ಸಿದ್ದಾಪುರ, ಫೆ. 27: ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಯ ಹುಂಡಿಯ ಶಾದಿ ಮಹಲ್ ಬಳಿಯಲ್ಲಿ ಜಿ.ಪಂ. ಅನುದಾನದಲ್ಲಿ ಕುಡಿಯುವ ನೀರಿನ ಟ್ಯಾಂಕ್ ಹಾಗೂ ರಸ್ತೆ ಕಾಮಗಾರಿಗೆ ತಾ.ಪಂ. ಮಾಜಿ ಸದಸ್ಯ ಸಿ.ಎ. ಹಂಸ ಭೂಮಿಪೂಜೆ ನೆರವೇರಿಸಿದರು.

ಜಿ.ಪಂ. ಸದಸ್ಯೆ ಲೀಲಾವತಿ ಅವರ ಅನುದಾನದಲ್ಲಿ ರೂ. 16 ಲಕ್ಷದ ಟ್ಯಾಂಕ್ ಹಾಗೂ ರೂ. 2 ಲಕ್ಷ ವೆಚ್ಚದಲ್ಲಿ ಹುಂಡಿ ಶಾಲೆಯ ಬಳಿಯಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಸಿ.ಎ. ಹಂಸ, ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಈ ಭಾಗದ ನಿವಾಸಿಗಳು ಜಿ.ಪಂ. ಸದಸ್ಯರಾದ ಲೀಲಾವತಿ ಅವರ ಬಳಿ ಮನವಿ ಮಾಡಿಕೊಂಡಿದ್ದರು. ತ್ವರಿತವಾಗಿ ಸ್ಪಂದಿಸಿರುವ ಲೀಲಾವತಿ ಅವರು ತಮ್ಮ ಅನುದಾನದಲ್ಲಿ ಕುಡಿಯುವ ನೀರಿಗೆ ಹಣವನ್ನು ಮೀಸಲಿಟ್ಟಿದ್ದಾರೆ ಎಂದರು.

ಈ ಸಂದರ್ಭ ಗ್ರಾ.ಪಂ. ಸದಸ್ಯ ನಿಯಾಸ್, ಮಸೀದಿ ಸಮಿತಿಯ ಅಧ್ಯಕ್ಷ ಮಹಮ್ಮದ್ ಹಾಜಿ, ಕಾಂಗ್ರೆಸ್ ಮುಖಂಡ ಸುರೇಶ್ ಸೋಮಯ್ಯ, ಹೆಚ್.ಸಿ. ಸಣ್ಣಯ್ಯ, ಯೋಗೇಶ್, ಸ್ಥಳೀಯರಾದ ಉಮ್ಮರ್, ಟಿ.ಪಿ. ಅಬುಬಕ್ಕರ್ ಸೇರಿದಂತೆ ಇತರರು ಹಾಜರಿದ್ದರು.