅಕ್ಷರಶಃ ಏಕಾಂಗಿಯಾಗಿದೆ.

ಅಲ್ಲದೆ ಅಮೇರಿಕಾವು ಹೇಳಿಕೆ ನೀಡಿ ಪುಲ್ವಾಮಾ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನಕ್ಕೆ ನುಗ್ಗಿ ಉಗ್ರರ ಕ್ಯಾಂಪ್‍ಗಳ ಮೇಲೆ ಏರ್ ಸ್ಟ್ರೈಕ್ ಮಾಡಿದ್ದು ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಮಿಲಿಟರಿ ಕಾರ್ಯಾಚರಣೆ ನಡೆಸಿದರೆ ಹುಷಾರ್ ಎಂದು ಅಮೆರಿಕ ಎಚ್ಚರಿಕೆ ಕೊಟ್ಟಿದೆ.

ಭಾರತದ ವಾಯುಪಡೆ ಪಾಕಿಸ್ತಾನದ ಬಾಲಕೋಟ್‍ನಲ್ಲಿ ಉಗ್ರರ ಕ್ಯಾಂಪ್‍ಗಳ ಮೇಲೆ ಮಾತ್ರ ದಾಳಿ ಮಾಡಿದೆ. ಪಾಕ್ ಸೇನೆ ಹಾಗೂ ಸಾರ್ವಜನಿಕರ ಮೇಲೆ ಯಾವದೇ ದಾಳಿಗಳಾಗಿಲ್ಲ. ಹೀಗಾಗಿ ಭಾರತ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸಿದರೆ ನಿಮ್ಮ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಅಮೆರಿಕಾದ ಕಾರ್ಯದರ್ಶಿ ಮೈಕ್ ಪೊಂಪೆಯೊ ಎಚ್ಚರಿಸಿದ್ದಾರೆ.

ಅಲ್ಲದೆ, ಭಯೋತ್ಪಾದನೆ ವಿರುದ್ಧ ಈಗಲಾದರೂ ಪರಿಣಾಮಕಾರಿ ಕ್ರಮ ಕೈಗೊಳ್ಳಿ ಅದು ನಿಮಗೆ ಒಳ್ಳೆಯದು, ಇಲ್ಲದಿದ್ದರೆ ಭವಿಷ್ಯದಲ್ಲಿ ಹೆಚ್ಚಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ

ಇಮ್ರಾನ್ ಶಾಂತಿ ಮಾತು

ಇಷ್ಟೆಲ್ಲ ಬೆಳವಣಿಗೆ ಬಳಿಕ ಪಾಕ್ ಪ್ರಧಾನಿ ಇದೀಗ ಶಾಂತಿಯ ಮಾತನಾಡಿದ್ದಾರೆ. ಒಂದು ವೇಳೆ ಯುದ್ಧ ಆರಂಭವಾದರೆ ಅದು ಹೇಗೆ ಅಂತ್ಯವಾಗುತ್ತದೆ ಎಂಬುದು ಯಾರಿಗೂ ಗೊತ್ತಾಗುವದಿಲ್ಲ. ಅದರ ನಿಯಂತ್ರಣ ನನ್ನ ಕೈಯಲ್ಲೂ ಇರುವುದಿಲ್ಲ ಮತ್ತು ಮೋದಿ ಕೈಯಲ್ಲೂ ಇರುವುದಿಲ್ಲ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್‍ಖಾನ್ ಬುಧವಾರ ಹೇಳಿದ್ದಾರೆ.

ಭಯೋತ್ಪಾದನೆ ಬಗ್ಗೆ ನಿಮಗೆ ಏನಾದರೂ ಮಾತನಾಡಬೇಕಿದ್ದರೆ ನಾವು ಸಿದ್ಧರಿದ್ದೇವೆ. ನಮ್ಮ ನಡುವಿನ ಸದುದ್ದೇಶಕ್ಕೆ ಜಯವಾಗಬೇಕು. ನಾವಿಬ್ಬರೂ ಕುಳಿತು ಚರ್ಚೆ ಮಾಡಬೇಕಿದೆ ಎಂದಿದ್ದಾರೆ.

