ಮಡಿಕೇರಿ, ಫೆ. 27: ಜಿಲ್ಲೆಯ ಜನತೆಯ ಬಹು ನಿರೀಕ್ಷಿತ ಮೈಸೂರು-ಕುಶಾಲನಗರ ರೈಲ್ವೇ ಮಾರ್ಗಕ್ಕೆ ಕೊನೆಗೂ ಕೇಂದ್ರ ರೈಲ್ವೇ ಸಚಿವಾಲಯ ಅಂತಿಮ ಅಂಕಿತ ಹಾಕಿದ್ದು, ಅಂತೂ... ಇಂತೂ ರೈಲ್ವೇ ಭೂಪಟದಲ್ಲಿ ಪುಟ್ಟ ಕೊಡಗಿನ ‘ಟ್ರ್ಯಾಕ್’ ಮೂಡಿ ಬರಲಿದೆ.ಪ್ರವಾಸೀ ತಾಣವಾಗಿರುವ ಕೊಡಗು ಜಿಲ್ಲೆಗೆ, ವ್ಯಾಪಾರೋದ್ಯಮ ದೃಷ್ಟಿಯಿಂದಲೂ ರೈಲ್ವೇ ಸಂಪರ್ಕ ಬೇಕೆಂಬ ಕೂಗು ದಶಕಗಳಿಂದಲೂ ಮೊಳಗುತ್ತಲೇ ಇತ್ತು. ಈ ಸಂಬಂಧ ಈ ಹಿಂದೆ ಬಜೆಟ್‍ಗಳಲ್ಲಿ ಪ್ರಸ್ತಾಪವಾಗಿದ್ದರೂ ಪರ-ವಿರೋಧದ ನಡುವೆ ನೆನೆಗುದಿಗೆ ಬಿದ್ದಿತ್ತು. ಸರ್ವೆ ಕಾರ್ಯ ನಡೆದಿದ್ದರೂ ಇದುವರೆಗೂ ಅಂತಿಮ ನಾಮಾಂಕಿತ ಮುದ್ರೆ ಬಿದ್ದಿರಲಿಲ್ಲ.ಇದೀಗ ಕೇಂದ್ರ ರೈಲ್ವೇ ಸಚಿವಾಲಯ ಮೈಸೂರಿನಿಂದ (ಬೆಳಗೊಳ), ಕುಶಾಲನಗರದವರೆಗೆ 87 ಕಿ.ಮೀ. ಅಂತರದ ನೂತನ ರೈಲ್ವೇ ಮಾರ್ಗಕ್ಕೆ ಅನುಮೋದನೆ ನೀಡಿದೆ. ಎಲ್ಲ ರೀತಿಯ ಖರ್ಚು ವೆಚ್ಚವನ್ನೊಳ ಗೊಂಡು ರೂ. 1,854.62 ಕೋಟಿ ಮೊತ್ತದ ಹೊಸ ರೈಲ್ವೇ ಯೋಜನೆಗೆ ಅನುಮೋದನೆ ನೀಡಲಾಗಿದೆ. ಈ ಬಗ್ಗೆ ರೈಲ್ವೇ ಖಾತೆಯ ನಿರ್ದೇಶಕ ಧನಂಜಯ ಸಿಂಗ್ ಅಧಿಕೃತ ಆದೇಶ ಹೊರಡಿಸಿದ್ದಾರೆ.