ಆಲೂರು ಸಿದ್ದಾಪುರ,ಫೆ. 26: ಸಮಿಪದ ಚಿಕ್ಕಕಣಗಾಲು, ದೊಡ್ಡ ಕಣಗಾಲು, ಹಿತ್ತಲಗದ್ದೆ ಮುಂತಾದ ಗ್ರಾಮಗಳಲ್ಲಿ ಕೆಲವು ದಿನಗಳಿಂದ ಕಾಡಾನೆಗಳ ಉಪಟಳ ಹೆಚ್ಚಾಗುತ್ತಿದ್ದು, ರಾತ್ರಿ ವೇಳೆಯಲ್ಲಿ ಕಾಡಾನೆಗಳು ಗ್ರಾಮದೊಳಗೆ ಬಂದು ರೈತರ ಕಾಫಿ ತೋಟ, ಬಾಳೆ, ಅಡಿಕೆ ತೋಟಗಳಿಗೆ ನುಗ್ಗಿ ಫಸಲು ನಷ್ಟಪಡಿಸುತ್ತಿವೆ, ಹೀಗಿದ್ದರೂ ಸಂಬಂಧಪಟ್ಟ ಅರಣ್ಯ ಇಲಾಖೆ ಕಾಡಾನೆಗಳನ್ನು ಕಾಡಿಗೆ ಓಡಿಸಲು ಕ್ರಮಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕೆಲವು ದಿನಗಳಿಂದ ಹಿರಿಕರ ಮೀಸಲು ಅರಣ್ಯದಿಂದ ಸುಮಾರು 3 ಕಾಡಾನೆಗಳ ಹಿಂಡು ಹಿತ್ತಲಗದ್ದೆ, ಚಿಕ್ಕ ಕಣಗಾಲು, ಕಂತೆ ಬಸವನಹಳ್ಳಿ, ದೊಡ್ಡ ಕಣಗಾಲು ಮುಂತಾದ ಗ್ರಾಮಗಳಲ್ಲಿ ಸಂಚರಿಸುತ್ತಿವೆ, ಈ ಕಾಡಾನೆಗಳು ರಾತ್ರಿ ರೈತರ ಕಾಫಿತೋಟ, ಬಾಳೆ, ಅಡಿಕೆ ತೋಟಗಳಿಗೆ ನುಗ್ಗಿ ಫಸಲು ನಷ್ಟಗೊಳಿಸುತ್ತಿವೆ.