ಗೋಣಿಕೊಪ್ಪಲು, ಫೆ. 27: ಬಂಡೀಪುರದ ಅರಣ್ಯದಲ್ಲಿ ಮುಂದುವರೆದಿರುವ ಬೆಂಕಿ ನರ್ತನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ತಗುಲಿ ನೂರಾರು ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗುತ್ತಿವೆ.
ಸಾಕಷ್ಟು ವನ್ಯ ಮೃಗಗಳು, ಜೀವಚರಗಳು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗುತ್ತಿದೆ. ಇನ್ನೂ ಕೂಡ ಬೆಂಕಿ ಹರಡುವ ಸಾಧ್ಯತೆ ಇರುವದರಿಂದ ಅರಣ್ಯ ಇಲಾಖೆಯು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಆಗ್ರಹಿಸಿದ್ದಾರೆ.
ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಲ್ಲಿ ಸಾರ್ವಜನಿಕರು ತಕ್ಷಣವೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸುವ ಮೂಲಕ ಅರಣ್ಯ ನಾಶವನ್ನು ತಡೆಯುವಲ್ಲಿ ಮುತುವರ್ಜಿ ವಹಿಸಬೇಕು. ಬೆಂಕಿ ಸಂಭವಿಸಿದ ಸಂದರ್ಭ ಇಲಾಖೆಯ ಅಧಿಕಾರಿಗಳು ರೈತ ಸಂಘದ ಪದಾಧಿಕಾರಿಗಳನ್ನು ಹಾಗೂ ಸದಸ್ಯರನ್ನು ಸಂಪರ್ಕಿಸಿ ಬೆಂಕಿ ಕೆಡಿಸುವ ಕೆಲಸಕ್ಕೆ ಸಹಕಾರ ಪಡೆಯಬಹುದೆಂದು ಮನು ಸೋಮಯ್ಯ ತಿಳಿಸಿದ್ದಾರೆ.