ತಿತಿಮತಿ ಶಾಲಾ ಶತಮಾನೋತ್ಸವಕ್ಕೆ ತೆರೆ

ಗೋಣಿಕೊಪ್ಪ ವರದಿ, ಫೆ. 26: ಹಳೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಪ್ರೇಮಿಗಳ ಸಮಾಗಮಗೊಳ್ಳುವ ಮೂಲಕ ತಿತಿಮತಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಶತಮಾನೋತ್ಸವ ಆಚರಿಸಲಾಯಿತು. ಹಿರಿಯ ಶಿಕ್ಷಕರಿಗೆ ಸನ್ಮಾನ, ವಿದ್ಯಾರ್ಥಿಗಳ ಸಾಂಸ್ಕøತಿಕ ಕಾರ್ಯಕ್ರಮ, ಶಾಲೆ ಆರಂಭಕ್ಕೆ ಅಡಿಪಾಯ ಹಾಕಿದ ಹಿರಿಯ ಚೇತನಗಳನ್ನು ನೆನೆಸಿಕೊಳ್ಳಲಾಯಿತು. ಶತಮಾನೋತ್ಸವದ ಕೊನೆಯ ದಿನದಂದು ಶಾಲೆಯಲ್ಲಿ ವಿದ್ಯಾದಾನ ಮಾಡಿ ನಿವೃತ್ತರಾದ ಸುಮಾರು 49 ಶಿಕ್ಷಕರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಬೆಳೆದಿರುವ ಸಾಧಕ ಹಳೆಯ ವಿದ್ಯಾರ್ಥಿಗಳಾದ ಅಂತರಾಷ್ಟ್ರೀಯ ಕ್ರೀಡಾಪಟು ಪಾರುವಂಡ ಸಿ. ಸುಗುಣ ಪೊನ್ನಪ್ಪ, ಇಸ್ರೋ ವಿಜ್ಞಾನಿ ಅಶೋಕ್, ಅರಣ್ಯ ಇಲಾಖೆಯಲ್ಲಿ ಡಿಎಫ್‍ಒ ಆಗಿರುವ ಕರುಣಾಕರ್, ವೈದ್ಯ ಡಾ. ಸಣ್ಣುವಂಡ ಕಾವೇರಪ್ಪ, ದಾನಿ ಬಾಚಮಾಡ ಚೇತನ್, ಮಾಜಿ ರಾಷ್ಟ್ರೀಯ ಆಟಗಾರ ಚೆಪ್ಪುಡೀರ ಕಾರ್ಯಪ್ಪ, ನೌಕಾಪಡೆ (ನಿ) ಕಮಾಂಡೊ ಸಿ.ಎಂ. ಬೆಳ್ಯಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯೆಯಾಗಿರುವ ಪಿ.ಆರ್. ಪಂಕಜ, ಮಾಜಿ ಸಚಿವೆ ಸುಮಾವಸಂತ್, ತಿತಿಮತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಇ. ಶಿವಕುಮಾರ್ ಹೀಗೆ ನೂರಾರು ಸಾಧಕರನ್ನು ಸನ್ಮಾನಿಸಲಾಯಿತು ಪೋಷಕರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ಶತಮಾನೋತ್ಸವ ಪ್ರಯುಕ್ತ ರೂ. 7.50 ಲಕ್ಷ ವೆಚ್ಚದಲ್ಲಿ ದಾನಿ ಬಾಚಮಾಡ ಚೇತನ್ ನಿರ್ಮಿಸಿರುವ ತೆರೆದ ಸಭಾಂಗಣವನ್ನು ಕ್ಯಾಲಿಪೊರ್ನಿಯಾದಲ್ಲಿರುವ ಬಾಚಮಾಡ ಚೇತನ್ ಉದ್ಘಾಟಿಸಿದರು. ಈ ಸಂದರ್ಭ ಶಾಲಾ ವಿದ್ಯಾರ್ಥಿಗಳು ಪುತ್ತರಿ ಕೋಲಾಟ್ ಪ್ರದರ್ಶನದ ಮೂಲಕ ಸಾಂಸ್ಕøತಿಕ ಮೆರಗು ನೀಡಿದರು. ಆರಂಭದಲ್ಲಿ ಚಂಡೆ ವಾದ್ಯ, ಪೂರ್ಣಕುಂಭದ ಮೂಲಕ ಮೆರವಣಿಗೆ ಬಂದು ಶತಮಾನೋತ್ಸವಕ್ಕೆ ವಿಶೇಷ ಮೆರಗು ನೀಡಲಾಯಿತು.