ಈ ಜಗತ್ತಿನ ಎಲ್ಲ ಯುದ್ಧಗಳು ನಡೆದಿರುವದೂ ತಪ್ಪು ಲೆಕ್ಕಾಚಾರಗಳಿಂದಲೇ. ಇದುವರೆಗೆ ಯುದ್ಧ ಆರಂಭಿಸಿದವರಿಗೆಲ್ಲ ತಾವು ಆರಂಭಿಸಿದ ಯುದ್ಧ ಎಲ್ಲಿ ಅಂತ್ಯವಾಗುತ್ತದೆ ಎಂಬುದೇ ತಿಳಿದಿರಲಿಲ್ಲ. ಹೀಗಾಗಿ ನಾನು ಭಾರತಕ್ಕೆ ಹೇಳುವದೇನೆಂದರೆ, ನೀವು ಶಸ್ತ್ರಾಸ್ತ್ರಗಳೊಂದಿಗೆ ಬಂದರೆ ನಮ್ಮ ಬಳಿಯೂ ಆಯುಧಗಳಿವೆ. ನಾವು ತಪ್ಪು ಲೆಕ್ಕಾಚಾರಗಳಿಗೆ ಜಾಗ ಮಾಡಿಕೊಡಬೇಕೆ? ಎಂದು ಪಾಕ್ ಪ್ರಧಾನಿ ಪ್ರಶ್ನಿಸಿದ್ದಾರೆ.

ಭಾರತದಿಂದ ಪ್ರಚೋದನೆ ಬಂದಾಗ ಪಾಕಿಸ್ತಾನವು ಭಾರತೀಯ ಯುದ್ಧವಿಮಾನವನ್ನು ಹೊಡೆದುರುಳಿಸಿತು. ಆದರೆ, ನಾವು ಯಾವದೇ ವ್ಯಕ್ತಿ ಹಾಗೂ ಸೇನಾ ಪಡೆಗಳಿಗೆ ಹಾನಿಯಾಗದಂತೆ ಕಾರ್ಯಾಚರಣೆ ನಡೆಸಿದೆವು. ನಮ್ಮನ್ನು ಪ್ರಚೋದಿಸಿದಾಗ ಸರಿಯಾಗಿ ತಿರುಗೇಟು ಕೊಡುವಷ್ಟು ಸಾಮಥ್ರ್ಯ ನಮ್ಮಲ್ಲಿದೆ ಎಂದು ನಾವು ತೋರಿಸಬೇಕಿತ್ತು ಅಷ್ಟೇ.&hellidiv; ನೀವು ನಮ್ಮ ದೇಶದೊಳಗೆ ಪ್ರವೇಶ ಮಾಡಿದಾಗ ನಾವೂ ಕೂಡ ನಿಮ್ಮ ಗಡಿಯೊಳಗೆ ಬರಬಲ್ಲೆವು. ಆದರೆ, ಇಷ್ಟಾದ ನಂತರ ನಮ್ಮ ಮುಂದಿನ ದಾರಿಗಳೇನು? ನಾವು ಕುಳಿತು ಮಾತುಕತೆ ಮೂಲಕ ನಮ್ಮ ಭಿನ್ನಾಭಿಪ್ರಾಯಗಳಿಗೆ ಉತ್ತರ ಕಂಡುಕೊಳ್ಳಬೇಕು ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

ರಾಹುಲ್ ಹೇಳಿಕೆ

ಈ ನಡುವೆ ಎಲ್ಲ ವಿರೋಧ ಪಕ್ಷಗಳು ಇಂದು ತುರ್ತು ಸಭೆ ನಡೆಸಿದ್ದು ವಿರೋಧ ಪಕ್ಷಗಳ ಪರ ಹೇಳಿಕೆ ನೀಡಿದ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಭಾರತೀಯ ಪೈಲಟ್ ಓರ್ವರು ಪಾಕ್‍ನ ಬಂದಿಯಾಗಿರುವದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿ ಅವರನ್ನು ಶೀಘ್ರ ಕರೆ ತರುವ ಪ್ರಯತ್ನವಾಗಬೇಕೆಂದರು. ಪ್ರಧಾನಿಯವರು ಇಂದು ಸರ್ವ ಪಕ್ಷಗಳ ಸಭೆ ಕರೆಯದುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ಬಿ.ಜೆ.ಪಿ ಯು ರಾಷ್ಟ್ರೀಯ ಭದ್ರತಾ ವಿಚಾರವನ್ನು ರಾಜಕೀಯಗೊಳಿಸದಿರಲಿ ಎಂದು ಸಲಹೆಯಿತ್ತರು.