ಕುಶಾಲನಗರ, ಫೆ. 24: ಜಿಲ್ಲೆಯಲ್ಲಿ ಡೋಂಗಿ ಪರಿಸರವಾದಿಗಳು ಅನಗತ್ಯ ಗೊಂದಲ ಸೃಷ್ಟಿ ಮಾಡುತ್ತಿರುವದು ಸರಿಯಲ್ಲ ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕುಶಾಲನಗರದಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಸಂದರ್ಭ ಮಾತನಾಡಿ, ವಾಸ್ತವಾಂಶ ತಿಳಿದು ಮಾತನಾಡಬೇಕು. ಅನಗತ್ಯವಾಗಿ ಪ್ರಕೃತಿ ವಿಕೋಪವನ್ನು ತಪ್ಪು ಅರ್ಥ ಕಲ್ಪಿಸುವ ರೀತಿಯಲ್ಲಿ ಬಿಂಬಿಸುವ ಮೂಲಕ ನೈಜ ಘಟನೆಯನ್ನು ಮರೆಮಾಚಬಾರದು ಎಂದರು.

ಇದೇ ಸಂದರ್ಭ ಮಾತನಾಡಿದ ಅವರು, ಕೇಂದ್ರ ಸರಕಾರ ಪ್ರಕೃತಿ ವಿಕೋಪಕ್ಕೆ ಒಳಗಾದ ಜನರ ಸಂಕಷ್ಟಗಳ ಪರಿಹಾರಕ್ಕೆ ಅನುದಾನ ಬಿಡುಗಡೆಗೊಳಿಸಿದ್ದರೂ ರಾಜ್ಯ ಸರಕಾರ ಕೇವಲ ರೂ. 85 ಕೋಟಿ ಮಾತ್ರ ಬಿಡುಗಡೆಗೊಳಿಸಿದೆ. ಜಿಲ್ಲೆಯಲ್ಲಿ ಸರ್ವಋತು ರಸ್ತೆ ನಿರ್ಮಾಣಕ್ಕೆ ಸಾವಿರ ಕೋಟಿ ರೂಪಾಯಿಗಳ ಅಗತ್ಯವಿದ್ದು, ತಾ. 28 ರಂದು ಜಿಲ್ಲೆಗೆ ಭೇಟಿ ನೀಡುವ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವದು ಎಂದರು.