ಸಭಾ ಕಾರ್ಯಕ್ರಮ

ಶತಮಾನೋತ್ಸವ ಸ್ಮರಣ ಸಂಚಿಕೆ ಶತದರ್ಶಿನಿಯನ್ನು ಶಾಸಕ ಕೆ.ಜಿ. ಬೋಪಯ್ಯ ಬಿಡುಗಡೆಗೊಳಿಸಿ ಮಾತನಾಡಿ, ಶತಮಾನೋತ್ಸವದ ಆಚರಣೆ ಮೂಲಕ ಸರ್ಕಾರಿ ಶಾಲೆಯ ಅಭಿವೃದ್ಧಿಯನ್ನು ಉತ್ತಮ ಸಂದೇಶದ ಮೂಲಕ ಜನರಿಗೆ ತಿಳಿಸುವ ಪ್ರಯತ್ನವಾಗಿದೆ. ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದ ಸಾಕಷ್ಟು ಸಾಧಕರು ದೇಶದಲ್ಲಿದ್ದಾರೆ. ಇದೇ ಶಾಲೆಯಲ್ಲಿ ಶಿಕ್ಷಣ ಪಡೆದ ಇಬ್ಬರು ಮಂತ್ರಿಗಳಾಗಿರುವದು ಹೆಮ್ಮೆಯ ವಿಚಾರ, ಸುಮಾವಸಂತ್ ಹಾಗೂ ಎ.ಎಂ. ಬೆಳ್ಯಪ್ಪ ಇಲ್ಲಿ ಶಿಕ್ಷಣ ಪಡೆದು ಮಂತ್ರಿಗಳಾಗಿರುವದು ಸಾಧನೆಯಾಗಿದೆ. ಸರ್ಕಾರಿ ಶಾಲೆ ಎಂಬ ಕೀಳರಿಮೆ ಬಿಟ್ಟು ಶಿಕ್ಷಣ ಪಡೆಯಲು ಮುಂದಾಗಬೇಕಿದೆ. ಆಚರಣೆಯಿಂದ ಶಾಲೆ ನಿರ್ಮಾಣಕ್ಕೆ ಕಾರಣಕರ್ತರಾದ ಹಿರಿಯ ಚೇತನಗಳಿಗೆ ಗೌರವ ನೀಡಿದಂತಾಗಿದೆ ಎಂದರು.

ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷೆ, ಹಳೆಯ ವಿದ್ಯಾರ್ಥಿ, ಮಾಜಿ ಸಚಿವೆ ಸುಮಾವಸಂತ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿನ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಗಳಿಂದ ಸಾಕಷ್ಟು ಅನುಕೂಲವಿದೆ. ಇದನ್ನು ಅರಿತು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯುವಂತಾಗಬೇಕು. ಹಿಂದೆ ವಿದ್ಯಾರ್ಥಿಗಳಲ್ಲಿ ನಿರ್ದಿಷ್ಟ ಗುರಿ ಸಾಧಿಸಲು ಶಿಕ್ಷಕರುಗಳು ಗುರುವಿನಂತೆ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಇಂದು ಇಂತಹ ವ್ಯವಸ್ಥೆಗಳು ಬದಲಾಗಿದೆ. ಪರಿಣಾಮ ದುಶ್ಚಟಗಳಿಗೆ ವಿದ್ಯಾರ್ಥಿಗಳು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ ಎಂದರು.

ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೂ ಉತ್ತಮ ಸವಲತ್ತು ಸಿಗಬೇಕು ಎಂದು ಸರ್ಕಾರ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಇದರಿಂದ ಹೆಚ್ಚು ಪ್ರಯೋಜನವಾಗುತ್ತಿದೆ. ಇದನ್ನು ಅರಿತುಕೊಂಡು ಯಾರೂ ಕೂಡ ಶಿಕ್ಷಣ ವಂಚಿತರಾಗದೆ ಶಿಕ್ಷಣವನ್ನು ಮೊಟಕುಗೊಳಿಸುವ ಕಾರ್ಯಕ್ಕೆ ಮುಂದಾಗಬಾರದು ಎಂದರು. ಹಳೆಯ ವಿದ್ಯಾರ್ಥಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಪಿ.ಆರ್. ಪಂಕಜ ಮಾತನಾಡಿ, ಗಿರಿಜನರಿಗೆ ಹೆಚ್ಚು ಪ್ರಯೋಜನವಾಗಲಿ ಎಂದು ಆರಂಭಿಸಿದ ಶಾಲೆ ಇಂದು ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವದು ಹೆಮ್ಮೆಯ ವಿಚಾರ, ನಾನು ಸೇರಿದಂತೆ ಸಾವಿರಾರು ಜನರಿಗೆ ವಿದ್ಯಾದಾನ ಮಾಡಿರುವದರಿಂದ ನಾವು ಸಮಾಜದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲಬೀಳಗಿ ಮಾತನಾಡಿ, ವೀರಾಜಪೇಟೆ ತಾಲೂಕಿನಲ್ಲಿ ಸರ್ಕಾರಿ ಶಾಲೆ ಶತವರ್ಷ ಪೂರೈಸಿರುವದು ಹೆಮ್ಮೆಯ ವಿಚಾರ ಎಂದರು. ಹಿರಿಯ ಶಿಕ್ಷಕ ಇಟ್ಟೀರ ಮಂದಣ್ಣ ಸನ್ಮಾನ ಸ್ವೀಕರಿಸಿ ಮಾತನಾಡಿ, ಇಂಗ್ಲೀಷ್ ಶಾಲೆಯಿಂದ ಸರ್ಕಾರಿ ಶಾಲೆ ಅವನತಿಯತ್ತ ಬಂದಿದೆ. ಸರ್ಕಾರ ಖಾಸಗಿ ಶಾಲೆಗಳ ಸಂಖ್ಯೆಗಳನ್ನು ನಿಯಂತ್ರಿಸಬೇಕಿದೆ ಎಂದರು.

ಈ ಸಂದರ್ಭ ಶತಮಾನೋತ್ಸವ ಸಮಿತಿ ಉಪಾಧ್ಯಕ್ಷ ಶಿವಕುಮಾರ್, ಖಜಾಂಚಿ ಫಿಲೋಮಿನಾ, ಪದಾಧಿಕಾರಿಗಳಾದ ಮನು ನಂಜಪ್ಪ, ಮಹೇಶ್, ಕೃಷ್ಣ, ಮಂಜುಳಮ್ಮ ಗಣೇಶ್, ಅನೂಪ್, ಮುಖ್ಯಶಿಕ್ಷಕಿ ಹೆಚ್.ಎಂ. ಪಾರ್ವತಿ ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷ ಚೆಪ್ಪುಡೀರ ರಾಮಕೃಷ್ಣ ಸ್ವಾಗತಿಸಿದರು. ಎಂ.ಎನ್. ರಾಣಿ ಶಾಲಾ ವರದಿ ವಾಚಿಸಿದರು. ಮಹೇಶ್ ಧರ್ಮಲಿಂಗ ಪಿಳೈ, ಜೈಕುಮಾರ್, ಮಣಿ, ನವ್ಯ ಕಾರ್ಯಕ್ರಮ ನಿರೂಪಿಸಿದರು.

-ಸುದ್ದಿಪುತ್ರ