ಕುಶಾಲನಗರ, ಫೆ. 25: ದೂರೊಂದರ ಹಿನ್ನೆಲೆಯಲ್ಲಿ ಗ್ರಾ.ಪಂ. ಸದಸ್ಯನೊಬ್ಬ ಸೇರಿದಂತೆ ಸಹೋದರರಿಬ್ಬರನ್ನು ಠಾಣೆಗೆ ಕರೆತಂದಾಗ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಜೈಲು ಪಾಲಾದ ಘಟನೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡುಮಂಗಳೂರು ಗ್ರಾಪಂ ಸದಸ್ಯ ಸುರೇಶ್ ಮತ್ತು ಆತನ ಸಹೋದರ ಸ್ವಾಮಿ ಎಂಬವರುಗಳ ಮೇಲೆ ಎರಡು ಪ್ರತ್ಯೇಕ ಮೊಕದ್ದಮೆಗಳು ದಾಖಲಾಗಿದ್ದು ಬಂಧಿಸಲಾಗಿದೆ.
ತಾ.24 ರಂದು ರಾತ್ರಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಸುರೇಶ್ ಮತ್ತು ಸ್ವಾಮಿ ಎಂಬವರನ್ನು ಪೊಲೀಸ್ ಠಾಣೆಗೆ ಕರೆ ತಂದಾಗ ಮದ್ಯದ ಅಮಲಿನಲ್ಲಿದ್ದ ಆರೋಪಿಗಳನ್ನು ಪೊಲೀಸ್ ಜೀಪ್ನಲ್ಲಿ ಕುಶಾಲನಗರ ಸರಕಾರಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಸಂದರ್ಭ ಪೊಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ. ತಾನು ಪಂಚಾಯಿತಿ ಸದಸ್ಯನಾಗಿದ್ದು ತನ್ನನ್ನು ಮೆಡಿಕಲ್ ಚೆಕಪ್ ಮಾಡಿಸಬಾರದು ಎಂದು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿ ನಂತರ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಮಹೇಶ್ ಅವರ ಮೇಲೆ ಗ್ರಾ.ಪಂ. ಸದಸ್ಯ ಸುರೇಶ ಎಂಬಾತ ಹಲ್ಲೆ ನಡೆಸಿ ತಲೆ, ಮೂಗು ಭಾಗಕ್ಕೆ ಗಾಯವಾಗಿದೆ. ತೀವ್ರ ಗಾಯಗಳೊಂದಿಗೆ ಮಹೇಶ್ ಕುಶಾಲನಗರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಕೂಡಲೆ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳನ್ನು ಠಾಣೆಗೆ ಕರೆತಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಮೊಕದ್ದಮೆಗಳನ್ನು ದಾಖಲಿಸಿ ಕ್ರಮಕೈಗೊಂಡಿದ್ದಾರೆ. ಮೊದಲನೇ ಮೊಕದ್ದಮೆ ಪ್ರಕಾರ ಕೂಡುಮಂಗಳೂರಿನ ನಿವಾಸಿ ಕೆ.ಸಿ.ರಮೇಶ್ ಅವರ ದೂರಿನನ್ವಯ ಆರೋಪಿಗಳು ತನ್ನ ಪತ್ನಿ ಮತ್ತು ಕುಟುಂಬ ಸದಸ್ಯರನ್ನು ಅವಾಚ್ಯ ಶಬ್ಧಗಳಿಂದ ಬೈದು ಹಲ್ಲೆ ನಡೆಸಿರುವ ದೂರಿನನ್ವಯ ಪೊಲೀಸ್ ಕಾಯ್ದೆ 323, 354, 504, 506 ಪ್ರಕಾರ ಮೊಕದ್ದಮೆ ದಾಖಲಿಸಲಾಗಿದೆ. ಕರ್ತವ್ಯ ನಿರತ ಪೊಲೀಸರಾದ ಎಚ್.ಎ.ವೆಂಕಟೇಶ್ ಮೇಲೆ ಠಾಣೆ ಮುಂಭಾಗ ಹಲ್ಲೆ ನಡೆಸಿದ ಘಟನೆ ಸಂಬಂಧ ಸುರೇಶ ಮತ್ತು ಸ್ವಾಮಿ ಮೇಲೆ 353, 332, 504, 506 ಕಾಯ್ದೆ ಅನ್ವಯ ಎರಡನೇ ಮೊಕದ್ದಮೆ ದಾಖಲಾಗಿದ್ದು ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.